ಹೆಣ್ಣುಮಕ್ಕಳ ಸುರಕ್ಷತೆಗೆ ಸಿಸಿ ಕ್ಯಾಮರಾಗಳ ಅಳವಡಿಸಿ: ಡಾ.ಪ್ರಭಾ

| Published : Sep 26 2024, 11:29 AM IST

ಸಾರಾಂಶ

ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಅಧಿಕಾರಿಗಳಿಂದ ಸೃಜನಾತ್ಮಕ, ಕ್ರಿಯಾತ್ಮಕ ಆಲೋಚನೆಗಳು ಮೂಡಲಿ. ಜಿಲ್ಲೆಯ ಅಭಿವೃದ್ಧಿ ಮತ್ತು ಬ್ರಾಂಡ್ ದಾವಣಗೆರೆ ಸಾಧನೆಗೆ ಸದಾ ಬದ್ಧರಿದ್ದೇವೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಹೇಳಿದ್ದಾರೆ.

- ದುರ್ಗಾ ಪಡೆಯ ಸಂಖ್ಯೆಯನ್ನು ಹೆಚ್ಚಿಸಿ, ಜಿಲ್ಲಾ ಆಸ್ಪತ್ರೆಯಲ್ಲಿ ಹಗಲಿರುಳು ಭದ್ರತೆ ನೀಡಲು ಸಂಸದೆ ಸೂಚನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಅಧಿಕಾರಿಗಳಿಂದ ಸೃಜನಾತ್ಮಕ, ಕ್ರಿಯಾತ್ಮಕ ಆಲೋಚನೆಗಳು ಮೂಡಲಿ. ಜಿಲ್ಲೆಯ ಅಭಿವೃದ್ಧಿ ಮತ್ತು ಬ್ರಾಂಡ್ ದಾವಣಗೆರೆ ಸಾಧನೆಗೆ ಸದಾ ಬದ್ಧರಿದ್ದೇವೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಮೊದಲ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಬ್ರಾಂಡ್ ದಾವಣಗೆರೆಗಾಗಿ ಅಧಿಕಾರಿಗಳು ಸೃಜನಾತ್ಮಕವಾಗಿ, ಕ್ರಿಯಾತ್ಮಕ ಆಲೋಚನೆಗಳ ಮೂಲಕ ಹೊಸತನ್ನು ತರಲು, ಹೊಸತು ಸಾಧಿಸಲು ಗಮನಹರಿಸಲಿ ಎಂದರು.

ದುರ್ಗಾ ಪಡೆ ಶಕ್ತಿ ಹೆಚ್ಚಿಸಬೇಕು:

ಕಾನೂನು, ಸುವ್ಯವಸ್ಥೆ, ಮಹಿಳಾ ರಕ್ಷಣೆಗೆ ಮೊದಲ ಆದ್ಯತೆಯಾಗಿದೆ. ಮಹಿಳೆಯರ ರಕ್ಷಣೆ, ಸುರಕ್ಷೆಗಾಗಿ ಸಿಸಿ ಟಿವಿ ಕ್ಯಾಮೆರಾಗಳ ಜೊತೆಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ದುರ್ಗಾ ಪಡೆಯ ಶಕ್ತಿಯನ್ನು ಸಹ ಹೆಚ್ಚಿಸಬೇಕು. ಜನರು ಶಾಂತಿ, ನೆಮ್ಮಯಿಂದ ಜೀವನ ಸಾಗಿಸಲು ಕಾನೂನು ಸುವ್ಯವಸ್ಥೆ ಉತ್ತಮವಾಗಿರಬೇಕು. ವೈದ್ಯರು, ಮಹಿಳೆಯರು, ಸಾರ್ವಜನಿಕರ ಸುರಕ್ಷತೆ ಅತಿ ಮುಖ್ಯ. ಅದಕ್ಕಾಗಿ ನಗರ, ಜಿಲ್ಲೆಯ ಎಲ್ಲ ಪಟ್ಟಣ ಪ್ರದೇಶದಲ್ಲಿ ಸಿಸಿ ಕ್ಯಾಮೆರಾಗಳ ಅ‍ಳವಡಿಕೆ ಹೆಚ್ಚಿಸಬೇಕು. ವೈದ್ಯರು, ಮಹಿಳಾ ವೈದ್ಯರ ಸುರಕ್ಷತೆಗಾಗಿ ಜಿಲ್ಲಾಸ್ಪತ್ರೆ ಸೇರಿದಂತೆ ಅಗತ್ಯವಿರುವ ಕಡೆ ಸಿಸಿ ಕ್ಯಾಮೆರಾ ಅಳವಡಿಸಿ. ರಾತ್ರಿ ವೇಳೆ ಜಿಲ್ಲಾಸ್ಪತ್ರೆ ಬಳಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಿ ಎಂದು ಸೂಚಿಸಿದರು.

