ತಾಲೂಕು ಕಚೇರಿಯಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಶಾಸಕ ಟಿ.ರಘುಮೂರ್ತಿ ಚರ್ಚೆ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಜಿಲ್ಲಾ ವ್ಯಾಪ್ತಿಯಲ್ಲಿ ಮೂರು ನಗರಸಭೆ ಆಡಳಿತವಿದೆ. ವಿಶೇಷವಾಗಿ ಚಳ್ಳಕೆರೆ ನಗರಸಭೆ ತನ್ನ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ. ಹಿರಿಯೂರು, ಚಿತ್ರದುರ್ಗ ನಗರಸಭೆಗೆ ಹೋಲಿಸಿದರೆ ಚಳ್ಳಕೆರೆ ನಗರಸಭೆ ಆಡಳಿತದ ಬಗ್ಗೆ ಜನಸಾಮಾನ್ಯರಲ್ಲಿ ಬೇಸರವಿದೆ. ವಿಶೇಷವಾಗಿ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗ ಸಾರ್ವಜನಿಕರ ಸಮಸ್ಯೆಗೆ ಸಕರಾತ್ಮಕವಾಗಿ ಸ್ಪಂದಿಸದೆ ಅನಗತ್ಯವಾಗಿ ವಿಳಂಬಮಾಡುವ ಮೂಲಕ ಆಡಳಿತಕ್ಕೆ ಕಪ್ಪುಚುಕ್ಕೆಯಾಗಿದೆ. ತಮ್ಮ ಆಲಸ್ಯವನ್ನು ಬಿಟ್ಟು ಆತ್ಮವಿಶ್ವಾಸದಿಂದ ಕೆಲಸಮಾಡುವತ್ತ ಗಮನ ನೀಡಬೇಕೆಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.ತಾಲೂಕು ಕಚೇರಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ನಗರಸಭೆ ಆಡಳಿತದ ಮೇಲೆ ಸಾರ್ವಜನಿಕರ ನಿರಂತರ ಆರೋಪದ ಹಿನ್ನೆಲೆಯಲ್ಲಿ ದಿಢೀರ್ ಭೇಟಿ ನೀಡಿ ವಿವಿಧ ವಿಭಾಗಗಳ ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆ ನಡೆಸಿದರು.
ನಗರಸಭೆಯ ಆದಾಯವೂ ಸೇರಿದಂತೆ ಎಲ್ಲಾ ವಿಚಾರದಲ್ಲೂ ಹಿನ್ನಡೆಯಾಗಿದೆ. ವಿಶೇಷವಾಗಿ ಸಾರ್ವಜನಿಕರಿಗೆ ವಿತರಣೆಯಾಗುವ ಇ-ಸ್ವತ್ತು ಸೇರಿದಂತೆ ಅನೇಕ ದಾಖಲಾತಿಗಳನ್ನು ನೀಡದೆ ಜನರು ಕಚೇರಿಗೆ ಅಲೆದಾಡುವ ಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾರ್ವಜನಿಕರ ಅಭಿಪ್ರಾಯದಂತೆ ಯಾವ ಅಧಿಕಾರಿಯೂ ಕಚೇರಿಯಲ್ಲಿ ಕುಳಿತು ಕೆಲಸ ಮಾಡದೆ ಕಾಲವ್ಯಯ ಮಾಡುತ್ತಾರೆಂಬ ಆರೋಪವಿದೆ. ಇವುಗಳನ್ನು ಸರಿಪಡಿಸಿಕೊಂಡು ನಗರಸಭೆ ಆಡಳಿತವನ್ನು ಸುಧಾರಣೆ ತರುವ ಜವಾಬ್ದಾರಿ ಪೌರಾಯುಕ್ತರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲಿದೆ ಎಂದು ತಿಳಿಸಿದರು.ಸಭೆಯಲ್ಲಿ ನಗರ ವ್ಯಾಪ್ತಿಯಲ್ಲಿ ಒಟ್ಟು 16775 ಮನೆಗಳಿದ್ದು, ಕಂದಾಯ ವಸೂಲಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ನಿಗದಿಪಡಿಸಿದ ಕಂದಾಯವನ್ನು ವಸೂಲಿ ಮಾಡುವಲ್ಲಿ ವಿಫಲರಾಗಿದ್ದಾರೆ. ಕೂಡಲೇ ಕಂದಾಯ ವಸೂಲಾತಿಯನ್ನು ಹೆಚ್ಚಿಸಬೇಕು. ನಗರಸಭೆ ಅಭಿವೃದ್ದಿಗೆ ಕಂದಾಯವಸೂಲಿಯಾದರೆ ಮಾತ್ರ ಸಾಧ್ಯವಾಗುತ್ತದೆ. ಈ ಬಗ್ಗೆ ಕಂದಾಯಾಧಿಕಾರಿಗಳು ಹಾಗೂ ವಸೂಲಿಗಾರರು ಗಮನ ಹರಿಸಬೇಕೆಂದರು.
