ಮಂಡ್ಯ ಜಿಲ್ಲೆಯಲ್ಲಿ 3190 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ

| Published : Aug 30 2025, 01:00 AM IST

ಮಂಡ್ಯ ಜಿಲ್ಲೆಯಲ್ಲಿ 3190 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರು ಪ್ರತಿದಿನ ಬೆಳಗ್ಗೆ ಮಂಟಪದ ಎದುರು ನೀರು ಹಾಕಿ ರಂಗೋಲಿ ಬಿಡಿಸುವುದು, ನೈವೇದ್ಯ, ಪ್ರಸಾದ ತಯಾರಿಸಿಕೊಡುವುದು, ಪುರುಷರು ಚಿಕ್ಕದಾಗಿ ವಿದ್ಯುತ್ ದೀಪಾಲಂಕಾರ ಮಾಡಿಸಿಕೊಡುವ ಮೂಲಕ ಮಕ್ಕಳನ್ನು ಸಂತಸಪಡಿಸುತ್ತಿರುವುದು ಕಂಡುಬಂದಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಈ ಬಾರಿ ಎಲ್ಲೆಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಎಲ್ಲಿಲ್ಲದ ಉತ್ಸಾಹ. ಬಾಲಕರಿಂದ ಆರಂಭವಾಗಿ ಯುವಕರವರೆಗೂ ಗಣೇಶ ಉತ್ಸವದ ಕಿಚ್ಚು. ಹಿರಿಯರಿಂದಲೂ ಗಣೇಶನ ಪ್ರತಿಷ್ಠಾಪನೆಗೆ ಪ್ರೋತ್ಸಾಹ. ಇದರ ಪರಿಣಾಮ ವಿನಾಯಕ ಕಳೆದ

ಬಾರಿಗಿಂತಲೂ ಈ ವರ್ಷ ಹೆಚ್ಚು ವಿಜೃಂಭಿಸುತ್ತಿದ್ದಾನೆ.

ಪೊಲೀಸ್ ಇಲಾಖೆ ವರದಿ ಪ್ರಕಾರ ಜಿಲ್ಲೆಯ 36 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3190 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಇದಲ್ಲದೆ ಬಾಲಕರು ಸಾಕಷ್ಟು ಸಂಖ್ಯೆಯಲ್ಲಿ ಬೀದಿ ಬೀದಿಗಳಲ್ಲೂ ಗಣೇಶನನ್ನೂ ಕೂರಿಸಿ ಪೂಜಿಸುತ್ತಿದ್ದಾರೆ.

ಹುಡುಗರ ಗಣೇಶ ಪ್ರತಿಷ್ಠಾಪನೆಗೆ ಹಿರಿಯರೂ ಸಾಥ್ ನೀಡಿರುವುದರಿಂದ ಎಲ್ಲರಲ್ಲೂ ಎಲ್ಲಿಲ್ಲದ ಉತ್ಸಾಹ ಮೂಡಿದೆ.

ಪೊಲೀಸರೇ ಹೇಳುವಂತೆ ಕಳೆದ ಬಾರಿಗಿಂತಲೂ ಗಣೇಶೋತ್ಸವ ಈ ಬಾರಿ ಹೆಚ್ಚು ವಿಜೃಂಭಿಸುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು 200ಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಹೆಚ್ಚುವರಿಯಾಗಿ ಪ್ರತಿಷ್ಠಾಪನೆಗೊಂಡಿವೆ ಎಂದು ತಿಳಿಸಿದ್ದಾರೆ.

ಗಣೇಶೋತ್ಸವವನ್ನು ಅದ್ಧೂರಿತನ ತುಂಬುವ ಸಲುವಾಗಿ ನಗರದ ಕಾವೇರಿ ನಗರ, ಹೊಸಹಳ್ಳಿ ಬಡಾವಣೆ, ಚಾಮುಂಡೇಶ್ವರಿ ನಗರ, ಮರೀಗೌಡ ಬಡಾವಣೆ, ದ್ವಾರಕ ನಗರ, ಬಂದೀಗೌಡ ಬಡಾವಣೆ, ಸ್ವರ್ಣಸಂದ್ರ, ಗುತ್ತಲು ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಬೃಹತ್ ಗಣಪನನ್ನು ಪ್ರತಿಷ್ಠಾಪಿಸಿದ್ದಾರೆ. ಪ್ರತಿ ಬೀದಿಗಳಿಗೂ ವಿದ್ಯುತ್ ದೀಪಾಲಂಕಾರ ಮಾಡಿ ಮೆರುಗು ನೀಡಿದ್ದಾರೆ. ಸುತ್ತಮುತ್ತಲ ಜನರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನೆರವೇರಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಗ್ರಾಮೀಣ ಭಾಗದಲ್ಲೂ ಗಣೇಶ ಉತ್ಸವದ ಆಚರಣೆ ಹೆಚ್ಚಿದೆ. ಗಣೇಶನ ಪ್ರತಿಷ್ಠಾಪನೆಗೆ ಯುವಕರಲ್ಲಿ ಆಸಕ್ತಿ ಕ್ಷೀಣಿಸುತ್ತಿರುವ ಮಾತುಗಳು ಕೇಳಿಬರುತ್ತಿದ್ದ ಬೆನ್ನಹಿಂದೆಯೇ ಈ ಬಾರಿ ಗಣೇಶೋತ್ಸವ ಅದ್ಧೂರಿತನದಿಂದ ಕೂಡಿರುವುದು ಹೊಸ ಬೆಳವಣಿಗೆಯಾಗಿದೆ. ಇದರಿಂದ ಮುಂದಿನ ವರ್ಷ ಇನ್ನೂ ಹೆಚ್ಚು ಮಂದಿ ಗಣೇಶ ಪ್ರತಿಷ್ಠಾಪನೆಗೆ ಮುಂದಾಗುವುದಕ್ಕೆ ಪ್ರೇರಣೆ

