ಸಾರಾಂಶ
ವಿದ್ಯುತ್ ಗೋಪುರ, ಕಾರಿಡಾರ್‌ಗೆ ಸಂಬಂಧಿಸಿದಂತೆ ಭೂ ಪರಿಹಾರ ಬೆಳೆ, ಮರ, ಮಾಲೀಕತ್ವದ ನಷ್ಟ ಪರಿಹಾರ ನೀಡಲು ಸರ್ಕಾರ ದರ ನಿಗದಿಪಡಿಸಿದೆ
ಡಂಬಳ: ರೈತರಿಗೆ ಪರಿಹಾರ ನೀಡದೇ ಹೊಲಗಳಲ್ಲಿ ವಿದ್ಯುತ್ ಪ್ರಸರಣ ಗೋಪುರ ನಿರ್ಮಾಣ ಹಾಗೂ ಕಾರಿಡಾರ್ ಲೈನ್ ಅಳವಡಿಸಲು ಬಿಡುವುದಿಲ್ಲ ಎಂದು ರೈತರಾದ ಮಹೇಶ ಗಡಗಿ, ನಿರ್ಮಲಾ ಗಡಗಿ, ಬಸುರಡ್ಡಿ ಬಂಡಿಹಾಳ ಮತ್ತಿತರ ರೈತರು ಹೇಳಿದ್ದಾರೆ.
ಹೊಸಪೇಟೆಯತ್ತ ಸಾಗಿರುವ ಕೆಪಿಟಿಸಿಎಲ್‌ನ 400 ಕೆವಿ ಲೈನ್ ಕಾಮಗಾರಿ ತಡೆದಿರುವ ರೈತರು, ಪರಿಹಾರ ನೀಡುವಂತೆ ಪಟ್ಟು ಹಿಡಿದ್ದಾರೆ.ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್)ದಿಂದ ರೈತರ ಜಮೀನಿನಲ್ಲಿ ಬೃಹತ್ ವಿದ್ಯುತ್ ಪ್ರಸರಣ ಗೋಪುರ ನಿರ್ಮಿಸಿ, ವಿದ್ಯುತ್ ತಂತಿ (ಕಾರಿಡಾರ್ ಲೈನ್) ಅಳವಡಿಸಲಾಗುತ್ತಿದೆ. ಪರಿಹಾರ ನೀಡದ ಬಗ್ಗೆ ಕೇಳಿದರೆ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಈ ಭಾಗದ ಬಹುತೇಕ ಜಮೀನುಗಳಲ್ಲಿ 2017-2018ರಲ್ಲಿ ಕೆಪಿಟಿಸಿಎಲ್ ಗದಗ ವತಿಯಿಂದ ವಿದ್ಯುತ್ ಗೋಪುರ, ಕಾರಿಡಾರ್‌ಗೆ ಸಂಬಂಧಿಸಿದಂತೆ ಭೂ ಪರಿಹಾರ ಬೆಳೆ, ಮರ, ಮಾಲೀಕತ್ವದ ನಷ್ಟ ಪರಿಹಾರ ನೀಡಲು ಸರ್ಕಾರ ದರ ನಿಗದಿಪಡಿಸಿದೆ. ಆದರೆ ರೈತರಿಗೆ ಮಾತ್ರ ಈ ವರೆಗೂ ಪರಿಹಾರ ಸಿಕ್ಕಿಲ್ಲ. ಕೆಲವೆಡೆ ವಿದ್ಯುತ್ ತಂತಿ ಹರಿದುಬಿದ್ದ ಪ್ರಕರಣಗಳೂ ನಡೆದಿವೆ.ಕೆಪಿಟಿಸಿಎಲ್‍ನ ಗದಗ ಮೇಜರ್ ವರ್ಕ್‌ನವರು ವಿದ್ಯುತ್ ಗೋಪುರಗಳನ್ನು ಅಳವಡಿಸಿದ್ದು, ಪರಿಹಾರ ನೀಡಿದ್ದಾರೆಯೋ ಇಲ್ಲವೋ ಗೊತ್ತಿಲ್ಲ. ಕಾರಿಡಾರ್ ಲೈನ್‍ಗಳ ನಿರ್ವಹಣೆ ಮಾತ್ರ ನಮ್ಮ ಜವಾಬ್ದಾರಿ. ವಿದ್ಯುತ್ ಗೋಪುರದ ಪರಿಹಾರದ ವಿಷಯವಾಗಿ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಎಡಬ್ಲ್ಯೂಎಸ್ ಆರ್.ಎಸ್. ಕರ್ಜಗಿ ಹೇಳಿದರು.