ಮೆರವಣಿಗೆಗಳ ಮೇಲೆ ನಿಗಾ ಇರಲಿ:

ದಸರಾ ಹಬ್ಬ ಹಾಗೂ ಅನೇಕ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಇವೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ ಈ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಕೆಲ ಗ್ರಾಮೀಣ ಪ್ರದೇಶದಲ್ಲಿ ಮನೆಯಿಂದ ಹೋದ ಕೇವಲ ಒಂದೇ ಗಂಟೆಯಲ್ಲಿ ಮನೆಗಳ್ಳತನ ಆದ ಬಗ್ಗೆ ವರದಿ ಇದೆ. ಹೀಗಾಗದಂತೆ ತಡೆಯುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕು. ಮಹಿಳೆಯರ ಸರಗಳ್ಳತನ, ಮಹಿಳೆಯರು ಒಂಟಿಯಾಗಿ ಹೋಗುವಾಗ ಬೆದರಿಕೆಯೊಡ್ಡುವವರ ಮೇಲೆ ನಿಗಾ ಇಡಬೇಕು. ಸಿಸಿ ಕ್ಯಾಮೆರಾ ಹೆಚ್ಚಿಸಲು ಅಗತ್ಯ ಅನುದಾನದ ಅವಕಾಶ ಮಾಡಿಕೊಳ್ಳಿ ಎಂದು ಡಾ.ಪ್ರಭಾ ಹೇಳಿದರು.

ಜನರಿಗೆ ಅಲೆದಾಡಿಸಬೇಡಿ:

ಸಾರ್ವಜನಿಕರು ವಿವಿಧ ಕೆಲಸ, ಕಾರ್ಯಕ್ಕೆ ಸರ್ಕಾರಿ ಕಚೇರಿಗೆ ಬರುತ್ತಾರೆ. ಬಂದವರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ. ಸಾರ್ವಜನಿಕರ ಬಳಕೆಗೂ ಶೌಚಾಲಗಳಲ್ಲಿ ಅವಕಾಶ ಕೊಟ್ಟು, ಅವುಗಳ ಸೂಕ್ತ ನಿರ್ವಹಣೆ ಮಾಡಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ಜನರ ಕೆಲಸ, ಕಾರ್ಯ ತ್ವರಿತವಾಗಿ ಮಾಡಿಕೊಡಿ. ಸೌಲಭ್ಯ, ಕೆಲಸ ಕಾರ್ಯಕ್ಕಾಗಿ ಜನಪ್ರತಿನಿಧಿಗಳ ಬಳಿ ಜನರು ಹೋಗದಂತೆ ಸರಿಯಾಗಿ ಕೆಲಸ ಮಾಡಿಕೊಡಿ ಎಂದು ವಿವಿಧ ಇಲಾಖೆ ಅಧಿಕಾರಿಗಳಿಗೆ ಅವರು ಸೂಚ್ಯವಾಗಿ ತಿಳಿಸಿದರು.

ಸಂಸದರ ಆದರ್ಶ ಗ್ರಾಮ:

ಜಿಲ್ಲೆಯ ಎಲ್ಲ ತಾಲೂಕುಗಳ ಒಂದು ಗ್ರಾಮವನ್ನು ಸಂಸದರ ಆದರ್ಶ ಗ್ರಾಮಕ್ಕಾಗಿ ಆಯ್ಕೆ ಮಾಡಬೇಕು. ಹೆಚ್ಚು ಜನಸಂಖ್ಯೆಯಿಂದ ಕೂಡಿದ್ದು, ಮೂಲ ಸೌಕರ್ಯಗಳ ಕೊರತೆ ಇರುವ ಗ್ರಾಮ ಅದಾಗಿರಬೇಕು. ಅಂತಹ ಗ್ರಾಮ ಆಯ್ಕೆ ಮಾಡಿ. ಸಂಸದರ ಆದರ್ಶ ಗ್ರಾಮ ಯೋಜನೆಗೆ ಯಾವುದೇ ಪ್ರತ್ಯೇಕ ಅನುದಾನ ಇರುವುದಿಲ್ಲ. ಇರುವ ಯೋಜನೆಗಳನ್ನೇ ಬಳಸಿ, ಅಲ್ಲಿ ಎಲ್ಲ ವಲಯಗಳಲ್ಲಿ ಅಭಿವೃದ್ಧಿಪಡಿಸುವುದೇ ಸಂಸದರ ಆದರ್ಶ ಗ್ರಾಮ ಯೋಜನೆ ವಿಶೇಷವಾಗಿದೆ ಎಂದು ಸಂಸದರು ತಿಳಿಸಿದರು.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಓ ಸುರೇಶ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

