ಸಾರಾಂಶ
- ರೈತ ಸಂಘಟನೆಗಳ ಪ್ರತಿಭಟನೆಯಲ್ಲಿ ಮುಖಂಡ ಗಡಿಮಾಕುಂಟೆ ಬಸವರಾಜಪ್ಪ ಒತ್ತಾಯ
- - - ಕನ್ನಡಪ್ರಭ ವಾರ್ತೆ ಜಗಳೂರುತಾಲೂಕಿನ ರಂಗಯ್ಯನದುರ್ಗ ಕೊಂಡುಕುರಿ ಅರಣ್ಯ ವ್ಯಾಪ್ತಿಯ ಸೂಕ್ಷ್ಮ ವಲಯ ಹಾಗೂ ಸರ್ಕಾರಿ ಜಾಗಗಳಲ್ಲಿ ಅಕ್ರಮವಾಗಿ ವಿಂಡ್ ಫ್ಯಾನ್ ಅಳವಡಿಸಿರುವುದನ್ನು ಖಂಡಿಸಿ ಬುಧವಾರ ರಾಜ್ಯ ರೈತ ಸಂಘ, ಅಖಂಡ ಕರ್ನಾಟಕ ರೈತ ಸಂಘ (ನಂಜುಂಡಸ್ವಾಮಿ ಬಣ) ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಬೈಕ್ ರ್ಯಾಲಿ ಮೂಲಕ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭಗೊಂಡ ರ್ಯಾಲಿ ಮಹಾತ್ಮ ಗಾಂಧಿ ಹಳೇ ವೃತ್ತ, ದಾವಣಗೆರೆ ರಸ್ತೆ, ಹೊಸ ಬಸ್ ನಿಲ್ದಾಣ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿಗೆ ತೆರಳಿ, ಸೂಕ್ತ ಕ್ರಮಕ್ಕಾಗಿ ತಹಸೀಲ್ದಾರ್ ಕಲೀಂವುಲ್ಲ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭ ರೈತ ಸಂಘದ ತಾಲೂಕು ಅಧ್ಯಕ್ಷ ಗಡಿಮಾಕುಂಟೆ ಬಸವರಾಜಪ್ಪ ಮಾತನಾಡಿ, ಅಳಿವಿನಂಚಿನಲ್ಲಿರುವ ಕೊಂಡುಕುರಿ ಪ್ರಾಣಿಗಳಿರುವ ತಾಲೂಕಿನ ರಂಗಯ್ಯದುರ್ಗ ಅರಣ್ಯ ಪ್ರದೇಶ ಏಷ್ಯಾ ಖಂಡದಲ್ಲಿಯೇ ಎರಡನೇ ಸ್ಥಾನ ಪಡೆದಿದೆ. ಕೇಂದ್ರ ಸರ್ಕಾರ ಸಹ ಸೂಕ್ಷ್ಮ ವಲಯ ಅರಣ್ಯ ಪ್ರದೇಶ ಎಂದು ಘೋಷಣೆ ಮಾಡಿದೆ. ಹಾಗಾಗಿ, ಸುತ್ತಮುತ್ತಲಿನ ೪೮ಕ್ಕೂ ಹೆಚ್ಚು ಗ್ರಾಮದ ಕುರಿ, ಮೇಕೆ, ಜಾನುವಾರುಗಳೂ ಒಳಗೆ ಪ್ರವೇಶ ಪಡೆಯಲು ಆಗದಂತೆ ಸುತ್ತಲೂ ಟ್ರಂಚ್ ಹಾಕಲಾಗಿದೆ. ಆದರೆ, ಖಾಸಗಿ ಕಂಪನಿಗಳು ಬೃಹತ್ ಗಾತ್ರದ ವಿಂಡ್ ಫ್ಯಾನ್ ಅಳವಡಿಸಲು ಅಧಿಕಾರಿಗಳು ಅವಕಾಶ ನೀಡಿದ್ದು ಹೇಗೆ? ಕೂಡಲೇ ವಿಂಡ್ ಫ್ಯಾನ್‌ಗಳನ್ನು ತೆರವುಗೊಳಿಸಬೇಕು. ಅರಣ್ಯ ಪ್ರದೇಶದ ಸಾಗುವಳಿಗಾರರಿಗೆ ಜಮೀನು