ಗಣೇಶ ಪ್ರತಿಷ್ಠಾಪಿಸುವ ಯುವಕರು ಕಡ್ಡಾಯವಾಗಿ ನಿಯಮಾನುಸಾರ ಪೂರ್ವ ಅನುಮತಿ ಪಡೆಯಬೇಕು. ಗಣೇಶ ಮಂಟಪ ಮತ್ತು ಸುತ್ತಮುತ್ತಲ ಆವರಣದಲ್ಲಿ ಕಡ್ಡಾಯವಾಗಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು. ಮೆರವಣಿಗೆ ಹಾಗೂ ಇತರೆ ಕಾರ್ಯಕ್ರಮಗಳ ಬಗ್ಗೆ ಮುಂಚಿನವಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಜೊತೆಗೆ ಉಚ್ಚ ನ್ಯಾಯಾಲಯ ಕೊಟ್ಟಿರುವ ಸೂಚನೆ ಪಾಲಿಸಿ ಹಬ್ಬವನ್ನು ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕು ಎಂದು ತಹಸೀಲ್ದಾರ್ ಲೋಕೇಶ್ ತಿಳಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಗೌರಿ ಗಣೇಶ ಹಬ್ಬದ ಪೂರ್ವಭಾವಿಯಾಗಿ ನಾಗರಿಕರ ಸೌಹರ್ದತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಸಾರ್ವಜನಿಕ ಸುರಕ್ಷತೆ ಕಾಪಾಡಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಚಿಸಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದರು.

ಗಣೇಶ ಪ್ರತಿಷ್ಠಾಪಿಸುವ ಯುವಕರು ಕಡ್ಡಾಯವಾಗಿ ನಿಯಮಾನುಸಾರ ಪೂರ್ವ ಅನುಮತಿ ಪಡೆಯಬೇಕು. ಗಣೇಶ ಮಂಟಪ ಮತ್ತು ಸುತ್ತಮುತ್ತಲ ಆವರಣದಲ್ಲಿ ಕಡ್ಡಾಯವಾಗಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು. ಮೆರವಣಿಗೆ ಹಾಗೂ ಇತರೆ ಕಾರ್ಯಕ್ರಮಗಳ ಬಗ್ಗೆ ಮುಂಚಿನವಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.

ಆಹಾರ ವಿತರಣೆ ವೇಳೆ ಆರೋಗ್ಯ ಮತ್ತು ಆಹಾರ ಇಲಾಖೆಯಿಂದ ಪರೀಕ್ಷೆಗೆ ಒಳಪಡಿಸಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಗಣೇಶ ವಿಸರ್ಜಿಸುವ ಸ್ಥಳಗಳಲ್ಲಿ ಬೆಳಕಿನ ವ್ಯವಸ್ಥೆ ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಳ್ಳಲು ಸ್ಥಳೀಯ ಗ್ರಾಪಂಗೆ ಸೂಚನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಮಾತನಾಡಿ, ಖಾಸಗಿ ಜಾಗದಲ್ಲಿ ಪ್ರತಿಷ್ಠಾಪಿಸುವುದಾದರೆ ಜಾಗದ ಮಾಲೀಕರ ಲಿಖಿತ ಒಪ್ಪಿಗೆ ಪತ್ರ ಪಡೆಯಬೇಕು. ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗ ಅಥವಾ ತುರ್ತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಮಂಟಪ ನಿರ್ಮಿಸಬೇಕು ಎಂದರು.

24 ಗಂಟೆಯೂ ಮಂಟಪದ ಬಳಿ ಸರದಿಯಂತೆ ಕಾವಲಿರಲು ಸ್ವಯಂ ಸೇವಕರನ್ನು ನೇಮಿಸಬೇಕು. ಸುಪ್ರೀಂ ಕೋರ್ಟ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಿತ ಡೆಸಿಬಲ್ ಪ್ರಮಾಣ ಮೀರಬಾರದು. ಅಧಿಕ ಶಬ್ದ ಉಂಟುಮಾಡುವ ಡಿಜೆ ಸೌಂಡ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದರು.

ಇಇನ್ಸ್ ಪೆಕ್ಟರ್ ಜಯನಂದ ಮಾತನಾಡಿ, ಗಣೇಶ ವಿಸರ್ಜನೆ ವೇಳೆ ಮೆರವಣಿಗೆಯ ಮಾರ್ಗ, ಪ್ರಾರಂಭವಾಗುವ ಸಮಯ ಮತ್ತು ವಿಸರ್ಜನೆ ಮಾಡುವ ಸ್ಥಳದ ಕುರಿತು ಮುಂಚಿತವಾಗಿ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು. ಕಾನೂನುಬಾಹಿರ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.

ಸಿಪಿಐ ಬಸವರಾಜು ಮಾತನಾಡಿ, ಯಾವುದೇ ರೀತಿಯ ಪ್ರಚೋದನಾಕಾರಿ ಭಾಷಣ ಹಾಗೂ ಘೋಷಣೆ ಕೂಗಬಾರದು. ಗಣೇಶ ವಿಸರ್ಜನೆ ವೇಳೆ ಅಗ್ನಿ ಶಾಮಕ ದಳಕ್ಕೆ ಮೂರ್ತಿಯನ್ನು ನೀಡಿದರೇ ಅವರೇ ವಿಸರ್ಜಿಸಲಿದ್ದಾರೆ ಎಂದರು. ಸಭೆಯಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಸಾರ್ವಜನಿಕರು ಭಾಗವಹಿಸಿದ್ದರು.