ಅಧಿಕ ಸಾಮರ್ಥ್ಯದ ವಿದ್ಯುತ್‌ ಪರಿವರ್ತಕ ಅಳವಡಿಸಿ: ಶಾಸಕ ಮಾನೆ

| Published : Feb 20 2025, 12:47 AM IST

ಅಧಿಕ ಸಾಮರ್ಥ್ಯದ ವಿದ್ಯುತ್‌ ಪರಿವರ್ತಕ ಅಳವಡಿಸಿ: ಶಾಸಕ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಹೆಚ್ಚಿನ ಲೋಡ್ ಕಾರಣದಿಂದ ವಿದ್ಯುತ್ ಪರಿವರ್ತಕಗಳು ಸುಡುತ್ತಿವೆ. ಹಾಗಾಗಿ ಪರಿವರ್ತಕಗಳ ಸಾಮರ್ಥ್ಯವನ್ನು 25 ಕೆವಿಎನಿಂದ 63 ಕೆವಿಎಗೆ ಹೆಚ್ಚಿಸುವಂತೆ ಮಾಡಿರುವ ಮನವಿಗೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಸಹ ಒಪ್ಪಿದ್ದಾರೆ.

ಹಾನಗಲ್ಲ: ಆಗಾಗ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಗೆ ಕರ್ತವ್ಯಪಾಲನೆಯ ಬಗ್ಗೆ ಪಾಠ ಮಾಡುತ್ತಿದ್ದ ಶಾಸಕ ಶ್ರೀನಿವಾಸ ಮಾನೆ, ಈಗ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಅವ್ಯವಸ್ಥೆ ಕರ್ತವ್ಯ ಲೋಪಕ್ಕೆ ಛೀಮಾರಿ ಹಾಕಿ, ಉತ್ತಮ ಕಾರ್ಯ ನಿರ್ವಹಿಸುವವರಿಗೆ ಪ್ರೋತ್ಸಾಹಿಸುತ್ತಿರುವುದರ ನಡುವೆ ಇಲ್ಲಿನ ಹೆಸ್ಕಾಂ ಕಚೇರಿಗೆ ತೆರಳಿ ರೈತರಿಂದ ಕೆಲಸಕ್ಕೆ ದುಡ್ಡು ಕೇಳುವ, ಸರಿಯಾಗಿ ಕಾರ್ಯ ನಿರ್ವಹಿಸದ ನೌಕರರಿಗೆ ಬಿಸಿ ಮುಟ್ಟಿಸಿದರು.ಇಲ್ಲಿನ ರಂಜನಿ ಚಿತ್ರಮಂದಿರದ ಬಳಿಯ ಹೆಸ್ಕಾಂ ಕಚೇರಿಗೆ ದಿಢೀರನೇ ತೆರಳಿದ ಶಾಸಕ ಶ್ರೀನಿವಾಸ ಮಾನೆ, ವಿದ್ಯುತ್ ಪರಿವರ್ತಕಗಳಿಗೆ ಸಂಬಂಧಿಸಿದ ರಜಿಸ್ಟರ್ ಬುಕ್ ಮೇಲೆ ಕಣ್ಣಾಡಿಸಿದರು. ರಜಿಸ್ಟರ್ ಸರಿಯಾಗಿ ನಿರ್ವಹಣೆ ಮಾಡದೇ ಇರುವುದನ್ನು ಕಂಡು ಸಿಡಿಮಿಡಿಗೊಂಡರು. ಇನ್‌ವರ್ಡ್, ಔಟ್‌ವರ್ಡ್ ನಿರ್ವಹಣೆ ಮಾಡಿಲ್ಲ. ಪರಿವರ್ತಕಗಳಿಗೆ ದುಡ್ಡು ಕೇಳುತ್ತಿದ್ದೀರಿ. ರೈತರ ಬೆಳೆಯಷ್ಟೇ ಒಣಗುತ್ತಿಲ್ಲ, ರೈತರ ಮುಖಗಳೂ ಒಣಗಿವೆ. ರಜಿಸ್ಟರ್ ಸರಿಯಾಗಿ ನಿರ್ವಹಣೆ ಮಾಡಬೇಕು. ಸರದಿ ಪ್ರಕಾರ ಪರಿವರ್ತಕ ನೀಡಬೇಕು. ಈ ಬಗ್ಗೆ ನಮ್ಮ ಕಚೇರಿಗೂ ನಿತ್ಯ ಮಾಹಿತಿ ನೀಡಬೇಕು. ಇದರಲ್ಲಿ ಮತ್ತೆ ನಿಮ್ಮ ಹಳೆಚಾಳಿ ಮುಂದುವರಿಸಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.ಹೆಚ್ಚಿನ ಲೋಡ್ ಕಾರಣದಿಂದ ವಿದ್ಯುತ್ ಪರಿವರ್ತಕಗಳು ಸುಡುತ್ತಿವೆ. ಹಾಗಾಗಿ ಪರಿವರ್ತಕಗಳ ಸಾಮರ್ಥ್ಯವನ್ನು 25 ಕೆವಿಎನಿಂದ 63 ಕೆವಿಎಗೆ ಹೆಚ್ಚಿಸುವಂತೆ ಮಾಡಿರುವ ಮನವಿಗೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಸಹ ಒಪ್ಪಿದ್ದಾರೆ. ಹಾವೇರಿಯಲ್ಲಿ ಮೊನ್ನೆ ನಡೆದ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರ ಗಮನ ಸಹ ಸೆಳೆಯಲಾಗಿದೆ. ನೀವೂ ಬೆನ್ನುಹತ್ತಿ ಅಧಿಕ ಸಾಮರ್ಥ್ಯದ ಪರಿವರ್ತಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಿ ಎಂದು ಎಇಇ ಆನಂದ ಅವರಿಗೆ ಸೂಚಿಸಿದರು.ವಿದ್ಯುತ್ ಪರಿವರ್ತಕಗಳ ಬಫರ್ ಸ್ಟಾಕ್ ಶಾಖಾ ಕಚೇರಿಯಿಂದಲೇ ನಿರ್ವಹಣೆ ಮಾಡಬೇಕು. ಅಂದಾಗ ಮಾತ್ರ ರೈತರಿಗೆ ಅನುಕೂಲವಾಗಲಿದೆ. ಮಾ. 1ರಿಂದ ಈ ನಿಟ್ಟಿನಲ್ಲಿ ಕಾರ್ಯಾರಂಭಿಸಬೇಕು. ಯಾವುದೇ ಸಮಸ್ಯೆ, ಏನೇ ತೊಂದರೆ ಬಂದರೆ ತಕ್ಷಣವೇ ನನ್ನ ಗಮನಕ್ಕೆ ತನ್ನಿ. ಈಗಲೇ ಬಿಸಿಲು ನೆತ್ತಿ ಸುಡುತ್ತಿದೆ. ಇನ್ನೂ 2, 3 ತಿಂಗಳು ಸಮಸ್ಯೆ ಹೆಚ್ಚಲಿದ್ದು, ಕಾಳಜಿಯಿಂದ ಕೆಲಸ ಮಾಡಿ. ಬೆಳೆಗಳನ್ನು ಉಳಿಸಿಕೊಳ್ಳುವ ರೈತ ಸಮೂಹಕ್ಕೆ ಸಹಕಾರ ನೀಡಿ ಎಂದು ಶ್ರೀನಿವಾಸ ಮಾನೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಕಚೇರಿಗೆ ತಾಲೂಕಿನ ನಾನಾ ಗ್ರಾಮಗಳಿಂದ ಆಗಮಿಸಿದ್ದ ರೈತರ ಸಮಸ್ಯೆಗಳನ್ನೂ ಆಲಿಸಿ, ಸ್ಪಂದಿಸಿದರು.