ಸಾರಾಂಶ
ಬೆಂಗಳೂರು : ನಗರದಲ್ಲಿ ದ್ವಿಚಕ್ರ ವಾಹನ ಕಳವು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದ್ವಿಚಕ್ರ ವಾಹನ ಮಾರಾಟಕ್ಕೂ ಮುನ್ನ ಕೆಲವು ಸುರಕ್ಷಿತ ಪರಿಕರಗಳನ್ನು ಅಳವಡಿಸುವಂತೆ ನಗರದ ದ್ವಿಚಕ್ರ ವಾಹನಗಳ ಡಿಸ್ಟ್ರಿಬ್ಯೂಟರ್‌ಗಳಿಗೆ ಪತ್ರ ಬರೆಯುವುದಾಗಿ ನಗರದ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ದ್ವಿಚಕ್ರ ವಾಹನಗಳ ಕಳವು ಹೆಚ್ಚಳವಾಗಿದೆ. ದ್ವಿಚಕ್ರ ವಾಹನಗಳಲ್ಲಿ ಸುರಕ್ಷಿತ ಪರಿಕರಗಳು ಸಮಂಜಸವಾಗಿಲ್ಲದ ಕಾರಣ ಕಳ್ಳರು ಸುಲಭವಾಗಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದಾರೆ. ಹೀಗಾಗಿ ನಗರದಲ್ಲಿ ದ್ವಿಚಕ್ರ ವಾಹನಗಳ ಕಳವು ತಡೆ ನಿಟ್ಟಿನಲ್ಲಿ ದ್ವಿಚಕ್ರ ವಾಹನ ಮಾರಾಟಕ್ಕೂ ಮುನ್ನ ಅತ್ಯಾಧುನಿಕ ಪರಿಕರಗಳನ್ನು ಅಳವಡಿಸಿ, ಮಾರಾಟದ ವೇಳೆ ಗ್ರಾಹಕರಿಗೆ ಮಾಹಿತಿ ನೀಡುವಂತೆ ನಗರದ ದ್ವಿಚಕ್ರ ವಾಹನಗಳ ಡಿಸ್ಟ್ರಿಬ್ಯೂಟರ್‌ಗಳಿಗೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ ಎಂದರು.
ಜಿಪಿಎಸ್, ವ್ಹೀಲ್ ಲಾಕ್, ಪ್ರಬಲ ಹ್ಯಾಂಡಲ್ ಲಾಕ್
ದ್ವಿಚಕ್ರ ವಾಹನಗಳ ಕಳವು ತಡೆಗಟ್ಟುವ ನಿಟ್ಟಿನಲ್ಲಿ ಜಿಪಿಎಸ್ ಅಳವಡಿಕೆ, ವ್ಹೀಲ್ ಲಾಕ್, ಪ್ರಬಲ ಹ್ಯಾಂಡಲ್ ಲಾಕ್, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಆ್ಯಂಟಿ ಥೆಫ್ಟ್ ಮೆಷರ್ಸ್ ಅಳವಡಿಸುವಂತೆ ಡಿಸ್ಟ್ರಿಬ್ಯೂಟರ್‌ಗಳಿಗೆ ಸೂಚಿಸಲಾಗುವುದು. ಇದರಿಂದ ದ್ವಿಚಕ್ರ ವಾಹನಗಳ ಕಳವು ನಿಯಂತ್ರಿಸಲು ಸಹಕಾರಿಯಾಗಲಿದೆ. ಈ ಬಗ್ಗೆ ಇತ್ತೀಚೆಗೆ ನಡೆದ ದ್ವಿಚಕ್ರ ವಾಹನಗಳ ಉತ್ಪಾದಕರ ಸಮ್ಮೇಳನದಲ್ಲಿಯೂ ಗಮನ ಸೆಳೆಯಲಾಗಿದೆ. ಸಾರ್ವಜನಿಕರು ಸಹ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆಯೂ ತಿಳಿಸುವುದಾಗಿ ದಯಾನಂದ್ ಹೇಳಿದರು.
ನಗರದಲ್ಲಿ ಪ್ರತಿ ದಿನ 14-16 ಬೈಕ್ ಕಳವು:
ನಗರದಲ್ಲಿ ಒಟ್ಟು ಸುಮಾರು 80 ಲಕ್ಷ ದ್ವಿಚಕ್ರ ವಾಹನಗಳಿವೆ. ಪ್ರತಿ ದಿನ ಸುಮಾರು ಒಂದೂವರೆಯಿಂದ ಎರಡು ಸಾವಿರ ದ್ವಿಚಕ್ರ ವಾಹನಗಳು ಹೊಸದಾಗಿ ನೋಂದಣಿಯಾಗುತ್ತಿವೆ. ಈ ಪೈಕಿ ಕಳೆದ ಮೂರು ವರ್ಷಗಳಿಂದ ನಿತ್ಯ ಸರಾಸರಿ ಸುಮಾರು 14ರಿಂದ 16 ದ್ವಿಚಕ್ರ ವಾಹನಗಳು ಕಳ್ಳತನವಾಗುತ್ತಿವೆ. ಕಳೆದ ಮೂರು ವರ್ಷಗಳಲ್ಲಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 13,628 ದ್ವಿಚಕ್ರ ವಾಹನ ಕಳವು ಪ್ರಕರಣಗಳು ದಾಖಲಾಗಿವೆ. ಅದಂತೆ 2022-4,785, 2023-5,580, 2024(ಆ.31)- 3,263 ದ್ವಿಚಕ್ರ ವಾಹನಗಳು ಕಳ್ಳತನವಾಗಿವೆ. ಈ ಪೈಕಿ 4,420 ಪ್ರಕರಣಗಳು ಪತ್ತೆಯಾಗಿವೆ.