ಇದೇ ಸಂದರ್ಭದಲ್ಲಿ ಬೆಂಗಳೂರು ರಸ್ತೆ ಹಾಗೂ ವಿಠಲನಗರ ವ್ಯಾಪ್ತಿಯಲ್ಲಿ ನಗರಂಗೆರೆ ಮತ್ತು ನನ್ನಿವಾಳ ಗ್ರಾಪಂ ಮನೆಗಳಿದ್ದು, ಕುಡಿಯುವ ನೀರು ಸೇರಿದಂತೆ ಎಲ್ಲಾಸೌಲಭ್ಯ ನಗರಸಭೆ ನೀಡಿದರೂ ಕಂದಾಯ ಮಾತ್ರ ಸಂಬಂಧ ಪಟ್ಟ ಗ್ರಾಪಂಗೆ ಪಾವತಿಯಾಗುತ್ತದೆ ಎಂದು ಜೆಇ ಲೋಕೇಶ್ ತಿಳಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಚರ್ಚಿಸುವಂತೆ ಪೌರಾಯುಕ್ತರಿಗೆ ಸೂಚಿಸಿದರು.ನಗರಸಭೆ ವ್ಯಾಪ್ತಿಯಲ್ಲಿ ಪ್ರತಿಮನೆಗೆ ವಾರ್ಷಿಕ 2300 ನೀರಿನ ಕಂದಾಯ, ವಾಣಿಜ್ಯಮಳಿಗೆಗೆ 9200 ಕಂದಾಯವಿದ್ದು ವಸೂಲಿಗಾರರು ಕಂದಾಯ ವಸೂಲಾತಿಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ನಿರ್ದೇಶನ ನೀಡಿದ್ದು, ಗಮನಹರಿಸುವಂತೆ ಪೌರಾಯುಕ್ತರಿಗೆ ಸೂಚಿಸಿದರು.
ನಗರದಲ್ಲಿ ಒಟ್ಟು ೯೬೬ ಬೀದಿ ಬದಿವ್ಯಾಪಾರಿಗಳು, ೧೬೬ ಮಹಿಳಾಸ್ವಸಹಾಯ ಸಂಘಗಳಿಗೆ, ಪರಿಶಿಷ್ಟ ಜಾತಿ ಪರಿಶಿಷ್ಟ ವಿದ್ಯಾರ್ಥಿಗಳಿಗೆ ವಿದ್ಯಾವೇತನವನ್ನು ಸಹ ನೀಡುವ ಬಗ್ಗೆ ಸಮನ್ವಯಾಧಿಕಾರಿ ಭೂತಯ್ಯ ತಿಳಿಸಿದರು. ಕೂಡಲೇ ಬೀದಿಬದಿವ್ಯಾಪಾರಿಗಳಿಗೆ ಪ್ರಾರಂಭದಲ್ಲಿ ೧೫ಸಾವಿರ ಮರುಪಾವತಿನಂತರ ಹೆಚ್ಚುಸಾಲ ನೀಡುವ ಅವಕಾಶವಿದೆ. ಮಹಿಳಾ ಸ್ವಸಹಾಯ ಸಂಘಗಗಳಿಗೆ ಪ್ರಾರಂಭದಲ್ಲಿ ೧೦ಸಾವಿರದಿಂದ ಒಂದು ಲಕ್ಷದವರೆಗೂ ಸಾಲಪಡೆಯುವ ಅವಕಾಶವಿದೆ. ಎಲ್ಲರಿಗೂ ದಾಖಲಾತಿಗಳ ಪರಿಶೀಲನೆ ನಂತರಜಿಲ್ಲಾಧಿಕಾರಿಗಳಿAದ ಅನುಮತಿಪಡೆದು ಕೊಡಿಸಿ ಎಂದು ಸೂಚಿಸಿದರು.