- - -

ಬಾಕ್ಸ್‌ * ನಗರ, ಗ್ರಾಮೀಣ ಭಾಗಕ್ಕೆ ಶುದ್ಧ ನೀರು ಪೂರೈಸಿ

ನಗರ, ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಓ‍ವರ್ ಹೆಡ್‌ ಟ್ಯಾಂಕ್‌ಗಳ ಸ್ವಚ್ಛತೆ ಮಾಡಿಸಿ, ಕ್ಲೋರಿನೇಷನ್‌ ಮಾಡಬೇಕು. ಪೈಪ್‌ ಒಡೆದು, ಸೋರಿಕೆ ಆಗುತ್ತಿದ್ದರೆ ಅದನ್ನು ಶೀಘ್ರ ಸರಿಪಡಿಸಬೇಕು. ಆಗಾಗ ನೀರಿನ ಪರೀಕ್ಷೆ ಮಾಡಿಸಬೇಕು. ಹೊನ್ನಾಳಿ ತಾಲೂಕು ಕತ್ತಿಗೆ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿ ಫ್ಲೋರೈಡ್‌ ಅಂಶ ಹೆಚ್ಚಾಗಿರುವ ನೀರು ಪೂರೈಸುತ್ತಿರುವ ಬಗ್ಗೆ ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ಅಲ್ಲಿಗೆ ಶುದ್ಧ ನೀರು ಪೂರೈಸುವ ಕೆಲಸ ಆಗಲಿ ಎಂದು ಸಂಸದರು ಸೂಚಿಸಿದರು. ಅದಕ್ಕೆ ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್ ಮಾತನಾಡಿ, ಕತ್ತಿಗೆ ಗ್ರಾಮಕ್ಕೆ ಶುದ್ಧ ನೀರಿನ ಘಟಕೆ ನೀಡುವುದಾಗಿ ಪ್ರತಿಕ್ರಿಯಿಸಿದರು.

ಸಂಸದೆ ಡಾ.ಪ್ರಭಾ ಮಾತನಾಡಿ, ಜಿಲ್ಲೆಯು ಹೈನುಗಾರಿಕೆಯಲ್ಲಿಯೂ ಮುಂದಿದೆ. ಹಸು, ಎಮ್ಮೆ, ಕುರಿಗಳ ಸಾಕಾಣಿಕೆ ಮಾಡುತ್ತಿದ್ದಾರೆ. ಜಾನುವಾರು ವಿವಿಧ ಕಾಯಿಲೆಗಳಿಗೆ ತುತ್ತಾದಾಗ ಚಿಕಿತ್ಸೆಗಾಗಿ ದೂರದ ಊರಿಗೆ ಹೋಗಬೇಕಾದ ಸ್ಥಿತಿ ಇದೆ ಎಂದು ಜನ ಹೇಳುತ್ತಾರೆ. ಇದಕ್ಕಾಗಿ ಜಿಲ್ಲೆಯ 153 ಪಶು ಚಿಕಿತ್ಸಾಲಯಗಳಲ್ಲಿರುವ ಸಿಬ್ಬಂದಿಗೆ ತರಬೇತಿ ನೀಡುವುದು ಮತ್ತು ಮೈತ್ರಿ, ಪಶುಸಖಿಗಳಿಗೆ ತರಬೇತಿ ಕೊಡಿಸಿ ರೈತರ ಜಾನುವಾರುಗಳ ಚಿಕಿತ್ಸೆಗೆ ಕ್ರಮ ವಹಿಸಲು ಪಶುಸಂಗೋಪನಾ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಇಲಾಖೆಗಳಿಂದ ಕೈಗೊಳ್ಳಲಾಗುವ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದ್ದಾಗಿರಬೇಕು. ಟೆಂಡರ್‌ನಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿಗಳಾಗಬಾರದು. ಸಾರ್ವಜನಿಕರು ಸಮಸ್ಯೆ ತರುವಂತಿರಬಾರದು. ಪ್ರತಿ ತ್ರೈಮಾಸಿಕದಲ್ಲಿ ದಿಶಾ ಸಭೆ ನಡೆಸಿ, ಕೇಂದ್ರ ಪುರಸ್ಕೃತ ಯೋಜನೆಗಳ ಸಮಗ್ರವಾಗಿ ಪರಿಶೀಲನೆ ನಡೆಸುತ್ತೇನೆ. ಅಧಿಕಾರಿಗಳು, ಜನಪ್ರತಿನಿಧಿಗಳು ಒಂದು ಕುಟುಂಬದಂತೆ ಕೆಲಸ ಮಾಡಿ, ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಆಗ ಜನರು ನೆಮ್ಮದಿಯಿಂದಿರಲು ಸಾಧ್ಯ ಎಂದು ಅಧಿಕಾರಿಗಳಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಲಹೆ ನೀಡಿದರು.

