ಮದ್ದೂರು ತಾಲೂಕಿನ ಗೊರವನಹಳ್ಳಿಯಲ್ಲಿ ಶ್ರೀಮಾರಮ್ಮ ದೇವಿ ಮತ್ತು ಬಸವಪ್ಪ ದೇವಾಲಯದ ವಿಗ್ರಹ ಹಾಗೂ ಶಿಖರ ಕಳಶ ಸ್ಥಾಪನೆ ಮಹೋತ್ಸವ ನ.16ರಿಂದ 18ರ ವರೆಗೆ ಶ್ರೀಮಾರಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಗೊರವನಹಳ್ಳಿಯಲ್ಲಿ ಶ್ರೀಮಾರಮ್ಮ ದೇವಿ ಮತ್ತು ಬಸವಪ್ಪ ದೇವಾಲಯದ ವಿಗ್ರಹ ಹಾಗೂ ಶಿಖರ ಕಳಶ ಸ್ಥಾಪನೆ ಮಹೋತ್ಸವ ನ.16ರಿಂದ 18ರ ವರೆಗೆ ಶ್ರೀಮಾರಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾರಮ್ಮ ಸೇವಾ ಟ್ರಸ್ಟ್ ಕಾರ್ಯದರ್ಶಿ ಯು.ಎಸ್.ರವಿ ತಿಳಿಸಿದರು.

ದೇಗುಲದ ಆವರಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಅಂತಿಮ ಸಿದ್ಧತೆಗಳನ್ನು ಗ್ರಾಮಸ್ಥರು, ಮುಖಂಡರು ಹಾಗೂ ಯಜಮಾನರುಗಳೊಂದಿಗೆ ಪರಿಶೀಲಿಸಿ ಮಾತನಾಡಿ, ನ.16ರಂದು ಬೆಳಗ್ಗೆ 6 ಗಂಟೆಗೆ ದೇವಿ ಅನುಜ್ಞೆ ಆಗೋದಕ ಯಾಗಶಾಲಾ ಪ್ರವೇಶ, ಪುಣ್ಯಾಹ, ಪಂಚಗವ್ಯ ಸಾಧನ. ಪ್ರೋಕ್ಷಣ ಋತ್ವಿಜಾಧಿಕಾರ ಸ್ವೀಕಾರ, ರಕ್ಷಾಬಂಧನ, ಧಾರ್ಮಿಕ ಧ್ವಜಾರೋಹಣ ಅಂಕುರಾರ್ಪಣಾ, ಬ್ರಹ್ಮಕೂರ್ಚಾ ಬಂಧನ, ಪ್ರತಿಮಾ ಬಿಲಾಧಿವಾಸ ವಾಸ್ತು. ರಾಕ್ಷಘ್ನ ದಿಕ್ಷಾಲಕ. ನವಗ್ರಹ ಪೂಜೆ ಸಂಕ್ಷಿಪ್ತ ಆಹ್ವಾನಿತ ದೇವತಾ ಹೋಮ, ಪರ್ಯಾಗ್ನಿಕರಣ, ಲಘು ಪೂರ್ಣಾಹುತಿ‌ ನಡೆಯಲಿದೆ ಎಂದರು.

ನ.17ರಂದು ಚಂಡಿ ಪಾರಾಯಣ, ಧಾನ್ಯಾಧಿವಾಸ, ಕ್ಷೀರಾಧಿವಾಸ ಲಲಿತಾ ಸಹಸ್ರನಾಮ ಹಾಗೂ ಲಲಿತಾ ತ್ರಿಶತೀ ಪಾರಾಯಣ ಪ್ರಷಾಧಿವಾಸ, ಪ್ರಧಾನ ಕಳಶ ಸ್ಥಾಪನೆ, ಶಿಖರ ಕಲಶ ದೇವತಾ ಸ್ಥಾಪನೆ ದುರ್ಗಾ ಹೋಮ, ಪರಿವಾರ ದೇವತಾ, ಹೋಮ. ಲಘು ಪೂರ್ಣಾಹುತಿ ಶಯ್ಯಾಧಿವಾಸ, ಗೀತ ಸೇವೆ ಪೀಠ ಪೂಜೆ, ಯಂತ್ರ-ನವರತ್ನ ಸ್ಥಾಪನೆ, ಅಷ್ಟಬಂಧನ ನಡೆಯಲಿದೆ ಎಂದರು.

