ಕಾಡಂಚಿನ ಗ್ರಾಮಗಳಿಗೆ ಸೌರ ದೀಪ ಅಳವಡಿಕೆ

| Published : Feb 15 2025, 12:31 AM IST

ಸಾರಾಂಶ

ರಾಮನಗರ: ಕಾಡಂಚಿನ ಪ್ರದೇಶಗಳನ್ನು ಹೆಚ್ಚಾಗಿ ಹೊಂದಿರುವ ಗ್ರಾಮಗಳ ರಸ್ತೆಗಳಿಗೆ ಸೋಲಾರ್ ಬೀದಿ ದೀಪ, ಬಡವರಿಗೆ ಹಸುಗಳು ಹಾಗೂ ಮಕ್ಕಳಿಗಾಗಿ ಡಿಜಿಟಲ್ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಿಕೊಡುವಂತೆ ಹುಲಿಕೆರೆ ಗುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್‌ ಟೊಯೋಟಾ ಟ್ಸು ಶೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥರಲ್ಲಿ ಮನವಿ ಮಾಡಿದರು.

ರಾಮನಗರ: ಕಾಡಂಚಿನ ಪ್ರದೇಶಗಳನ್ನು ಹೆಚ್ಚಾಗಿ ಹೊಂದಿರುವ ಗ್ರಾಮಗಳ ರಸ್ತೆಗಳಿಗೆ ಸೋಲಾರ್ ಬೀದಿ ದೀಪ, ಬಡವರಿಗೆ ಹಸುಗಳು ಹಾಗೂ ಮಕ್ಕಳಿಗಾಗಿ ಡಿಜಿಟಲ್ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಿಕೊಡುವಂತೆ ಹುಲಿಕೆರೆ ಗುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್‌ ಟೊಯೋಟಾ ಟ್ಸು ಶೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥರಲ್ಲಿ ಮನವಿ ಮಾಡಿದರು.

ತಾಲೂಕಿನ ಹುಲಿಕೆರೆ ಗುನ್ನೂರು ಗ್ರಾಮ ಪಂಚಾಯಿತಿಯಲ್ಲಿ ಟೊಯೋಟಾ ಟ್ಸುಶೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಿಎಸ್‌ಆರ್ ಅನುದಾನ ಹಾಗೂ ಬೆಂಗಳೂರಿನ ಯುನೈಟೆಡ್ ವೇ ಎನ್‌ಜಿಒ ಪಾಟ್ನರ್ಸ್ ಸಹಯೋಗದಲ್ಲಿ ನಿರ್ಮಿಸಿರುವ ಸೋಲಾರ್ ಬೀದಿ ದೀಪಗಳನ್ನು ಅಳವಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗ ಟೊಯೋಟಾ ಸಿಎಸ್ ಆರ್ ವತಿಯಿಂದ ಹುಲಿಕೆರೆ ಗುನ್ನೂರು ಗ್ರಾಪಂನ ಹುಲಿಕೆರೆ ಗುನ್ನೂರು ಎಸ್‌ಆರ್‌ಎಸ್‌ ಬೆಟ್ಟ, ಪೂಜಾರಿದೊಡ್ಡಿ, ಸಾಹುಕಾರ್ ದೊಡ್ಡಿ, ಕೋಟಹಳ್ಳಿ, ಸಬ್ಬಕೆರೆ ಕಾಲೋನಿ, ಕೆರೆಮೇಗಳದೊಡ್ಡಿ, ಕುರುಬಳ್ಳಿದೊಡ್ಡಿ, ದಣೆವರದೊಡ್ಡಿ, ಅಮ್ಮನಪುರ, ತೆಂಗಿನಕಲ್ಲು, ಗುನ್ನೂರು‌ಕೆಬ್ಬೆ ಗ್ರಾಮಗಳಿಗೆ 100 ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.

