ಸಾರಾಂಶ
- ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಕಂಪನಿಗೆ ಸೂಚನೆ ನೀಡಬೇಕು ಪಪಂ ಆಡಳಿತ ಮಂಡಳಿ ಸುದ್ದಿ ಗೋಷ್ಠಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪಟ್ಟಣದಲ್ಲಿ ಬೀದಿ ದೀಪ ಅಳವಡಿಸಿದ ಕಂಪನಿ ಕಡಿಮೆ ವೋಲ್ಟೇಜ್ ಬಲ್ಪುಗಳನ್ನು ಅಳವಡಿಸಿದೆ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರ ಪ.ಪಂ ಸಭಾಂಗಣದಲ್ಲಿ ಆಡಳಿತ ಮಂಡಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲವು ತಿಂಗಳಿನಿಂದ ಪಟ್ಟಣದ ಜನರಲ್ಲಿ ಪಪಂ ಆಡಳಿತ ಮಂಡಳಿಯವರು ಬೀದಿ ದೀಪಗಳ ಬಗ್ಗೆ ಯಾವುದೇ ಗಮನಹರಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಪಟ್ಟಣದಲ್ಲಿ ಅಳವಡಿಸಿರುವ ಬೀದಿ ದೀಪದ ಟೆಂಡರ್ ಸರ್ಕಾರದ ಹಂತದಲ್ಲಿಯೇ ಆಗಿದೆ. ಇ ಸ್ಮಾರ್ಟ್ ಎನರ್ಜಿ ಸಲ್ಯೂಷನ್ ಎಂಬ ಕಂಪನಿಗೆ ಬೀದಿದೀಪದ ಟೆಂಡರ್ ಆಗಿದೆ. ನೇರವಾಗಿ ಜಿಲ್ಲಾಧಿಕಾರಿ ಕಚೇರಿಯಿಂದಲೇ ಮಾರ್ಚ 2023ರ 17 ರಂದು ಬೀದಿದೀಪ ಅಳವಡಿಕೆ ವರ್ಕ್ ಆರ್ಡರ್ ನೀಡಲಾಗಿದೆ. ಆ ಕಂಪನಿ ಅತ್ಯಂತ ಕಡಿಮೆ ವೋಲ್ಟೇಜ್ ಎಲ್.ಇ.ಡಿ ಬಲ್ಪ್ ಗಳನ್ನು ಅಳವಡಿಸಿರುವುದಕ್ಕೆ ನಾವು ಕಳೆದ 8- 9 ತಿಂಗಳಿಂದಲೂ ಆಕ್ಷೇಪ ವ್ಯಕ್ತಪಡಿಸಿ ಬೀದಿ ದೀಪಗಳನ್ನು ಅಳವಡಿಸಲು ಅಡ್ಡಿ ಸಹ ಮಾಡಿದ್ದೆವು. ಆದರೆ, ಆ ಕಂಪನಿಯವರು ಪ.ಪಂ. ಆಡಳಿತ ಮಂಡಳಿ ಅಡ್ಡಿ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದರು.ಜಿಲ್ಲಾಧಿಕಾರಿ ಒತ್ತಡದ ನಂತರ ನಾವು ಬೀದಿದೀಪ ಅಳವಡಿಸಲು ಬಿಟ್ಟಿದ್ದೆವು. ಟೆಂಡರ್ ಷರತ್ತಿನ ಪ್ರಕಾರ ಬೀದಿ ದೀಪ ಅಳವಡಿಸಿದ ಕಂಪನಿಯೇ 7 ವರ್ಷಗಳ ಕಾಲ ಬೀದಿದೀಪಗಳ ನಿರ್ವಹಣೆ ಮಾಡಬೇಕೆಂದು ನಮೂದಾಗಿದೆ. ಆದರೆ, ಕಂಪನಿ ಅಳವಡಿಸಿರುವ ಕಡಿಮೆ ವೋಲ್ಟೇಜ್ ಬಲ್ಬ್‌ನಿಂದ ಬೆಳಕು ಸಾಲುತ್ತಿಲ್ಲ. ಪಟ್ಟಣದ ವ್ಯಾಪ್ತಿಯ ಕೆರೆ ದಂಡೆ, ಶಾಲಾ ಕಾಲೇಜುಗಳ ಆವರಣ, ರಸ್ತೆ ಮೇಲೆ ಕತ್ತಲೇ ಇದ್ದಂತಿದೆ. ಕೆಲವು ವಾರ್ಡುಗಳಲ್ಲಿ ಕೆಲವೇ ದಿನಗಳಲ್ಲಿ ಬಲ್ಪುಗಳು ಹಾಳಾಗಿವೆ. ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಬೀದಿ ದೀಪ ಬದಲಾಯಿಸಿ ಗುಣಮಟ್ಟದ ಬಲ್ಬ್ ಅಳವಡಿಸಲು ಕಂಪನಿಗೆ ಪತ್ರ ಬರೆದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಆದರೆ, ಪಪಂ ಆಡಳಿತ ಮಂಡಳಿ ಬೀದಿ ದೀಪದ ಬಗ್ಗೆ ಯಾವುದೇ ರೀತಿಯಲ್ಲೂ ಗಮನಹರಿಸುತ್ತಿಲ್ಲ ಎಂದು ದೂರುತ್ತಿದ್ದಾರೆ. ಇದರಿಂದ ಸಾರ್ವಜನಿಕರಲ್ಲೂ ಗೊಂದಲಗಳಾಗುತ್ತಿವೆ. ಆದ್ದರಿಂದ ಜಿಲ್ಲಾಧಿಕಾರಿ ಈ ಬಗ್ಗೆ ಕೂಡಲೇ ಗಮನಹರಿಸಿ ಸಂಬಂಧ ಪಟ್ಟ ಕಂಪನಿಗೆ ಸರಿಯಾದ ನಿರ್ವಹಣೆ ಮಾಡುವಂತೆ ಸೂಚಿಸಬೇಕು. ಇಲ್ಲವಾದಲ್ಲಿ ಕಂಪನಿ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಪ.ಪಂ. ಸದಸ್ಯೆ ಜುಬೇದಾ ಮಾತನಾಡಿ, ಈಗ ಮೆಸ್ಕಾಂ ಇಲಾಖೆ 100 ಅಡಿಗೊಂದರಂತೆ ಹೊಸ ವಿದ್ಯುತ್ ಕಂಬ ಅಳವಡಿಸಿ ದ್ದಾರೆ. ಕಂಪನಿರು ಕೇವಲ 12, 24 ವೋಲ್ಟೇಜ್ ಬಲ್ಬ್ ಹಾಕಿರುವುದರಿಂದ ಬೆಳಕು ಸಾಕಾಗುತ್ತಿಲ್ಲ. ಹಿಂದೆ ಪ.ಪಂ ನಿಂದ 160 ವೋಲ್ಟೇಜ್‌ನ ಬಲ್ಪುಗಳನ್ನು ಅಳವಡಿಸಿದ್ದೆವು. ಸಾಕಷ್ಟು ಬೆಳಕಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ಗಮನಹರಿಸಿ ಹೈ ವೋಲ್ಟೇಜ್ ಬಲ್ಬ್ ಅಳವಡಿಸುವಂತೆ ಸೂಚಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷೆ ಸುರೈಯಾಬಾನು, ಉಪಾಧ್ಯಕ್ಷೆ ಉಮಾಕೇಶವ್, ಸದಸ್ಯರಾದ ಮುಕುಂದ, ಕುಮಾರಸ್ವಾಮಿ, ಸೈಯದ್ ವಸೀಂ, ಮುನಾವರ್ ಪಾಷಾ, ಶೋಜ, ರೀನಾಮೋಹನ್, ನಾಮಿನಿ ಸದಸ್ಯರಾದ ಅಣ್ಣಪ್ಪ, ಸುಬ್ರಮಣ್ಯ, ರಜಿ ಇದ್ದರು.