ನ.18 ರಂದು ಬೆಳಗ್ಗೆ 4 ಗಂಟೆಗೆ ಗಣಪತಿ ಪೂಜೆ, ಶಿಖರ ಕಳಶ ಸ್ಥಾಪನೆ. ನ್ಯಾಸ, ಪ್ರಾಣ ಪ್ರತಿಷ್ಠಾಪನೆ ಮಹಾಭಿಷೇಕ ಗ್ರಾಮದೇವತಾ ಹಾಗೂ ಶಿಖರ ಕಳಶ ದೇವತಾ ಸಹಿತ ಹೋಮ, ಕಲಾ ಹೋಮ, ಪ್ರಧಾನ ಹೋಮ, ಮಹಾಪೂರ್ಣಾಹುತಿ ಕುಂಭಾಭಿಷೇಕ, ವಿಶೇಷ ಅಲಂಕಾರ, ಮಹಾನೈವೇದ್ಯ ರಂಭಾ ಸ್ತಂಭ ಛೇದನ, ಸಂವತ್ಸಧೇನು ದರ್ಶನ, ದರ್ಪಣ ದರ್ಶನ ಮಹಾಮಂಗಳಾರತಿ, ರಾಷ್ಟ್ರಾಶೀರ್ವಾದ, ರಾಜೋಪಚಾರ ಸೇವೆ ತೀರ್ಥ ಪ್ರಸಾದ ವಿನಿಯೋಗವಿದೆ ಎಂದು ಹೇಳಿದರು.

ತಂತ್ರ ರತ್ನ ಪುತುಮನ ಮಹೇಶ್ವರನ್ ನಂಬೋದರಿ ಕೇರಳ ಹಾಗೂ ವಿದ್ವಾನ್ ಪ್ರಸಾದ್ ಅಘೋರ ಶ್ರೀ ಅಘೋರ ಭದ್ರಕಾಳಿ ಶಕ್ತಿ ಪೀಠ ಹಲಗೂರು ಇವರುಗಳ ಆಚಾರ್ಯತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ನ.18ರ ಬುಧವಾರ ಶಿವಾರ ಉಮೇಶ ಮತ್ತು ತಂಡದದಿಂದ ಭಕ್ತಿಸುಧೆ, ಬೆಳಗ್ಗೆ 10ಗಂಟೆಗೆ ದೇಗುಲದ ಆವರಣದಲ್ಲಿ ಸುಮಾರು 20 ಸಾವಿರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದ್ದು, ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮಿಜಿ, ಕೆಂಗೇರಿ ವಿಶ್ಚ ಒಕ್ಕಲಿಗರ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥಸ್ವಾಮಿಜಿ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜಲ ಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಕೆ.ಎಂ.ಉದಯ್ ಸೇರಿದಂತೆ ಹಲವು ಗಣ್ಯರು ಆಗಮಿಸುವರು ಎಂದರು.