ನೀಡಿದಂತಾಗಿದೆ.

ಗಣೇಶನ ಪ್ರತಿಷ್ಠಾಪನೆಗೆ ಪೂರ್ವಭಾವಿಯಾಗಿ ಪೊಲೀಸರಿಂದ ಅನುಮತಿ ಪಡೆಯುವುದರಿಂದ ಆರಂಭವಾಗಿ ಸಾಕಷ್ಟು ಷರತ್ತುಗಳನ್ನು ವಿಧಿಸಿದ್ದರೂ ಯುವಕರು ಅದೆಲ್ಲವನ್ನೂ ಮೀರಿ ಗಣೇಶೋತ್ಸವಕ್ಕೆ ಅದ್ಧೂರಿತನ ತುಂಬಿರುವುದು ಎಲ್ಲೆಡೆ ಕಂಡುಬರುತ್ತಿದೆ. ಕಳೆದ ವರ್ಷ ನಾಗಮಂಗಲದಲ್ಲಿ ಸೃಷ್ಟಿಯಾದ ಗಲಭೆಯಿಂದ ಈ ಬಾರಿ ಗಣೇಶ ಪ್ರತಿಷ್ಠಾಪನೆಗೆ ಹೆಚ್ಚಿನ ಸಂಖ್ಯೆಯ ಯುವಕರು ಮುಂದಾಗುವುದಿಲ್ಲವೆಂಬುದನ್ನು ಭಾವಿಸಲಾಗಿತ್ತು. ಆದರೆ, ಗಣೇಶನ ಪ್ರತಿಷ್ಠಾಪನೆ ನಿರೀಕ್ಷೆಗೂ ಮೀರಿ ಹೆಚ್ಚಾಗಿರುವುದು ಕಂಡುಬಂದಿದೆ.

ಗಣೇಶೋತ್ಸವ ನಡೆಸುತ್ತಿರುವವರು 5, 9, 11,13, 17 ದಿನಗಳವರೆಗೆ ಗಣೇಶನನ್ನೂ ಕೂರಿಸುವುದಕ್ಕೆ ಅನುಮತಿ ಪಡೆದುಕೊಂಡಿದ್ದಾರೆ. ಹಲವರು ಗಣೇಶ ಚತುರ್ಥಿ ಮುಗಿದ ಬಳಿಕ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ. ಇನ್ನೂ ಹದಿನೈದು ದಿನಗಳ ಕಾಲ ಗಣೇಶೋತ್ಸವದ ಹವಾ ಜಿಲ್ಲೆಯೊಳಗೆ ಇರಲಿದೆ.

ನಗರ ಮತ್ತು ಗ್ರಾಮೀಣ ಪ್ರದೇಶದ ಪುಟ್ಟ ಬಾಲಕರು ಕೂಡ ತಮ್ಮ ಬೀದಿಯಲ್ಲಿರುವ ಮನೆಯ ಮುಂಭಾಗ, ಪಕ್ಕದ ಖಾಲಿ ಜಾಗ, ಅಂಗಡಿ ಮನೆಗಳು, ಕಾರ್‌ಶೆಡ್ ಹೀಗೆ ಪುಟ್ಟ ಜಾಗಗಳಲ್ಲೆಲ್ಲಾ ಗಣೇಶನನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಿದ್ದಾರೆ. ಮಕ್ಕಳ ಉತ್ಸಾಹಕ್ಕೆ ತಣ್ಣೀರೆರಚದ ಪೋಷಕರು ಮಕ್ಕಳ ಗಣೇಶ ಪ್ರತಿಷ್ಠಾಪನೆಗೆ ಸಾಥ್ ಕೊಟ್ಟಿದ್ದಾರೆ.

