ಶ್ರೀರಾಮನ ಪ್ರತಿಷ್ಠಾಪನೆ: ಕುಶಾಲನಗರದಲ್ಲಿ ನಾಳೆ ವಿಶೇಷ ಪೂಜೆ

| Published : Jan 21 2024, 01:31 AM IST

ಶ್ರೀರಾಮನ ಪ್ರತಿಷ್ಠಾಪನೆ: ಕುಶಾಲನಗರದಲ್ಲಿ ನಾಳೆ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂದು ಬೆಳಗ್ಗೆ 8.30ಕ್ಕೆ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಕುಶಾಲನಗರ ದೇವಾಲಯಗಳ ಒಕ್ಕೂಟ ಹಾಗೂ ಶ್ರೀರಾಮ ಸೇವಾ ಸಮಿತಿ ಸಹಯೋಗದೊಂದಿಗೆ ಜೀವನದಿ ಕಾವೇರಿಗೆ ವಿಶೇಷ ಮಹಾ ಆರತಿ ಬೆಳಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕನನ್ಡಪ್ರಭ ವಾರ್ತೆ ಕುಶಾಲನಗರಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಜ.22ರಂದು ಕುಶಾಲನಗರದ ಪಟ್ಟಣ ಹಾಗೂ ಸುತ್ತಮುತ್ತ ದೇವಾಲಯಗಳಲ್ಲಿ ವಿಶೇಷ ಆರತಿ, ಭಜನಾ ಪೂಜಾ, ಹೋಮ ಹವನ ಮತ್ತಿತರ ಲೋಕಕಲ್ಯಾಣಾರ್ಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಟ್ಟಣದ ವಿವಿಧ ದೇವಾಲಯಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಅಂದು ಬೆಳಗ್ಗೆ 8.30ಕ್ಕೆ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಕುಶಾಲನಗರ ದೇವಾಲಯಗಳ ಒಕ್ಕೂಟ ಹಾಗೂ ಶ್ರೀರಾಮ ಸೇವಾ ಸಮಿತಿ ಸಹಯೋಗದೊಂದಿಗೆ ಜೀವನದಿ ಕಾವೇರಿಗೆ ವಿಶೇಷ ಮಹಾ ಆರತಿ ಬೆಳಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಧಾರ್ಮಿಕ ಗುರುಗಳು ಪಾಲ್ಗೊಳ್ಳಲಿದ್ದಾರೆ. ಮಹಾ ಆರತಿ ಬಳಗದ ವತಿಯಿಂದ ಅಯೋಧ್ಯೆಯ ಕರೆಸೇವಕರನ್ನು ಶ್ರೀಗಳ ಮೂಲಕ ಗೌರವಿಸುವ ಕಾರ್ಯಕ್ರಮ ನಡೆಯಲಿದೆ.