ಉಳುಮೆ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಅಖಂಡ ರೈತ ಸಂಘದ ಅಧ್ಯಕ್ಷ ಹೇಮರೆಡ್ಡಿ ಮಾತನಾಡಿ, ತಾಲೂಕಿನಲ್ಲಿ ಖಾಸಗಿ ಕಂಪನಿಗಳೊಂದಿಗೆ ಮಧ್ಯವರ್ತಿಗಳು, ಅಧಿಕಾರಿಗಳು ಶಾಮಿಲಾಗಿ ವಿಂಡ್ ಫ್ಯಾನ್ ದಂಧೆ ನಡೆಸುತ್ತಿದ್ದಾರೆ. ಇದರಿಂದ ಹವಾಮಾನ ವೈಪರಿತ್ಯದಿಂದ ಕಾಡು ಪ್ರಾಣಿಗಳು ಅರಣ್ಯ ತೊರೆದು ನಾಡಿನತ್ತ ಮುಖ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಕರಡಿಗಳ ದಾಳಿಯೂ ಹೆಚ್ಚಾಗಿ ಅನೇಕ ರೈತರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮುಂದೆ ತಾಲೂಕಿನ ಯಾವುದೇ ಗ್ರಾಮಗಳಲ್ಲೂ ವಿಂಡ್ ಫ್ಯಾನ್ ಅಳವಡಿಸಲು ಸರ್ಕಾರ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.ರೈತ ಸಂಘದ ಮುಖಂಡರಾದ ಭರಮಸಮುದ್ರ ಕುಮಾರ್, ಜಯರಾಂ, ಪಾಲನಾಯಕ, ಬಸವರಾಜ್, ಮಲ್ಲಿಕಾರ್ಜುನ್, ರಂಗಪ್ಪ, ನಾಗರಾಜ್, ಮಹಾಂತೇಶ್ ಮತ್ತಿತರರು ಇದ್ದರು.
- - -ಕೋಟ್ ಐದಾರು ವರ್ಷಗಳಿಂದಲೂ ರಿನ್ಯೂ, ಕ್ಲೀನ್ ಮ್ಯಾಕ್ಸ್, ಜೆಎಸ್‌ಡಬ್ಲ್ಯು ಸೇರಿದಂತೆ 8ಕ್ಕೂ ಹೆಚ್ಚು ಕಂಪನಿಗಳು ಜಗಳೂರು ತಾಲೂಕಿನ ಕೃಷಿ ಭೂಮಿಗಳನ್ನು ರೈತರಿಂದ ಖರೀದಿಸಿ, ಫ್ಯಾನ್ ಅಳವಡಿಸುತ್ತಿದ್ದಾರೆ. ಇದು ಹೀಗೇ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಆಹಾರ ಕ್ಷಾಮ ಉಂಟಾಗಬಹುದು
- ಲಕ್ಷ್ಮಣ ನಾಯಕ, ಪ್ರಧಾನ ಕಾರ್ಯದರ್ಶಿ, ರೈತ ಸಂಘ- - - -26ಜೆಎಲ್.ಆರ್.1:
ಜಗಳೂರು ತಾಲೂಕಿನ ರಂಗಯ್ಯನದುರ್ಗದ ಕೊಂಡುಕುರಿ ಅರಣ್ಯ ವ್ಯಾಪ್ತಿಯ ಸೂಕ್ಷ್ಮವಲಯ ಹಾಗೂ ಸರ್ಕಾರಿ ಜಾಗಗಳಲ್ಲಿ ಅಕ್ರಮವಾಗಿ ವಿಂಡ್ ಫ್ಯಾನ್ ಅಳವಡಿಸಿಕೆ ಖಂಡಿಸಿ ಬುಧವಾರ ರಾಜ್ಯ ರೈತ ಸಂಘ, ಅಖಂಡ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.