ಕನ್ನಡಪ್ರಭ ವಾರ್ತೆ ಭಟ್ಕಳ

ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಹೊಸ ಕಟ್ಟಡ ನಿರ್ಮಿಸುವುದರಿಂದ ಈಗಿರುವ ದೇವರನ್ನು ಬಾಲಾಲಯದಲ್ಲಿ ಸ್ಥಾಪಿಸಿ ಭಕ್ತರಿಗೆ ಎಂದಿನಂತೆ ಪೂಜೆ ಪುನಸ್ಕಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವಿದಾಸ ಮೊಗೇರ ಹೇಳಿದರು.

ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಜೀರ್ಣೋದ್ಧಾರ ಪ್ರಾರಂಭದ ಹಂತವಾಗಿ ಕಲಾವಿಸರ್ಜನೆ ಮತ್ತು ಶ್ರೀ ದೇವಿಯ ಮೂಲ ಸನ್ನಿಧಿಯನ್ನು ಬಾಲಾಲಯದಲ್ಲಿ ಪ್ರತಿಷ್ಠಾಪನಾ ಕಾರ್ಯ ಮಾ. 27ರಂದು ರಾಮನವಮಿಯಂದು ಬೆಳಗ್ಗೆ 6.31ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ನಡೆಯಲಿದೆ. ಈ ಪ್ರಯುಕ್ತ ಮಾ. 26ರಂದು ಸಂಜೆ ಬಾಲಾಲಯದಲ್ಲಿ ವಾಸ್ತು ರಾಕ್ಷೋಘ್ನ ಹೋಮ-ಪೂಜಾ -ಬಲಿ, ಪ್ರಸಾದ ಶುದ್ಧಿ ರಕ್ಷೆ, ಕಲೆ ವಿಸರ್ಜನಾಂಗ ಹೋಮಾದಿಗಳು, ಜೀವಕುಂಬ ಸ್ಥಾಪನೆ ನಡೆಯಲಿದೆ. 27 ರ ಮಧ್ಯಾಹ್ನ ಅನ್ನಸಂತರ್ಪಣೆ ಮತ್ತು ಸಂಜೆ ಭಜನೆ ನಡೆಯಲಿದೆ ಎಂದರು.

ಭಕ್ತರಿಗೆ ಪೂಜೆ ಪುನಸ್ಕಾರ ಸಲ್ಲಿಸಲು ಯಾವುದೇ ತೊಂದರೆ ಆಗುವುದಿಲ್ಲ. ದೇವಸ್ಥಾನದ ನೂತನ ಶಿಲಾಮಯ ಕಟ್ಟಡವನ್ನು 2 ವರ್ಷದೊಳಗೆ ಮುಗಿಸಲು ಸಂಕಲ್ಪ ಮಾಡಿದ್ದೇವೆ. ಸರಕಾರ ನಮಗೆ 9.95 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಅನುಮತಿ ನೀಡಿದ್ದರೂ ಸಹ ಮುಂದುವರಿದ ಕಾಮಗಾರಿಯಾಗಿ ಮತ್ತಷ್ಟು ವೆಚ್ಚ ತಗುಲಬಹುದು, ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸದ್ಭಕ್ತರು ಸಹಕಾರ ಕೊಡಬೇಕು. ವರ್ಷಂಪ್ರತಿ ಮೇ ದಲ್ಲಿ ನಡೆಯುತ್ತಿದ್ದ ದೇವಸ್ಥಾನದ ವರ್ಧಂತ್ಯುತ್ಸವ ಈ ವರ್ಷ ಇರುವುದಿಲ್ಲ ಎಂದರು. ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾಗರಾಜ ಈ.ಎಚ್. ಮಾತನಾಡಿದರು. ಈ ಸಂದರ್ಭ ಪ್ರಮುಖರಾದ ರಮೇಶ ದೇವಾಡಿಗ, ನಾಗರಾಜ ನಾಯ್ಕ, ಮಾಸ್ತಿ ನಾಯ್ಕ, ಡಿ.ಎಲ್. ನಾಯ್ಕ, ಗುರುದಾಸಿ ಮೊಗೇರ, ಆರ್.ಜಿ. ನಾಯ್ಕ, ಅಚ್ಯುತ್ ನಾಯ್ಕ, ಗೋವಿಂದ ನಾಯ್ಕ, ಮೋಹನ ನಾಯ್ಕ ಮುಂತಾದವರಿದ್ದರು..