- - -

ಬಾಕ್ಸ್‌-2 * ಬ್ಯಾಂಕ್‌ಗಳಿಗೆ ಸಂಸದೆ ಡಾ.ಪ್ರಭಾ ಚಾಟಿ - ಶೈಕ್ಷಣಿಕ ಸಾಲ ನೀಡಲು ಮೀನಾ-ಮೇಷ ಸರಿಯಲ್ಲ

- ಸಾಮಾಜಿಕ ಭದ್ರತೆ ಹಣ ಸಾಲಕ್ಕೆ ಮುರುಗಡೆ ಬೇಡ ದಾವಣಗೆರೆ: ವೃತ್ತಿ ಪರ ಕೋರ್ಸ್‌ ವ್ಯಾಸಂಗಕ್ಕೆ ಹೋಗಲು ವಿದ್ಯಾರ್ಥಿಗಳಿಗೆ ಯಾವುದೇ ಷರತ್ತಿಲ್ಲದೇ, ಶೈಕ್ಷಣಿಕ ಸಾಲ ಒದಗಿಸಬೇಕು. ಆದರೆ, ಕೆಲ ಬ್ಯಾಂಕ್‌ಗಳು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನೇ ನೀಡುತ್ತಿಲ್ಲ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಬ್ಯಾಂಕ್ ಅಧಿಕಾರಿಗಳ ಧೋರಣೆಗೆ ಬೇಸರ ವ್ಯಕ್ತಪಡಿಸಿದರು.

ಜಿಪಂ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯ ಚೊಚ್ಚದ ದಿಶಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬಾಪೂಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಅಂತಿಮ ವರ್ಷದ ವಿದ್ಯಾರ್ಥಿನಿಗೆ ತಂದೆ, ತಾಯಿ ಇಲ್ಲ. ಆ ವಿದ್ಯಾರ್ಥಿನಿಗೆ ಪ್ರವೇಶ ಕೈಬಿಟ್ಟು ಹೋದ ವಿಷಯ ಕೇಳಿ ನೋವಾಯಿತು. ಇಂತಹದ್ದು ಮತ್ತೆ ಮರುಕಳಿಸಬಾರದು. ಬಡ, ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವೃತ್ತಿ ಪರ ಕೋರ್ಸ್‌ ಗೆ ಶೈಕ್ಷಣಿಕ ಸಾಲ ನೀಡಲು ಬ್ಯಾಂಕ್ ಅಧಿಕಾರಿಗಳಿಗೆ ಲೀಡ್ ಬ್ಯಾಂಕ್‌ ವ್ಯವಸ್ಥಾಪಕರು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ತಾಕೀತು ಮಾಡಿದರು.

ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ ನೀಡಲಾಗುತ್ತಿದೆ. ಆದರೆ, ಬ್ಯಾಂಕ್‌ನವರು ಅದನ್ನು ಸಾರಕ್ಕೆ ಮುರಿದುಕೊಳ್ಳುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿವೆ. ಮಾಸಾಶನವನ್ನು ಅಂತಹ ಫಲಾನುಭವಿಗಳ ಜೀವನ ನಿರ್ವಹಣೆಗಾಗಿ ಸರ್ಕಾರ ಸಾಮಾಜಿಕ ಭದ್ರತೆಗಾಗಿ ನೀಡುತ್ತಿದೆ. ಅದೇ ಹಣವನ್ನು ಅಂತಹವರ ಸಾಲಕ್ಕೆ ಜಮಾ ಮಾಡಿಕೊಳ್ಳುವುದೂ ಸರಿಯಲ್ಲ ಎಂದು ಆಕ್ಷೇಪಿಸಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಸಾಮಾಜಿಕ ಭದ್ರತೆಯ ಹಣವನ್ನು ಫಲಾನುಭವಿ ಸಾಲಕ್ಕೆ ಮುರಿದುಕೊಂಡ ಬ್ಯಾಂಕ್ ವೊಂದರ ಶಾಖಾ ವ್ಯವಸ್ಥಾಪಕರ ವಿರುದ್ಧ ಆರ್‌ಬಿಐಗೆ ವರದಿ ಮಾಡಲಾಗಿದೆ ಎಂದು ಹೇಳಿದರು.

- - - -25ಕೆಡಿವಿಜಿ5, 6:

ದಾವಣಗೆರೆ ಜಿಪಂ ಸಭಾಂಗಣದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಚೊಚ್ಚಲ ದಿಶಾ ಸಮಿತಿ ಸಭೆಯಲ್ಲಿ ಮಾತನಾಡಿದರು.