ಕುಶಾಲನಗರ ಗಣಪತಿ ದೇವಾಲಯದಲ್ಲಿ ಬೆಳಗಿನಿಂದ ಹೋಮ ಮತ್ತಿತರ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಗಣಪತಿ ದೇವಾಲಯ ವತಿಯಿಂದ ತಾಲೂಕಿನ ಭಕ್ತರಿಗೆ ಸುಮಾರು 40 ಸಾವಿರಕ್ಕೂ ಅಧಿಕ ಲಡ್ಡುಗಳನ್ನು ವಿತರಣೆ ಮಾಡುವ ಕಾರ್ಯಕ್ರಮ ಪೂರ್ವಸಿದ್ಧತೆ ನಡೆದಿದೆ. ಈ ಸಂಬಂಧ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಸ್ಥಳೀಯ ಗಾಯತ್ರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಲಡ್ಡು ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕುಶಾಲನಗರ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಬೆಳಗ್ಗಿನಿಂದ ಸಂಕಲ್ಪ ಪೂಜೆ ಗಣಪತಿ ಹೋಮ ರಾಮತಾರಕ ಹೋಮ, ರಾಮ ಸೀತೆ ಲಕ್ಷ್ಮಣ ವೇಷ ಹಾಕುವ ಸ್ಪರ್ಧೆ ಲೋಕಕಲ್ಯಾಣಕ್ಕಾಗಿ ದೀಪಾಲಂಕಾರ, ಭಜನೆ, ರಾಮ ಸೀತೆ ಲಕ್ಷ್ಮಣ ಹನುಮಂತ ದೇವರ ಪ್ರಾಕರಣೋತ್ಸವ ಮತ್ತು ಮಧ್ಯಾಹ್ನ ಚಿನ್ನ ಬೆಳ್ಳಿ ಹೂಗಳ ಮೂಲಕ ದೇವರಿಗೆ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕುಶಾಲನಗರ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದು ಭಕ್ತಾದಿಗಳಿಗೆ ಆನ್ಲೈನ್ ಸ್ಕ್ರೀನ್ ಮೂಲಕ ಅಯೋಧ್ಯೆಯಲ್ಲಿ ನಡೆಯುವ ರಾಮ ಪ್ರತಿಷ್ಠಾಪನ ಕಾರ್ಯಕ್ರಮದ ಪ್ರದರ್ಶನ ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕುಶಾಲನಗರ ಸಾಯಿಬಾಬಾ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಪ್ರಸಾದ ವಿತರಣೆ, ಮಧ್ಯಾಹ್ನ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುಶಾಲನಗರ ಶ್ರೀ ಅಯ್ಯಪ್ಪ ದೇವಾಲಯ, ಗೌರಿ ಗಣೇಶ ದೇವಾಲಯ, ಸುಬ್ರಹ್ಮಣ್ಯ ದೇವಾಲಯ, ಬೈಚನಹಳ್ಳಿ ಅಂತರ್ಗಟ್ಟೆ ಅಮ್ಮನವರ ದೇವಾಲಯ ಮಾರಿಯಮ್ಮ ದೇವಾಲಯ ಈಶ್ವರ ದೇವಾಲಯ, ಮುಳ್ಳುಸೋಗೆ ದೊಡ್ಡಮ್ಮ ದೇವಾಲಯ, ಕೋಣ ಮಾರಿಯಮ್ಮ ದೇವಾಲಯ, ಚೌಡೇಶ್ವರಿ ದೇವಾಲಯ, ಸೋಮೇಶ್ವರ ದೇವಾಲಯ, ಬಸವೇಶ್ವರ ದೇವಾಲಯ, ಬಲಮುರಿ ದೇವಾಲಯ, ಮುತ್ತಪ್ಪ ದೇವಾಲಯ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜಾ, ಹೋಮ, ಹವನಾದಿ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಾಲಯಗಳ ಆಡಳಿತ ಮಂಡಳಿ ಪ್ರಮುಖರು ತಿಳಿಸಿದ್ದಾರೆ.ಅಂದು ಸಂಜೆ ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ನದಿಯ ಹಳೆಯ ಸೇತುವೆಯ ಮೇಲ್ಭಾಗದಲ್ಲಿ ಕಾವೇರಿ ಮಹಾ ಆರತಿ ಬಳಗದ ವತಿಯಿಂದ ಜೀವನದಿಗೆ ದೀಪಾರಾಧನೆ ಕಾರ್ಯಕ್ರಮ ನಡೆಯಲಿದೆ. ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ಗ್ರಾಮಗಳ ವ್ಯಾಪ್ತಿಯಲ್ಲಿ ರಾಮ ಪ್ರತಿಷ್ಠಾಪನೆ ದಿನ ಹಲವು ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಪೂರ್ವ ಸಿದ್ಧತೆ ನಡೆದಿದೆ.

ಶ್ರೀರಾಮ ಪ್ರತಿಷ್ಠಾಪನೆಯ ದಿನದಂದು ಜಿಲ್ಲೆಯಲ್ಲಿ ಮೀನು ಮಾಂಸ ಮಾರಾಟಕ್ಕೆ ನಿರ್ಬಂಧ ಹೇರುವಂತೆ ಜಿಲ್ಲಾ ಬಿಜೆಪಿ ಪ್ರಮುಖರಾದ ಎಂ.ಡಿ. ಕೃಷ್ಣಪ್ಪ ಜಿಲ್ಲಾಡಳಿತಕ್ಕೆ ಆಗ್ರಹ ಮಾಡಿದ್ದಾರೆ.

ಚಿತ್ರ ಸೋಮವಾರದಂದು ಕುಶಾಲನಗರ ತಾಲೂಕಿನ ನಾಗರಿಕರಿಗೆ ಲಡ್ಡು ವಿತರಣೆ ಹಿನ್ನೆಲೆಯಲ್ಲಿ ಸಿದ್ಧತೆ