ನಗರದ ಮರಳೂರು ಗ್ರಾಮ ದೇವತೆ ಅಮ್ಮನವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಮುಖ್ಯದ್ವಾರ ಲೋಕಾರ್ಪಣೆ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಅದ್ಧೂರಿಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ತುಮಕೂರು ನಗರದ ಮರಳೂರು ಗ್ರಾಮ ದೇವತೆ ಅಮ್ಮನವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಮುಖ್ಯದ್ವಾರ ಲೋಕಾರ್ಪಣೆ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಅದ್ಧೂರಿಯಿಂದ ನಡೆಯಿತು.ಗ್ರಾಮ ಪ್ರದಕ್ಷಿಣೆ, ಗಂಗಾಪೂಜೆ, ವಿಶ್ವಕ್ಷೇನ ಮಹಾಗಣಪತಿ ಪೂಜೆ, ಮಹಾಸಂಕಲ್ಪ, ವಾಸುದೇವ ಪುಣ್ಯಾಃ, ರಕ್ಷಾಬಂಧನ, ಆಚಾರ್ಯ ಋತ್ವಿಕ್ ಗ್ವರಣ ಮೃತಿಕಾ ಸಂಗ್ರಹಣ, ಯಾಗಶಾಲಾ ಪ್ರವೇಶ, ಜೀವತತ್ವಾದಿ ಹೋಮ, ಪೂರ್ಣಾಹುತಿ, ಅಂಕುರಾರ್ಪಣೆ, ಪಂಚಗವ್ಯ ಸ್ನಪನ, ಧ್ಯಾನ್ಯಾಧಿವಾಸ, ಪುಷ್ಪಾಧಿವಾಸ, ಮಹಾಮಂಗಳಾರತಿ ನೆರವೇರಿದವು. ನೂತನವಾಗಿ ನಿರ್ಮಿಸಲಾಗಿರುವ ಮರಳೂರಿನ ಮುಖ್ಯದ್ವಾರವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು.

ನಂತರ ಮಾತನಾಡಿದ ಶ್ರೀಗಳು, ತುಮಕೂರು ನಗರದಲ್ಲಿ ಮರಳೂರು ಮೂಲತಃ ಹಳೆಯೂರು. ಇದು ದಕ್ಷಿಣ ದಿಕ್ಕಿನಲ್ಲಿದ್ದು, ಒಳ್ಳೆಯ ಜನರಿದ್ದಾರೆ. ಈ ಭಾಗದ ಜನತೆ ಸಜ್ಜನ ಶಾಸಕರು, ಕಾರ್ಪೋರೇಟರ್ ಪಡೆದಿದ್ದಾರೆ. ಈ ಭಾಗದಲ್ಲಿ ಉತ್ತಮವಾಗಿ ಧಾರ್ಮಿಕ ಕಾರ್ಯಗಳು ಹಾಗೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಪ್ರಶಂಸಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಜ್ಯೋತಿಗಣೇಶ್ ಮಾತನಾಡಿ, ಈ ಭಾಗದ ಜನರ ಭೂಮಿಯಿಂದಲೇ ತುಮಕೂರಿನ ಈ ಭಾಗ ಬೆಳೆದಿದೆ ಎಂದರು. ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಶಾಂತಿ ನೆಮ್ಮದಿ ನೆಲೆಸುತ್ತದೆ. ಜತೆಗೆ ಇಂದಿನ ಯುವ ಪೀಳಿಗೆಗೂ ಧಾರ್ಮಿಕ ಕಾರ್ಯಗಳ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ ಎಂದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್. ನಿಂಗಪ್ಪ, ಸನತ್, ಪಾಲಿಕೆ ಮಾಜಿ ಸದಸ್ಯ ಧರಣೇಂದ್ರಕುಮಾರ್, ಪ್ರಧಾನರಾದ ಅಶೋಕ್ ಕುಮಾರ್, ಲಕ್ಷ್ಮೀನಾರಾಯಣ ಶಿವರಾಮ್, ರಾಮಣ್ಣ, ಸುರೇಶ್, ಸೋಮಣ್ಣ, ಹರೀಶ್, ಪಟೇಲ್ ರಾಜು, ಪ್ರಾಣೇಶ್ ಹಾಗೂ ಮರಳೂರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.