ಮಹಿಳೆಯರು ಪ್ರತಿದಿನ ಬೆಳಗ್ಗೆ ಮಂಟಪದ ಎದುರು ನೀರು ಹಾಕಿ ರಂಗೋಲಿ ಬಿಡಿಸುವುದು, ನೈವೇದ್ಯ, ಪ್ರಸಾದ

ತಯಾರಿಸಿಕೊಡುವುದು, ಪುರುಷರು ಚಿಕ್ಕದಾಗಿ ವಿದ್ಯುತ್ ದೀಪಾಲಂಕಾರ ಮಾಡಿಸಿಕೊಡುವ ಮೂಲಕ ಮಕ್ಕಳನ್ನು ಸಂತಸಪಡಿಸುತ್ತಿರುವುದು ಕಂಡುಬಂದಿದೆ.

ಬಾಲಕರು ಗಣೇಶನ ಪ್ರತಿಷ್ಠಾಪನೆಗೆ ಪೊಲೀಸರಿಂದ ಯಾವುದೇ ಅನುಮತಿಯನ್ನು ಪಡೆದುಕೊಂಡಿಲ್ಲ. ಆದರೂ ಪುಟ್ಟ ಹುಡುಗರ ಗಣೇಶ ಪ್ರತಿಷ್ಠಾಪನೆಗೆ ಪೊಲೀಸರೂ ಕೂಡ ನಿರ್ಬಂಧ ವಿಧಿಸದೆ ರಿಯಾಯಿತಿ ನೀಡಿದ್ದಾರೆ. ಇದರಿಂದ ಮಕ್ಕಳೂ ಕೂಡ ಖುಷಿಯಾಗಿ ಗಣೇಶನ ಆರಾಧನೆಯಲ್ಲಿ ತೊಡಗಿದ್ದಾರೆ. ಪುಳಿಯೋಗರೆ, ಸಿಹಿ ಪೊಂಗಲ್, ಖಾರ ಪೊಂಗಲ್, ಉಪ್ಪಿಟ್ಟು, ಕೇಸರಿಬಾತ್, ಬಿಸಿಬೇಳೆಬಾತ್, ವಾಂಗಿಬಾತ್, ಕಡಲೆಕಾಳು ಗುಗ್ಗರಿ, ಚಿತ್ರಾನ್ನ ಸೇರಿದಂತೆ ನಿತ್ಯ ವಿವಿಧ ತಿಂಡಿಯನ್ನು ತಯಾರಿಸಿ ಪ್ರಸಾದ ರೂಪದಲ್ಲಿ ನೀಡುವ ಮೂಲಕ ಗಣೇಶೋತ್ಸವ ಆಕರ್ಷಣೆಯನ್ನು ಹೆಚ್ಚಿಸಿದ್ದಾರೆ.

3 ಲಕ್ಷ ರು. ಮೌಲ್ಯದ ಗಣಪ:

ಮಂಡ್ಯದ ಬಂದೀಗೌಡ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿರುವ ಗಣಪ 3 ಲಕ್ಷ ರು. ಮೌಲ್ಯದ್ದಾಗಿದೆ. ಇದು ಜಿಲ್ಲೆಯಲ್ಲಿ ಸ್ಥಾಪಿಸಿರುವ ಎಲ್ಲಾ ಗಣೇಶ ವಿಗ್ರಹಗಳಿಗಿಂತಲೂ ದುಬಾರಿ ಗಣಪತಿ ಎನಿಸಿದೆ. ಮಂಡ್ಯ ಕಾ ರಾಜ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಗಣೇಶನನ್ನು ವೈರಲ್ ಮಾಡಲಾಗಿದೆ. ಯುವಕರು ಗಣೇಶನನ್ನು ಹೆಚ್ಚು ಶೇರ್ ಮಾಡುತ್ತಾ ಸಂಭ್ರಮಿಸುತ್ತಿದ್ದಾರೆ. ಹಲವಾರು ಮಂದಿ ಗಣೇಶನನ್ನು ಪ್ರತಿಷ್ಠಾಪನೆಗೆ ಕರೆತರುವ ಸಮಯದಲ್ಲೇ ಜನಪದ ಕಲಾತಂಡಗಳು, ಪಟಾಕಿಗಳ ಸಿಡಿತ, ತಮಟೆ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದ್ದು ಮತ್ತೊಂದು ವಿಶೇಷತೆಯಾಗಿದೆ.

‘ಜಿಲ್ಲೆಯಲ್ಲಿ 3190 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಕಳೆದ ಬಾರಿಗಿಂತಲೂ ೨೦೦ಕ್ಕೂ ಹೆಚ್ಚು ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಹುಡುಗರೂ ಹೆಚ್ಚಿನ ಸಂಖ್ಯೆಯಲ್ಲಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಎಲ್ಲೆಡೆ ಶಾಂತಿಯುತವಾಗಿ ಗಣೇಶ ಉತ್ಸವ ಆಚರಣೆ ನಡೆದಿದೆ.’

- ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್ ಆರಕ್ಷಕರು.