ಇಂದಿನ ಮೊಬೈಲ್, ಇಂಟರ್ನೆಟ್ ಯುಗದಲ್ಲಿ ಎಲ್ಲವೂ ಬೆರಳ ತುದಿಯಲ್ಲಿದೆ. ಆದರೆ ಮೊಬೈಲ್ ನಮಗೆ ಮಾಹಿತಿಯನ್ನು ಕೊಡುತ್ತದೆ, ಪುಸ್ತಕಗಳು ಜ್ಞಾನವನ್ನು ಕೊಡುತ್ತದೆ. ಮೊಬೈಲ್ ನಮಗೆ ವೇಗವನ್ನು ಕೊಡುತ್ತದೆ, ಪುಸ್ತಕಗಳು ನಮಗೆ ತಾಳ್ಮೆಯನ್ನು ಕಲಿಸುತ್ತದೆ ಎಂದು ಆಂತರಿಕ ಲೆಕ್ಕಪರಿಶೋಧಕ ಬಿ.ವಿ.ರವೀಂದ್ರನಾಥ್ ಹೇಳಿದರು.
ಕನ್ನಡಪ್ರಭ ವಾರ್ತೆ ಸಾಗರ
ಇಂದಿನ ಮೊಬೈಲ್, ಇಂಟರ್ನೆಟ್ ಯುಗದಲ್ಲಿ ಎಲ್ಲವೂ ಬೆರಳ ತುದಿಯಲ್ಲಿದೆ. ಆದರೆ ಮೊಬೈಲ್ ನಮಗೆ ಮಾಹಿತಿಯನ್ನು ಕೊಡುತ್ತದೆ, ಪುಸ್ತಕಗಳು ಜ್ಞಾನವನ್ನು ಕೊಡುತ್ತದೆ. ಮೊಬೈಲ್ ನಮಗೆ ವೇಗವನ್ನು ಕೊಡುತ್ತದೆ, ಪುಸ್ತಕಗಳು ನಮಗೆ ತಾಳ್ಮೆಯನ್ನು ಕಲಿಸುತ್ತದೆ ಎಂದು ಆಂತರಿಕ ಲೆಕ್ಕಪರಿಶೋಧಕ ಬಿ.ವಿ.ರವೀಂದ್ರನಾಥ್ ಹೇಳಿದರು.ಇಲ್ಲಿನ ರವೀಂದ್ರ ಪುಸ್ತಕಾಲಯವು ಪಟ್ಟಣದ ಶಿವಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಎಂಟು ದಿನಗಳ ಕಾಲ ಹಮ್ಮಿಕೊಂಡಿರುವ ಪುಸ್ತಕ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಕೈಗೆ ಮೊಬೈಲ್ ಜೊತೆಗೆ ಒಂದು ಪುಸ್ತಕವನ್ನು ಕೂಡಿ ಎಂದು ಹೇಳಿದರು.
ಪುಸ್ತಕವೆಂದರೆ ಕೇವಲ ಕಾಗದದ ಹಾಳೆಗಳಲ್ಲ ; ನಮ್ಮ ಅನುಭವ ಎಂದ ಅವರು, ಒಬ್ಬ ಮನುಷ್ಯ ತನ್ನ ಇಡೀ ಜೀವನದಲ್ಲಿ ಕಲಿತದ್ದನ್ನು ಒಂದು ಪುಸ್ತಕದಲ್ಲಿ ಬರೆದಿಡುತ್ತಾನೆ. ನಾವು ಆ ಪುಸ್ತಕವನ್ನು ಓದಿದಾಗ, ಆ ವ್ಯಕ್ತಿಯ ಇಡೀ ಜೀವನದ ಅನುಭವವನ್ನು ಕೆಲವೇ ಗಂಟೆಗಳಲ್ಲಿ ಪಡೆದುಕೊಳ್ಳುತ್ತೇವೆ. ಅದಕ್ಕಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ ಎಂದು ಹೇಳಿದರು.ಮಕ್ಕಳಿಗೆ ಬಾಲ್ಯದಿಂದಲೇ ಪುಸ್ತಕ ಓದುವ ಸಂಸ್ಕೃತಿಯನ್ನು ಕಲಿಸಬೇಕು ಎಂದು ಹೇಳಿದ ಅವರು, ಮಕ್ಕಳು ಬಾಲ್ಯದಲ್ಲಿ ಏಕಾಏಕಿ ಊಟ ಮಾಡುವುದನ್ನು ಕಲಿಯುವುದಿಲ್ಲ. ಆರಂಭದಲ್ಲಿ ಅನ್ನವನ್ನು ಹರಡಿಕೊಂಡು ಕ್ರಮೇಣ ಊಟ ಮಾಡುವುದನ್ನು ಕಲಿಯುತ್ತದೆ. ಹಾಗೆಯೇ ಚಿಕ್ಕ ಮಕ್ಕಳ ಎದುರಿನಲ್ಲಿ ಒಂದಷ್ಟು ಪುಸ್ತಕಗಳನ್ನು ಇಡಬೇಕು. ಮಗು ಮೊದಲು ಹಾಳೆಗಳನ್ನು ಹರಿದು ಕುತೂಹಲ ಬೆಳಸಿಕೊಳ್ಳುತ್ತದೆ. ಕ್ರಮೇಣ ಪುಸ್ತಕ ಓದುವುದನ್ನು ಅಭ್ಯಾಸ ಮಾಡಿಕೊಳ್ಳುತ್ತದೆ ಎಂದು ವಿಶ್ಲೇಷಿಸಿದರು.