ಒಂದು ಸೋಲಾರ್ ಬೀದಿ ದೀಪಕ್ಕೆ 33 ಸಾವಿರ ರುಪಾಯಿ ವೆಚ್ಚ ತಗುಲಲಿದ್ದು, ಇದನ್ನು ಯುನೈಟೆಡ್ ವೇ ಎನ್ ಜಿಓರವರೇ 5 ವರ್ಷಗಳ ಕಾಲ ನಿರ್ವಹಣೆ ಮಾಡಲಿದ್ದಾರೆ. ಇವುಗಳ ಅಳವಡಿಕೆಯಿಂದ ವಿದ್ಯುತ್ ಉಳಿತಾಯದ ಜೊತೆಗೆ ಹಳ್ಳಿಗಳಲ್ಲಿ ಹೆಚ್ಚು ಪ್ರಕಾಶಮಾನ ಜೊತೆಗೆ ಸೌಂದರ್ಯ ವೃದ್ದಿ ವಾತಾವರಣ ಸೃಷ್ಟಿಯಾಗಲಿದೆ ಎಂದು ಹೇಳಿದರು.

ಗ್ರಾಪಂಗೆ ಸೇರಿದ ಹಳ್ಳಿಗಳಲ್ಲಿ ತುಂಬಾ ಹಿಂದುಳಿದ ರೈತ ಕುಟುಂಬಗಳಿದ್ದು, ಜೀವನ ನಿರ್ವಹಣೆಗಾಗಿ ಹೈನುಗಾರಿಕೆಯನ್ನು ಅವಲಂಬಿಸಲು ಆಸಕ್ತರಾಗಿದ್ದಾರೆ. ಅವರ ಕೌಟುಂಬಿಕ ನಿರ್ವಹಣೆಗಾಗಿ ಬಡ ಕುಟುಂಬದವರಿಗೆ 200 ಸೀಮೆ ಹಸುಗಳನ್ನು ವಿತರಿಸುವ ಮೂಲಕ ಹಿಂದುಳಿದ ಕುಟುಂಬಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಕೋರಿದರು.

ಇಲ್ಲಿನ ಗ್ರಾಮಗಳು ಕಾಡಂಚಿನಲ್ಲಿದ್ದು, ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಆಗಿಂದಾಗೆ ಗ್ರಾಮಗಳಿಗೆ ವನ್ಯಜೀವಿಗಳು ಲಗ್ಗೆ ಇಡುತ್ತಲೇ ಇವೆ. ರಾತ್ರಿಯ ವೇಳೆ ಬೆಳಕಿನ ಅವಶ್ಯಕತೆ ಇರುವುದರಿಂದ ಕಾಡಂಚಿನ ಗ್ರಾಮಗಳಿಗೆ 200 ಸೋಲಾರ್ ಬೀದಿ ದೀಪಗಳನ್ನು ಅಳವಡಿಸಿಕೊಡಬೇಕು ಎಂದರು.

ಗ್ರಾಪಂ ವ್ಯಾಪ್ತಿಗೆ ಸೇರಿದ ಕುರುಬರಹಳ್ಳಿದೊಡ್ಡಿ, ತೆಂಗಿನಕಲ್ಲು ಮತ್ತು ಕೋಟಹಳ್ಳಿ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳು ನಿವೇಶನ ಮತ್ತು ಕಟ್ಟಡವು ಇಲ್ಲದೆ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಮೂಲ ಸೌಕರ್ಯಗಳಿಲ್ಲದೆ ಅಂಗನವಾಡಿ ಕೇಂದ್ರಗಳನ್ನು ನಡೆಸುತ್ತಿದ್ದು, ಮಳೆಗಾಲದಲ್ಲಿ ಕಟ್ಟಡಗಳ ಮೇಲ್ಛಾವಣಿ ಸೋರುತ್ತಿದೆ.

ಕುರುಬರಹಳ್ಳಿದೊಡ್ಡಿ ಅಂಗನವಾಡಿ ಕೇಂದ್ರದಲ್ಲಿ 25 ಮಕ್ಕಳು, ಕೋಟಹಳ್ಳಿ ಗ್ರಾಮದ ಅಂಗನವಾಡಿಯಲ್ಲಿ 23 ಮಕ್ಕಳು ಹಾಗೂ ತೆಂಗಿನಕಲ್ಲು ಗ್ರಾಮದ ಅಂಗನವಾಡಿಯಲ್ಲಿ 19 ಮಕ್ಕಳು ಇದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಹೊಸದಾಗಿ ಡಿಜಿಟಲ್ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ ಮಾಡಿಕೊಡುವಂತೆ ಗಿರೀಶ್ ಟೊಯೋಟಾ ಟ್ಸುಶೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥರಲ್ಲಿ ಮನವಿ ಮಾಡಿದರು.

