ಸಾರಾಂಶ
ಬಂಗಾರಪೇಟೆ ತಾಲೂಕಿನ ಡಿಕೆಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಕಾಡಿನಲ್ಲಿ ಜಿಂಕೆ, ಕಾಡುಹಂದಿ, ಮೊಲ, ನವಿಲುಗಳು, ಕೋತಿಗಳು ಕರಡಿಗಳು ಸೇರಿದಂತೆ ಅನೇಕ ಪ್ರಾಣಿಗಳಿವೆ ಬೇಸಿಗೆ ಆರಂಭವಾಗುತ್ತಿದ್ದಂತೆ ಕಾಡಿನಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕಾಡಿನಲ್ಲಿ ನೀರಿನ ತೊಟ್ಟಿ ಇಡುವ ಮೂಲಕ ನೀರುಪೂರೈಸಲಾಗುತ್ತಿದೆ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಬೇಸಿಗೆ ಕಾಲ ಆರಂಭವಾಗಿದ್ದು ಕಾಡುಗಳಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ಅವುಗಳಿಗೆ ನೀರು ಪೂರೈಸಲು ಸಿಂಹಘರ್ಜನೆ ವೇದಕೆ ಕಾರ್ಯಕರ್ತರು ಕಾಡಿನೊಳಗೆ ನೀರಿನ ತೊಟ್ಟಿಗಳನ್ನು ಅಳವಡಿಸುವ ಕಾರ್ಯ ಕೈಗೊಂಡಿದ್ದಾರೆ. ತಾಲೂಕಿನ ಡಿಕೆಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಕಾಡಿನಲ್ಲಿ ಜಿಂಕೆ, ಕಾಡುಹಂದಿ, ಮೊಲ, ನವಿಲುಗಳು, ಕೋತಿಗಳು ಕರಡಿಗಳು ಸೇರಿದಂತೆ ಅನೇಕ ಪ್ರಾಣಿಗಳಿವೆ ಬೇಸಿಗೆ ಆರಂಭವಾಗುತ್ತಿದ್ದಂತೆ ಕಾಡಿನಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ನೀರಿಗಾಗಿ ನಾಡಿನತ್ತ ಆಗಮಿಸುತ್ತಿರುವ ಅನೇಕ ಪ್ರಾಣಿಗಳು ನಾಯಿಗಳ ದಾಳಿಗೆ ಬಲಿಯಾಗುತ್ತಿವೆ.ಕಾಡಿನಲ್ಲೇ ನೀರಿನ ವ್ಯವಸ್ಥೆ
ಇದನ್ನು ತಪ್ಪಿಸಲು ಪ್ರಾಣಿ ಪಕ್ಷಿಗಳು ನೀರಿಗಾಗಿ ನಾಡಿನತ್ತ ಬಾರದಂತೆ ತಡೆಯಲು ಅರಣ್ಯ ಇಲಾಖೆ ಸಹ ಶ್ರಮಿಸುತ್ತಿದೆ,ಆದರೂ ಸಮಸ್ಯೆ ನೀಗಿಲ್ಲದ ಕಾರಣ ಕಳೆದ ೧೧ವರ್ಷಗಳಿಂದಲೂ ಸಿಂಹಗರ್ಜನೆ ವೇದಿಕೆಯ ರಾಜ್ಯಾಧ್ಯಕ್ಷರಾದ ಪ್ರಸನ್ನಕುಮಾರಸ್ವಾಮಿ ಮತ್ತು ಅವರ ಬಳಗದಿಂದ ಕಾಡಿನಲ್ಲೆ ನೀರಿನ ತೊಟ್ಟಿಗಳನ್ನು ಸ್ಥಾಪಿಸಿ ಟ್ಯಾಂಕರ್ ಮೂಲಕ ನಿತ್ಯ ನೀರು ಸರಬರಾಜು ಮಾಡಲಾಗುತ್ತಿದೆ. ಈ ವರ್ಷ ಸಹ ದಾನಿಗಳ ನೆರವಿನಿಂದ ಸಿಮೆಂಟ್ ತೊಟ್ಟಿಗಳನ್ನು ಅಳವಡಿಸಿ ಸ್ವಂತ ದುಡಿಮೆಯಿಂದ ಬಂದ ಹಣದಿಂದ ಟ್ಯಾಂಕರ್‌ನಿಂದ ನೀರು ಪೂರೈಸುತ್ತಿದ್ದಾರೆ. ಮನುಷ್ಯರು ಹೇಗೋ ಬೇಸಿಗೆಯಲ್ಲಿ ಹಣ ಕೊಟ್ಟಾದರೂ ನೀರು ಖರೀದಿಸಿ ತಮ್ಮ ದಾಹವನ್ನು ನೀಗಿಸಿಕೊಳ್ಳುತ್ತಾರೆ. ಆದರೆ ಮೂಕ ಪ್ರಾಣಿಗಳ ಹೇಗೆ ದಾಹ ತೀರಿಸಿಕೊಳ್ಳುವುದೆಂದು ಚಿಂತಿಸಿ ಕಳೆದ ೧೧ ವರ್ಷಗಳಿಂದ ಬೇಸಿಗೆಯಲ್ಲಿ ನೀರಿನ ತೊಟ್ಟಿಗಳನ್ನು ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಪ್ರಸನ್ನಕುಮಾರಸ್ವಾಮಿ ತಿಳಿಸಿದರು.ತೊಟ್ಟಿಗೆ ದಾನಿಗಳ ನೆರವು
ದಾನಿಗಳು ಮಾನವೀಯತೆಯಿಂದ ಮುಂದೆ ಬಂದು ಮತ್ತಷ್ಟು ತೊಟ್ಟಿಗಳನ್ನು ದಾನ ಮಾಡಿದರೆ ಕಾಡಿನ ತುಂಬ ಇಟ್ಟು ಪ್ರಾಣಿ ಪಕ್ಷಿಗಳಿಗೆ ನೀರು ಸರಬರಾಜು ಮಾಡಬಹುದೆಂದು ಹೇಳಿದರು. ಸಮಾಜದ ಪ್ರತಿಯೊಬ್ಬರೂ ಸಹ ಬೇಸಿಗೆಯಲ್ಲಿ ತಮ್ಮ ಮನೆಗಳ ಮೇಲೆ ಸಹ ಪಕ್ಷಿಗಳಿಗಾಗಿ ನೀರಿನ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರಲ್ಲದೆ ನಾಡು ಪ್ರಾಣಿಗಳಿಗೂ ಅನುಕೂಲವಾಗಲೆಂದು ಬ್ಯಾಟರಾಯಸ್ವಾಮಿ ಬೆಟ್ಟ ಸುತ್ತಲು ಹಾಗೂ ಡಿಕೆಹಳ್ಳಿ ಮುಖ್ಯ ರಸ್ತೆಯಲ್ಲಿ ಸಹ ತೊಟ್ಟಿಗಳನ್ನು ಅಳವಡಿಸಿ ನೀರು ಈಗಾಗಲೇ ಪೂರೈಸಲಾಗುತ್ತಿದೆ ಎಂದರು.