ನ.16ರ ಬೆಳಗ್ಗೆ 6 ಗಂಟೆಗೆ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪೂಜೆ ಮತ್ತು ಕರಗದ ಮಾರಮ್ಮ ತಾಯಿ ವಿಗ್ರಹವನ್ನು ವಿವಿಧ ವಾದ್ಯಗಳ ಸಮೇತ ಮೆರವಣಿಗೆ ಮೂಲಕ ಪೇಟೆ ಬೀದಿ ಮುಖಾಂತರ ಬಂದು ಮದ್ದೂರಮ್ಮನ‌ ಮಟ್ಟ ಮನೆ ಮುಖಾಂತರ ಮದ್ದೂರಿನ ಪ್ರಮುಖ ಬೀದಿಯಲ್ಲಿ ಬಂದು ಸಂಜೆ ಟಾಕೀಸ್ ಮುಂಭಾಗ ಟ್ಯಾಂಕ್ ರಸ್ತೆ ಮುಖಾಂತರ ಗೊರವನಹಳ್ಳಿ ಮಾರಮ್ಮನ ದೇವಸ್ಥಾನಕ್ಕೆ ಮೆರವಣಿಗೆ ಸಮೇತವಾಗಿ ಹೋಗಿ ದೇವರ ಪ್ರತಿಷ್ಠಾಪನೆ ಆಗಲಿದೆ ಎಂದರು.

ಈ ವೇ‍ಳೆ ಗ್ರಾಮದ‌ ಮುಖಂಡರಾದ ಸಿದ್ದರಾಜು, ಜಿ.ಬಿ.ಲಿಂಗಯ್ಯ, ಕೃಷ್ಣ ಬೋರಯ್ಯ, ಶಿವರಾಮು, ಕುಳ್ಳಪ್ಪ, ಸುರೇಶ್, ರಾಘವ, ಪ್ರಸನ್ನ, ನಿವೃತ್ತ ಬಿಇಒ ಕಾಳೀರಯ್ಯ ಸೇರಿದಂತೆ ಇತರರು ಹಾಜರಿದ್ದರು.

ಇಂದು ಶ್ರೀಚಿಕ್ಕಯ್ಯ ಬೀರೇಶ್ವರಸ್ವಾಮಿ ಮಹಾದ್ವಾರದ ಉದ್ಘಾಟನೆ

ಹಲಗೂರು:ಅಗಸನಪುರ ಮತ್ತು ಹುಲ್ಲಹಳ್ಳಿ ಗ್ರಾಮಗಳ ಮಧ್ಯದ ಶ್ರೀಅನ್ನದಾನಿ ಚಿಕ್ಕಯ್ಯ ಬೀರೇಶ್ವರಸ್ವಾಮಿ ದೇವಸ್ಥಾನದ ಮಹಾದ್ವಾರದ ಪ್ರವೇಶ ಹಾಗೂ ಜೀರ್ಣೋದ್ಧಾರ ಕಾರ್ಯಕ್ರಮವನ್ನು ನ.16ರಂದು ಸೋಮವಾರ ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ 6ರಿಂದ 7.30ರವರೆಗೆ ಶುಭ ಮುಹೂರ್ತದಲ್ಲಿ ದಡದಪುರದ ಗುರುಗಳಾದ ಪುಟ್ಟಸ್ವಾಮಿ ಹಾಗೂ ಅಗಸನಪುರ ಗುರುಮಠದ ವೇದಬ್ರಹ್ಮ ಶ್ರೀಚಂದ್ರಶೇಖರ ಆರಾಧ್ಯರ ಸಮ್ಮುಖದಲ್ಲಿ ಗಂಗಾಪೂಜೆ, ಪುಣ್ಯಾಹ, ನಾಂದಿ, ಗಣಪತಿ ಪೂಜೆ, ಪಂಚಕಳಶ ಪೂಜೆ, ನವಗ್ರಹ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಮಹಾ ಮಂಗಳಾರತಿ ನೆರವೇರಲಿದೆ.ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಅಗಸನಪುರ, ಜೋಗಿಪುರ, ಸಾಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ದೇವಸ್ಥಾನದ ಹೆಗ್ಗಡೆಗಳು, ಪೂಜಾರಿಗಳು, ಚಾಕರಿದಾರರು, ನಾಡಗೌಡರು, ಪಟೇಲರು, ಯಜಮಾನರು ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.