ಮಾಗಡಿ: ರಾಮನಗರ-ಮಾಗಡಿ-ಗುಡೇಮಾರನಹಳ್ಳಿ ಮುಖ್ಯರಸ್ತೆ ಮುಖಾಂತರ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ ಅಳವಡಿಸುತ್ತಿರುವ ಕಾವೇರಿ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದ್ದು ರಸ್ತೆ ಕುಸಿಯುವ ಹಂತ ತಲುಪಿದ್ದು, ಕೂಡಲೇ ಸೂಚನಾ ಫಲಕ ಅಳವಡಿಸುವಂತೆ ಸಾರ್ವಜನಿಕರು ಆರೋಪಿಸಿದ್ದಾರೆ

ಮಾಗಡಿ: ರಾಮನಗರ-ಮಾಗಡಿ-ಗುಡೇಮಾರನಹಳ್ಳಿ ಮುಖ್ಯರಸ್ತೆ ಮುಖಾಂತರ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ ಅಳವಡಿಸುತ್ತಿರುವ ಕಾವೇರಿ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದ್ದು ರಸ್ತೆ ಕುಸಿಯುವ ಹಂತ ತಲುಪಿದ್ದು, ಕೂಡಲೇ ಸೂಚನಾ ಫಲಕ ಅಳವಡಿಸುವಂತೆ ಸಾರ್ವಜನಿಕರು ಆರೋಪಿಸಿದ್ದಾರೆ.

ಪಟ್ಟಣದ ಬಾಲಾಜಿ ಚಿತ್ರಮಂದಿರದ ಮುಂಭಾಗದ ರಸ್ತೆಯಲ್ಲಿ ದೊಡ್ಡ ಪೈಪ್‌ಲೈನ್ ಹಾಕಲಾಗಿದೆ. ಈಗ ಮಳೆ ಬರುತ್ತಿದ್ದು ಏಕಾಏಕಿ ಪೈಪ್‌ಲೈನ್ ಮಣ್ಣು ಕುಸಿಯುತ್ತಿದೆ. ಪ್ರತಿ ದಿನ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಓಡಾಡುತ್ತವೆ. ಗುತ್ತಿಗೆದಾರರು ಕೂಡಲೇ ಮುನ್ನೆಚ್ಚರಿಕಾ ಫಲಕ ಅಳವಡಿಸಬೇಕು. ರಸ್ತೆ ಮಧ್ಯದಲ್ಲೇ ದೊಡ್ಡ ಪೈಪ್ ಲೈನ್ ಹಾಕಿರುವುದರಿಂದ ಹೊಸಪೇಟೆಯಿಂದ ಗುಡೇಮಾರನಹಳ್ಳಿಗೆ ಹೋಗುವ ರಾಜ್ಯ ಹೆದ್ದಾರಿ ಟೋಲ್ ರಸ್ತೆ ಸಂಪೂರ್ಣ ಹಾಳಾಗಿದೆ. ವಾಹನ ಸವಾರರು ಭಯದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.ಗುತ್ತಿಗೆದಾರರು ಬೇಕಾಬಿಟ್ಟಿ ಕಾಮಗಾರಿ ಮಾಡುತ್ತಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದು ಈಗ ರಸ್ತೆ ಕುಸಿಯುವ ಹಂತಕ್ಕೆ ತಲುಪಿರುವುದರಿಂದ ತಕ್ಷಣವೇ ಗುತ್ತಿಗೆದಾರರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳಾದ ಮಧು, ರಮೇಶ್, ಅಂಜು, ಕರಡಿ ನಾಗರಾಜು ಇತರರು ಒತ್ತಾಯಿಸಿದ್ದಾರೆ.

ಬೀದಿ ದೀಪ ಸರಿಪಡಿಸಿ:

ರಸ್ತೆಯನ್ನು ಅಗೆದಿರುವುದರಿಂದ ವಾಹನ ಸವಾರರು ಸಾಕಷ್ಟು ತೊಂದರೆ ಪಡುವಂತೆ ಆಗಿದೆ ಇದರ ಜೊತೆಗೆ ರಾತ್ರಿ ಸಮಯದಲ್ಲಿ ಈ ರಸ್ತೆಯಲ್ಲಿ ಬೀದಿ ದೀಪಗಳು ಇಲ್ಲದ ಕಾರಣ ಗುಂಡಿಗಳು ಎಲ್ಲಿದೆ ಎಂಬುದು ವಾಹನ ಸವರರಿಗೆ ತಿಳಿಯುತ್ತಿಲ್ಲ ರಾಮನಗರ ಮಾರ್ಗವಾಗಿ ಮುಖಾಂತರ ದಾಬಸ್ ಪೇಟೆ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಅನೇಕ ಜಿಲ್ಲೆಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಆಗಿರುವುದರಿಂದ ಕೂಡಲೇ ಸೂಚನಾ ಫಲಕ ಜೊತೆಗೆ ಬೀದಿ ದೀಪ ಸರಿಪಡಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಇದೇ ವೇಳೆ ಒತ್ತಾಯಿಸಿದ್ದಾರೆ.