ಕನ್ನಡಪ್ರಭ ವಾರ್ತೆ ಮದ್ದೂರು
ವಿಧಾನಸಭಾ ಕ್ಷೇತ್ರದ ಆಯ್ದ ಗ್ರಾಮಗಳಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಸಿಎಸ್‌ಆರ್ ಅನುದಾನದಲ್ಲಿ ಬಸ್ ಪ್ರಯಾಣಿಕರ ತಂಗುದಾಣ ಹಾಗೂ ಹೈಮಾಸ್ಟ್ ದೀಪ ಅಳವಡಿಸಲಾಗುತ್ತಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.ತಾಲೂಕಿನ ನಿಲುವಾಗಿಲು,ಅರುವನಹಳ್ಳಿ, ಚುಂಚಗಹಳ್ಳಿ, ಗೇಟ್, ವೈದ್ಯನಾಥಪುರ, ಕರಟಗೆರೆ, ಮುಡಿನಹಳ್ಳಿ, ನೀಲಕಂಠನಹಳ್ಳಿ ಗ್ರಾಮಗಳಲ್ಲಿ ಬಸ್ ಪ್ರಯಾಣಿಕರ ತಂಗುದಾಣ ಕಾಮಗಾರಿ ಪ್ರಗತಿ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.p
ಪ್ರತಿ ಬಸ್ ತಂಗುದಾಣವನ್ನು ತಲಾ 11.1 ಲಕ್ಷ ರು. ವೆಚ್ಚದಲ್ಲಿ ಸಿಆರ್‌ಎಸ್ ಅನುದಾನದಲ್ಲಿ ನಿರ್ಮಿಸಲಾಗುತ್ತಿದೆ. ಕ್ಷೇತ್ರ ವ್ಯಾಪ್ತಿಯ ಮುಟ್ಟನಹಳ್ಳಿ, ವೈದ್ಯನಾಥಪುರ, ಸುಣ್ಣದ ದೊಡ್ಡಿ, ಚಾಮನಹಳ್ಳಿ, ಹರಕನಹಳ್ಳಿ, ಶಿವಪುರ, ದೊಡ್ಡ ಅಂಕನಹಳ್ಳಿ ಹಾಗೂ ಮದ್ದೂರಿನ 23ನೇ ವಾರ್ಡ್‌ನಲ್ಲಿ ತಲಾ 5.50 ಲಕ್ಷದಲ್ಲಿ ಹೈಮಾಸ್ಟ್ ದೀಪದ ನಿರ್ಮಾಣ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ ಎಂದರು.ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಸಿಆರ್‌ಎಸ್ ಅನುದಾನದಲ್ಲಿ 32.5 ಲಕ್ಷ ರು.ವೆಚ್ಚದಲ್ಲಿ ಎರಡು ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದರು.
ಕೇಂದ್ರ ಸಚಿವ ಎಚ್ಡಿಕೆಯವರ ಸಂಸದರ ಅನುದಾನದಲ್ಲಿ ಕ್ಯಾತಘಟ್ಟ, ಕೂಳೆಗೆರೆ, ಯಲ್ಲಾದಹಳ್ಳಿ ಸೇರಿದಂತೆ ಇನ್ನು ಹಲವು ಆಯ್ದ ಗ್ರಾಮಗಳಲ್ಲಿ ಸಮುದಾಯ ಭವನಗಳ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಉಳಿದಿರುವ ಗ್ರಾಮಗಳ ಭವನ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಮ್ಮಣ್ಣ ಹೇಳಿದರು.
ಈ ವೇಳೆ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಚಿಕ್ಕತಿಮ್ಮಯ್ಯ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಕೂಳಗೆರೆ ಶೇಖರ್, ಗ್ರಾಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ, ಸೇರಿದಂತೆ ಹಲವು ಗ್ರಾಮಗಳ ಮುಖಂಡರು ಇದ್ದರು.