ವಾರದೊಳಗೆ ಕನ್ನಡ ಫಲಕ ಅಳವಡಿಸಿ: ಕರವೇ

| Published : Mar 06 2024, 02:15 AM IST / Updated: Mar 06 2024, 02:57 PM IST

ಸಾರಾಂಶ

ಕೆಲವೆಡೆ ಇಂಗ್ಲಿಷ್‌ ನಾಮಫಲಕಗಳಿಗೆ ಕರವೇ ಕಾರ್ಯಕರ್ತರು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ಹಾಗೂ ಕರವೇ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಬಳ್ಳಾರಿ: ರಾಜ್ಯ ಸರ್ಕಾರದ ಆದೇಶದಂತೆ ನಗರದ ಅಂಗಡಿ ಮುಂಗಟ್ಟುಗಳು, ವ್ಯಾಪಾರ ವಾಣಿಜ್ಯ ಸಂಸ್ಥೆಗಳು ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಜನಜಾಗೃತಿ ಆಂದೋಲನ ಹಮ್ಮಿಕೊಂಡಿದ್ದರು.

ಇಲ್ಲಿನ ಕರವೇ ಜಿಲ್ಲಾ ಕಚೇರಿಯಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ಗಡಗಿ ಚೆನ್ನಪ್ಪ ವೃತ್ತ, ಬ್ರೂಸ್‌ಪೇಟೆ ವೃತ್ತದ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಹಾದು ಜಿಲ್ಲಾಧಿಕಾರಿ ಕಚೇರಿ ತಲುಪಿದರು.

ಇದೇ ವೇಳೆ ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡ ಇರದ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಒಂದು ವಾರದೊಳಗೆ ಫಲಕ ಬದಲಾಯಿಸದೇ ಹೋದಲ್ಲಿ ನಾವೇ ಕಿತ್ತು ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕೆಲವೆಡೆ ಇಂಗ್ಲಿಷ್‌ ನಾಮಫಲಕಗಳಿಗೆ ಕರವೇ ಕಾರ್ಯಕರ್ತರು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ಹಾಗೂ ಕರವೇ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ತಿಳಿಗೊಳಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಅಂಗಡಿ ಶಂಕರ್ ಡಿ. ಕಗ್ಗಲ್, ಯಾವುದೇ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಇರಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಆದಾಗ್ಯೂ ನಗರದ ಬಹುತೇಕ ವ್ಯಾಪಾರಿಗಳು ಸರ್ಕಾರದ ಆದೇಶ ಪಾಲಿಸುತ್ತಿಲ್ಲ. ಗಡಿನಾಡು ಬಳ್ಳಾರಿಯಲ್ಲಿ ಕನ್ನಡ ಅನುಷ್ಠಾನ ಅಗತ್ಯವಿದ್ದು, ಈ ದಿಸೆಯಲ್ಲಿ ಸರ್ಕಾರದ ಆದೇಶ ಪಾಲನೆ ಮಾಡಬೇಕು ಎಂದು ಎಲ್ಲರಿಗೂ ಮನವಿ ಮಾಡಿಕೊಳ್ಳುತ್ತಿದ್ದೇವೆ. ನಾಮಫಲಕಗಳನ್ನು ಬದಲಾಯಿಸಲು ಒಂದು ವಾರದ ಗಡವು ನೀಡಿದ್ದು, ಒಂದು ವೇಳೆ ಬದಲಾಯಿಸದೇ ಹೋದರೆ ಮುಂದಿನ ಹಂತದ ಕೆಲಸವನ್ನು ನಾವೇ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಕೆ.ಎಂ. ಶಿವಕುಮಾರ್, ಶಬರಿರವಿಕುಮಾರ್, ಹುಬ್ಬಳ್ಳಿರಾಜು, ಅನಂದಗೌಡ ತಗ್ಗಿನಬೂದಿಹಾಳ್, ಎನ್. ಚಂದ್ರಮೋಹನ್, ಶ್ರೀಶೈಲ, ಸಂಡೂರು ತಾಲೂಕು ಘಟಕ ಅಧ್ಯಕ್ಷ ಸತ್ಯನಾರಾಯಣ ಮಾಸ್ತಿ, ಕಂಪ್ಲಿ ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ, ಕುಡತಿನಿ ಜಂಗ್ಲಿಸಾಬ್, ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಹೇಶ್, ಸಂಘಟನೆಯ ಜಿಲ್ಲಾ ಪ್ರಮುಖರಾದ ಮೋಕಾ ಪೊಂಪನಗೌಡ, ಚಾಂದ್‌ಭಾಷ, ಹೊನ್ನನಗೌಡ, ಸೋಮಶೇಖರ್, ಮಸ್ಕಿ ಮಹಾಂತೇಶ್, ಮಲ್ಲಿಕಾರ್ಜುನ ಚಾನಾಳ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.