ಸ್ಕ್ಯಾನಿಂಗ್ ವಿಭಾಗದ ಬಳಿ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ: ರಾಘವೇಂದ್ರ ಸ್ವಾಮಿ

| Published : Feb 10 2024, 01:49 AM IST

ಸ್ಕ್ಯಾನಿಂಗ್ ವಿಭಾಗದ ಬಳಿ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ: ರಾಘವೇಂದ್ರ ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳ ಸ್ಕ್ಯಾನಿಂಗ್ ವಿಭಾಗದ ಬಳಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಎಸ್. ರಾಘವೇಂದ್ರ ಸ್ವಾಮಿ ಸೂಚನೆ ನೀಡಿದರು.

ಹಾವೇರಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳ ಸ್ಕ್ಯಾನಿಂಗ್ ವಿಭಾಗದ ಬಳಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಎಸ್. ರಾಘವೇಂದ್ರ ಸ್ವಾಮಿ ಸೂಚನೆ ನೀಡಿದರು.

ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ ಶುಕ್ರವಾರ ಜರುಗಿದ ಪಿಸಿ ಮತ್ತು ಪಿಎನ್‌ಡಿಟಿ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ೯ ಸರ್ಕಾರಿ ಹಾಗೂ ೭೨ ಖಾಸಗಿ ಒಳಗೊಂಡಂತೆ ೮೧ ಸ್ಕ್ಯಾನಿಂಗ್ ಸೆಂಟರ್‌ಗಳಿದ್ದು, ನಿಯಮಾನುಸಾರ ಪ್ರತಿ ತಿಂಗಳು ಸ್ಕ್ಯಾನಿಂಗ್ ವರದಿ ನೀಡದ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಸೂಕ್ತ ಕ್ರಮವಹಿಸಲು ಸೂಚನೆ ನೀಡಿದರು.

ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ಸಿಬ್ಬಂದಿ ಹಾಗೂ ಕಾರ್ಯನಿರ್ವಹಿಸುವ ಸಮಯವನ್ನು ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುವ ಸ್ಕ್ಯಾನ್ ಸೆಂಟರ್‌ಗಳಲ್ಲಿ ಪ್ರಸವ ಪೂರ್ವ ಲಿಂಗಪತ್ತೆ ಬಗ್ಗೆ ತೀವ್ರ ನಿಗಾವಹಿಸಬೇಕು. ಸ್ಕ್ಯಾನ್ ಸೆಂಟರ್‌ಗಳಿಗೆ ಹಾಗೂ ಆಸ್ಪತ್ರೆಗಳಿಗೆ ಕಾಲ ಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸಲಹೆ ನೀಡಿದರು.

ಸ್ಕ್ಯಾನ್ ಸೆಂಟರ್‌ಗಳಿಗೆ ಆಗಮಿಸುವ ಗರ್ಭಿಣಿ ಹಾಗೂ ಕುಟುಂಬಸ್ಥರು ಒಂದು ವೇಳೆ ಭ್ರೂಣಪತ್ತೆಗೆ ಒತ್ತಾಯಿಸಿದರೆ, ವೈದ್ಯರು ಅಂತಹವರಿಗೆ ಲಿಂಗಾನುಪಾತ ಬಗ್ಗೆ ತಿಳಿವಳಿಕೆ ನೀಡಬೇಕು ಹಾಗೂ ಭ್ರೂಣ ಪತ್ತೆಗೆ ಇರುವ ದಂಡ ಹಾಗೂ ಶಿಕ್ಷೆ ಬಗ್ಗೆ ಅರಿವು ಮೂಡಿಸಬೇಕು. ಇಂತಹ ಪ್ರಕರಣಗಳ ಮೇಲೆ ಸೂಕ್ಷ್ಮವಾಗಿ ನಿಗಾ ವಹಿಸಬೇಕು. ಭ್ರೂಣ ಪತ್ತೆ ನಿಖರ ಪ್ರಕರಣಗಳು ಕಂಡುಬಂದಲ್ಲಿ ಅಗತ್ಯ ದಾಖಲೆಯೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದರೆ ₹೫೦ ಸಾವಿರ ನೀಡಲಾಗುವುದು ಹಾಗೂ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.ಸ್ಕ್ಯಾನಿಂಗ್ ಯಂತ್ರಕ್ಕೆ ಪರವಾನಗಿ ಪಡೆದವರು ಕಾಲ ಮಿತಿಯೊಳಗೆ ನವೀಕರಿಸಿಕೊಳ್ಳಬೇಕು ಹಾಗೂ ಹೊಸದಾಗಿ ಪರವಾನಗಿ ಪಡೆಯಲು ಅರ್ಜಿ ಸಲ್ಲಿಕೆಯಾದರೆ ತ್ವರಿತವಾಗಿ ಪರಿಶೀಲನೆ ನಡೆಸಿ, ನಿಮಾನುಸಾರ ವಿಲೇಗೊಳಿಸಬೇಕು. ನವೀಕರಣ ಮತ್ತು ಹೊಸದಾಗಿ ಪರವಾನಗಿ ನೀಡುವಾಗ ಪಿಸಿ ಮತ್ತು ಪಿಎನ್‌ಡಿಟಿ ನಿಯಮಾವಳಿಗಳ ಪಾಲನೆ ಕುರಿತಂತೆ ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದರು.

ಒಬ್ಬರೇ ವೈದ್ಯರು ಎರಡು ಸ್ಥಳಗಳಲ್ಲಿ ಸೇವೆ ನೀಡುತ್ತಿದ್ದರೆ ಅವರು ಯಾವ ಸ್ಥಳದಲ್ಲಿ ಎಷ್ಟು ಸಮಯ ಸಿಗುತ್ತಾರೆ ಎಂದು ಸಮಯ ನಮೂದಿಸುವುದು ಕಡ್ಡಾಯವಾಗಿದೆ. ಒಬ್ಬ ವೈದ್ಯರು ಎರಡು ಕಡೆಗಳಲ್ಲಿ ಮಾತ್ರ ಸೇವೆ ನೀಡಲು ಅವಕಾಶವಿದೆ. ನರ್ಸಿಂಗ್ ಹೋಂಗಳ ಸ್ಥಳ ಬದಲಾವಣೆ ಅರ್ಜಿಗಳನ್ನು ನಿಯಮಾನುಸಾರ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಪಿಸಿ ಮತ್ತು ಪಿಎನ್‌ಡಿಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ, ಕಾನೂನು ತಜ್ಞ ಎಂ.ವಿ. ಕುಂಠೆ, ಮಕ್ಕಳ ತಜ್ಞ ಡಾ. ವಿಲಾಸಗೌಡ ಹಿರೇಗೌಡರ್, ರೇಡಿಯಾಲಜಿಸ್ಟ್ ಡಾ. ಸಿ.ಎಂ. ಮಲ್ಲಿಕಾರ್ಜುನ, ಡಾ. ಚಿನ್ಮಯ ಕುಲಕರ್ಣಿ, ಡಾ. ಅರುಣಕುಮಾರ ಮಲ್ಲಾಡದ, ಹಿರಿಯ ಪ್ರಸೂತಿ ತಜ್ಞರಾದ ಡಾ. ತ್ರಿವೇಣಿ ಹೆಗ್ಗೇರಿ, ಇಡಾರಿ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಪರಿಮಳಾ ಜೈನ್ ಉಪಸ್ಥಿತರಿದ್ದರು.