ಜಿಲ್ಲೆಯ ಎಲ್ಲಾ 8 ತಾಲೂಕುಗಳನ್ನು ರಾಜ್ಯ ಸರ್ಕಾರ ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು.
ಕುಡಿಯುವ ನೀರು ಹಾಗೂ ಬರ ಪರಿಸ್ಥಿತಿ ನಿರ್ವಹಣೆ ಕುರಿತ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎನ್. ಮಂಜುಳಾ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಳ ಸಂಪರ್ಕದ ಮೂಲಕ ಪೂರೈಸಲಾಗುತ್ತಿರುವ ಕುಡಿಯುವ ನೀರಿಗೆ ಬಳಕೆ ಆಧಾರದ ಮೇಲೆ ಶುಲ್ಕ ವಿಧಿಸುವ ನಿಟ್ಟಿನಲ್ಲಿ ನೀರಿನ ಮೀಟರ್‌ಗಳನ್ನು ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎನ್. ಮಂಜುಳಾ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಡಿಯುವ ನೀರು ಹಾಗೂ ಬರ ಪರಿಸ್ಥಿತಿ ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಳೆಯ ತೀವ್ರ ಕೊರತೆಯಿಂದಾಗಿ ಜಿಲ್ಲೆಯ ಎಲ್ಲಾ 8 ತಾಲೂಕುಗಳನ್ನು ರಾಜ್ಯ ಸರ್ಕಾರ ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.ಯೋಜಿತ ರೀತಿಯಲ್ಲಿ ನೀರು ಪೂರೈಸಲು ಹಾಗೂ ನೀರಿನ ಬಳಕೆಯನ್ನು ನಿಯಂತ್ರಿಸುವುದರ ಜೊತೆಗೆ ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಗಟ್ಟಲು ಮೀಟರ್ ಅಳವಡಿಕೆ ಪರಿಣಾಮಕಾರಿ ಕ್ರಮವಾಗಲಿದೆ. ಆದ್ದರಿಂದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಈ ಕುರಿತು ಅಗತ್ಯ ಕ್ರಮ ಕೈಗೊಂಡು, ನೀರಿನ ಬಳಕೆಯ ಪ್ರಮಾಣಕ್ಕೆ ಅನುಗುಣವಾಗಿ ಶುಲ್ಕ ವಿಧಿಸುವ ವ್ಯವಸ್ಥೆ ಜಾರಿಗೆ ತರಲು ಮುಂದಾಗಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯ 38 ಹಳ್ಳಿಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ಪ್ರಸ್ತುತ ಕುಡಿಯುವ ನೀರಿ ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಬರದಿದ್ದಲ್ಲಿ ಈ ಹಳ್ಳಿಗಳ ಸಂಖ್ಯೆ ಗಣನೀಯವಾಗಿ ಏರುವ ಸಾಧ್ಯತೆ ಇದೆ. ಆದ್ದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸಲು 8884777235 ಸಹಾಯವಾಣಿಯನ್ನು ತೆರೆಯಲಾಗಿದ್ದು, ಸಾರ್ವಜನಿಕರು ಈ ಸಹಾಯವಾಣಿಯನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಮನವಿ ಮಾಡಿದರು.ಸಭೆಯಲ್ಲಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜಿನ ಸ್ಥಿತಿಗತಿ, ಲಭ್ಯವಿರುವ ನೀರಿನ ಮೂಲಗಳು, ಮೇವಿನ ಲಭ್ಯತೆ, ಬೆಳೆಹಾನಿ ಸಮೀಕ್ಷೆ, ಬೆಳೆ ವಿಮೆ ನೋಂದಣಿ ಹಾಗೂ ಜಿಲ್ಲೆಯಲ್ಲಿನ ಕೃಷಿ ಚಟುವಟಿಕೆಗಳ ಕುರಿತು ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿದರು. ಬರ ಪರಿಸ್ಥಿತಿಯಿಂದ ಜನರು ಮತ್ತು ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯ ಬಳಿಕ ಡಾ. ಎನ್. ಮಂಜುಳಾ ಅವರು ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಕ್ಷೇತ್ರ ಭೇಟಿ ನೀಡಿ, ಸರ್ಕಾರಿ ಯೋಜನೆಗಳ ಅನುಷ್ಠಾನ ಹಾಗೂ ಸಾರ್ವಜನಿಕ ಸೇವೆಗಳ ಕುರಿತು ಸ್ಥಳದಲ್ಲಿಯೇ ಪರಿಶೀಲನೆ ನಡೆಸಿದರು.ತಾಲೂಕಿನ ನಾಯನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಭೇಟಿ ನೀಡಿದ ಅವರು ಶಾಲೆಯಲ್ಲಿನ ಮೂಲಸೌಕರ್ಯ, ವಿದ್ಯಾರ್ಥಿಗಳಿಗೆ ಲಭ್ಯವಿರುವ ಸೌಲಭ್ಯಗಳು ಹಾಗೂ ಶೈಕ್ಷಣಿಕ ಪರಿಸರವನ್ನು ಪರಿಶೀಲಿಸಿದರು. ಇದೇ ವೇಳೆ ಎಸ್ಐಆರ್-2026 ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಪರಿಶೀಲನೆಯ ಅಂಗವಾಗಿ ನಾಯನಹಳ್ಳಿ ಗ್ರಾಮದಲ್ಲಿ ಮನೆ-ಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅಥವಾ ಸೇರ್ಪಡೆಯಾಗಬೇಕಿರುವ ಮತದಾರರ ಕುರಿತು ಮಾಹಿತಿ ಪಡೆದರು.
ಅಣಕನೂರು ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿನಿಯರಿಗೆ ಒದಗಿಸಲಾಗುತ್ತಿರುವ ವಸತಿ, ಆಹಾರ, ಕುಡಿಯುವ ನೀರು ಹಾಗೂ ಇತರೆ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಅಗತ್ಯ ಸುಧಾರಣೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು, ಜಿಪಂ ಸಿಇಒ ಡಾ.ವೈ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಭಾಸ್ಕರ್, ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತಿಕ್ ಪಾಷಾ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ಸಿಕೆಬಿ-1 ನಾಯನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎನ್. ಮಂಜುಳ ಅವರು ಮನೆ-ಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅಥವಾ ಸೇರ್ಪಡೆಯಾಗಬೇಕಿರುವ ಮತದಾರರ ಕುರಿತು ಮಾಹಿತಿ ಪಡೆದರು.