ಸಾರಾಂಶ
ನಗರದ ಆಲಿ ಅಸ್ಕರ್ ರಸ್ತೆಯಲ್ಲಿರುವ ಮಾಪನ ಸೌಧದ ಪಕ್ಕದಲ್ಲಿ ಆಹಾರಸೌಧ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಗುದ್ದಲಿಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಅನ್ನಭಾಗ್ಯ ಯೋಜನೆಯನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಆಹಾರಸೌಧ ನಿರ್ಮಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಸೋಮವಾರ ನಗರದ ಆಲಿ ಅಸ್ಕರ್ ರಸ್ತೆಯಲ್ಲಿರುವ ಮಾಪನ ಸೌಧದ ಪಕ್ಕದಲ್ಲಿ ಆಹಾರಸೌಧ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈವರೆಗೆ ಆಹಾರ ಇಲಾಖೆಗೆ ಸ್ವಂತ ಕಟ್ಟಡ ಇರಲಿಲ್ಲ. ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಡೆಯುತ್ತಿತ್ತು. ನಾಗರಿಕ ಸರಬರಾಜು ಇಲಾಖೆ ಮತ್ತು ಮೌಲ್ಯಮಾಪನ ಇಲಾಖೆಗೆ ಸ್ವಂತ ಕಟ್ಟಡವಿದೆ. ಆಹಾರ ಇಲಾಖೆಯಿಂದಲೇ ಅನ್ನಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಅದಕ್ಕಾಗಿ ವ್ಯವಸ್ಥಿತವಾದ ಕಟ್ಟಡದ ಅಗತ್ಯತೆ ಇತ್ತು. ಆಹಾರ ಸೌಧ ನಿರ್ಮಾಣಗೊಂಡ ನಂತರ ಆಹಾರ ಇಲಾಖೆಯ ಎಲ್ಲ ಕಚೇರಿಗಳು ಈ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದ್ದು ಒಂದು ಕಡೆಯಿಂದ ಆಡಳಿತ ನಡೆಯಲು ಆರಂಭವಾಗುತ್ತದೆ ಎಂದು ಹೇಳಿದರು.ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಗಳು ಸ್ವಂತ ಕಟ್ಟಡಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತಿರುತ್ತವೆ. ಆದರೆ ಆಹಾರ ಇಲಾಖೆಗೆ ಸ್ವಂತ ಕಟ್ಟಡ ಇರಲಿಲ್ಲ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಆಲಿ ಅಸ್ಕರ್ ರಸ್ತೆಯಲ್ಲಿರುವ ಮಾಪನ ಸೌಧದ ಪಕ್ಕದಲ್ಲಿ 30 ಸಾವಿರ ಅಡಿ ಜಾಗದಲ್ಲಿ 49.50 ಕೋಟಿ ರು.ವೆಚ್ಚದಲ್ಲಿ ಆಹಾರಸೌಧ ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಇಲಾಖೆಯ ಸಚಿವರಾದ ಬೈರತಿ ಸುರೇಶ್ ಉಪಸ್ಥಿತರಿದ್ದರು.