ನಗರದಲ್ಲಿ ರಸ್ತೆಗಳ ತುರ್ತು ರಿಪೇರಿಯಾಗಿ 5 ಕೋಟಿ ರು. ಬಿಡುಗಡೆಯಾಗಿದೆ. ರಸ್ತೆಮಾಡುವ ಸಂದರ್ಭದಲ್ಲಿ ಯುಜಿಡಿ ಕಾಮಗಾರಿ ಹಾದುಹೋಗುವ ಮಾರ್ಗವನ್ನು ಪರಿಶೀಲಿಸಿ ರಸ್ತೆನಿರ್ಮಿಸಿ ಅವಶ್ಯಕತೆ ಇದ್ದರೆ ಸ್ಲಾಬ್‌ಹಾಕಿ ಅನಗತ್ಯವಾಗಿ ಹಣವನ್ನು ಅಪವ್ಯಯವಾಗದಂತೆ ಎಂಜಿನಿಯರ್ ಜಾಗೃತೆ ವಹಿಸಬೇಕೆಂದರು. ನಗರದಲ್ಲಿ ಈಗಾಗಲೇ 6 ಸಾವಿರಕ್ಕೂ ಹೆಚ್ಚು ವಿದ್ಯುತ್ ಕಂಬಗಳಿದ್ದು 2 ಸಾವಿರ ಕಂಬಗಳಿಗೆ ಲೈಟ್ ಇಲ್ಲ ಸರಿಪಡಿಸುವಂತೆ ಸೂಚಿಸಿದರು. ರಾಷ್ಟ್ರೀಯ ಹೆದ್ಧಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ಅಂಗಡಿಮಾಲೀಕರು ನಗರದ ಬೆಳವಣಿಗೆ ಹಿತದೃಷ್ಠಿಯಿಂದ ಅವಕಾಶ ಮಾಡಿಕೊಡುವಂತೆ ಸೂಚಿಸಿದರು. ನಗರದ ವಿವಿಧ ಬಡಾವಣೆಗಳಲ್ಲಿ ಒಟ್ಟು 113 ಪಾರ್ಕಗಳಿದ್ದು, ಅವುಗಳ ಸದುಪಯೋಗಪಡಿಸಿಕೊಳ್ಳುವನಿಟ್ಟಿನಲ್ಲಿ ಅವಶ್ಯವಿರುವ ಮೂಲಭೂತ ಸೌಕರ್ಯವನ್ನು ಕೂಡಲೇ ಕಲ್ಪಿಸುವಂತೆ ಸೂಚಿಸಿದರು.
ಸಭೆಯಲ್ಲಿ ಪೌರಾಯುಕ್ತೆ ಡಾ.ನಾಗವೇಣಿ, ಕಂದಾಯಾಧಿಕಾರಿ ಎಸ್.ಸತೀಶ್, ನೈರ್ಮಲ್ಯ ಇಂಜಿನಿಯರ್ ನರೇಂದ್ರಬಾಬು, ಸಹಾಯಕ ಇಂಜಿನಿಯರ್ ಲೋಕೇಶ್, ಚೇತನ್, ಆರೋಗ್ಯ ನಿರೀಕ್ಷಕರಾದ ಮಹಾಲಿಂಗಪ್ಪ, ಗೀತಾಕುಮಾರಿ, ಸಾಗರ್, ಗಣೇಶ್, ಈ.ತಿಪ್ಪೇಸ್ವಾಮಿ, ವಿಶ್ವನಾಥ, ಗುರುಮೂರ್ತಿ, ರಾಜೇಶ್, ಎಸ್.ಎಲ್.ಮಂಜುಣ್ಣ ಮುಂತಾದವರು ಭಾಗವಹಿಸಿದ್ದರು.