ಲಿಮಿಟೆಡ್ ಕಂಪನಿಯ ಟೈಸುಕೆ ವಯೋಮಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಂಪನಿಯ ಸಿಎಸ್ ಆರ್ ಅನುದಾನದಲ್ಲಿ ಖುಷಿಯಿಂದ ಬೀದಿ ದೀಪ ಅಳವಡಿಸಿದ್ದೇವೆ. ಇವುಗಳನ್ನು ಗ್ರಾಮಸ್ಥರು ಸಂರಕ್ಷಣೆ ಮಾಡಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು. ನಾವು ಅದನ್ನು ನೋಡಿ ಮತ್ತಷ್ಟು ಸಮುದಾಯ ಕೆಲಸ ಮಾಡಲು ಹೆಚ್ಚು ಆಸಕ್ತಿ ಬರಲಿದೆ. ಬೀದಿ ದೀಪ ಬೆಳಗಿದಂತೆ ನಿಮ್ಮ ಜೀವನ‌ ಸಹ ಬೆಳಗಲಿ ಎಂದು ಆಶಿಸಿದರು.

ಲಿಮಿಟೆಡ್ ನಿರ್ದೇಶಕ ಜೂನ್‌ ಸಿರೊತೋರಿ, ಹಿರಿಯ ಅಧಿಕಾರಿ ದಕ್ಷಿಣ ಮೂರ್ತಿ, ಗ್ರಾಪಂ ಪ್ರಭಾರ ಪಿಡಿಒ ಕುಮಾರ್, ಕಾರ್ಯದರ್ಶಿ ಅರುಣ್ ಕುಮಾರ್, ಸಿಬ್ಬಂದಿ ರೇಣುಕಾಪ್ರಸಾದ್, ಯುನೈಟೆಡ್ ವೇ ವರುಣ್ ಕುಮಾರ್, ಪ್ರಾಜೆಕ್ಟ್ ಮ್ಯಾನೇಜರ್ ಮುನೇಗೌಡ, ಕೋ ಆರ್ಡಿನೇಟರ್ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

ಕೋಟ್ .............

ಸರ್ಕಾರಿ ಕಾರ್ಯಕ್ರಮಗಳ ಜೊತೆಗೆ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ನಾನು ಮಾಡಿದ ಮನವಿಗೆ ಟೊಯೋಟಾ ಟ್ಸುಶೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸ್ಪಂದಿಸಿದ್ದು, ಸಿಎಸ್ ಆರ್ ಅನುದಾನದಲ್ಲಿ ಸೋಲಾರ್ ಬೀದಿ ದೀಪ ಕಲ್ಪಿಸಿದೆ. ಡಿಜಿಟಲ್ ಅಂಗನವಾಡಿ ಕೇಂದ್ರ ಹಾಗೂ ಬಡವರಿಗೆ ಹಸುಗಳನ್ನು ವಿತರಿಸುವಂತೆ ಮಾಡಿದ ಮನವಿಗೆ ಕಂಪನಿಸಕಾರಾತ್ಮಕವಾಗಿ ಸ್ಪಂದಿಸಿದೆ.

- ಗಿರೀಶ್, ಅಧ್ಯಕ್ಷರು, ಹುಲಿಕೆರೆ ಗುನ್ನೂರು ಗ್ರಾಪಂ

14ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ತಾಲೂಕಿನ ಹುಲಿಕೆರೆ ಗುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುನ್ನೂರು ಗ್ರಾಮದಲ್ಲಿ ಗಣ್ಯರು ಸೋಲಾರ್ ಬೀದಿ ದೀಪ ಲೋಕಾರ್ಪಣೆ ಮಾಡಿದರು.