ರವೀಂದ್ರ ಪುಸ್ತಕಾಲಯದ ವೈ.ಎ.ದಂತಿಯವರು ಕೆಪಿಸಿಯಲ್ಲಿ ನೌಕರಿಯಲ್ಲಿದ್ದುಕೊಂಡೇ, ಕೇವಲ ಸಂಬಳಕ್ಕಾಗಿ ದುಡಿಯದೆ, ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂಬ ತುಡಿತದಿಂದ, ೧೯೬೦ರ ದಶಕದಲ್ಲಿ ಈ ರವೀಂದ್ರ ಪುಸ್ತಕಾಲಯವನ್ನು ಪ್ರಾರಂಭಿಸಿದರು. ಆಗ ಸಾಗರ ಒಂದು ಪುಟ್ಟ ಊರು. ಪುಸ್ತಕ ಎಂದರೆ ಎಲ್ಲಿಂದ ತರುವುದು, ಹೇಗೆ ಓದುವುದು ಎಂದು ಗೊತ್ತಿಲ್ಲದ ಕಾಲ. ಅಂತಹ ಕಾಲದಲ್ಲಿ ಒಂದು ಪುಸ್ತಕಾಲಯವನ್ನು ಕಟ್ಟುವುದು ಎಂದರೆ, ಕತ್ತಲಲ್ಲಿ ಒಂದು ದೀಪವನ್ನು ಹಚ್ಚಿದಂತೆ. ಅವರು ಆ ದೀಪವನ್ನು ಹಚ್ಚಿದರು, ಅಲ್ಲಿಂದ ಇಂದಿನವರೆಗೆ ೬೧ ವರ್ಷಗಳಿಂದ ಆ ದೀಪವನ್ನು ಆರದಂತೆ ನಡೆಸಿಕೊಂಡು ಬಂದಿದ್ದಾರೆ ಎಂದು ಪ್ರಶಂಸಿದರು.ಪಟ್ಟಣದ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಪುಸ್ತಕಗಳು ಪ್ರತಿನಿಧಿಸುತ್ತದೆ. ಮನೆಯಲ್ಲೊಂದು ಗ್ರಂಥಾಲಯ, ಒಂದೆರಡು ಪುಸ್ತಕವಿದ್ದರೆ ಲವಲವಿಕೆ ಹೆಚ್ಚಿರುತ್ತದೆ. ಕಳೆದ ಆರು ದಶಕಗಳಿಂದ ರವೀಂದ್ರ ಪುಸ್ತಕಾಲಯ ವೈ.ಎ.ದಂತಿ ಅವರ ನೇತೃತ್ವದಲ್ಲಿ ಜನರಿಗೆ ಉತ್ತಮ ಪುಸ್ತಕವನ್ನು ನೀಡುತ್ತಾ ಬಂದಿದೆ ಎಂದು ಹೇಳಿದರು.
ವೈ.ಎ.ದಂತಿ, ಟಿ.ವಿ.ಪಾಂಡುರಂಗ, ಡಾ.ಪ್ರಭಾಕರರಾವ್, ಐ.ವಿ.ಹೆಗಡೆ ಹಾಜರಿದ್ದರು.ಗ್ರಂಥಾಲಯಕ್ಕೆ ಜಾಗ ಮೀಸಲಿಡಿ: ಬಹುತೇಕರು ಇಂದು ಮನೆ ಕಟ್ಟುವಾಗ ಐಷಾರಾಮಿ ವಸ್ತುಗಳಿಗೆ, ಶೋಕೇಸಿಗೆ ಒಂದಷ್ಟು ಜಾಗವನ್ನು ಮೊದಲೇ ಮೀಸಲಿಡುತ್ತಾರೆ. ಆದರೆ ಪುಸ್ತಕಗಳಿಗಾಗಿ ಪುಟ್ಟ ಜಾಗವನ್ನು ಮೀಸಲಿಡುವುದಿಲ್ಲ. ಮನೆ ಕಟ್ಟುವ ಪ್ರತಿಯೊಬ್ಬರೂ ಪುಸ್ತಕಗಳಿಗಾಗಿ ಒಂದಷ್ಟು ಜಾಗವನ್ನು ಮೀಸಲಿಟ್ಟರೆ ಪುಸ್ತಕ ಸಂಸ್ಕೃತಿ ಅಲ್ಲಿಂದಲೇ ಬೆಳೆಯುತ್ತದೆ ಎಂದು ರವೀಂದ್ರನಾಥ್ ಅಭಿಪ್ರಾಯಪಟ್ಟರು.