ವಿದ್ಯಾರ್ಥಿ ಜೀವನವು ಭವಿಷ್ಯ ರೂಪಿಸಿಕೊಳ್ಳುವ ಮಹತ್ವದ ಹಂತವಾಗಿದ್ದು, ಈ ಅವಧಿಯಲ್ಲಿ ಗುರಿ ನಿಗದಿಪಡಿಸಿಕೊಂಡು ಶಿಸ್ತು, ಏಕಾಗ್ರತೆ ಹಾಗೂ ಸತತ ಪರಿಶ್ರಮದೊಂದಿಗೆ ಮುನ್ನಡೆಯಬೇಕು ಎಂದು ದೇಶದ ಹೆಸರಾಂತ ಹಾಗೂ ಅಂತಾರಾಷ್ಟ್ರೀಯಮಟ್ಟದ ಪ್ರಮಾಣೀಕೃತ ತರಬೇತುದಾರ ಸತೀಶ ಆರ್. ಹೇಳಿದರು.
ಕನ್ನಡಪ್ರಭ ವಾರ್ತೆ ಸುರಪುರ
ವಿದ್ಯಾರ್ಥಿ ಜೀವನವು ಭವಿಷ್ಯ ರೂಪಿಸಿಕೊಳ್ಳುವ ಮಹತ್ವದ ಹಂತವಾಗಿದ್ದು, ಈ ಅವಧಿಯಲ್ಲಿ ಗುರಿ ನಿಗದಿಪಡಿಸಿಕೊಂಡು ಶಿಸ್ತು, ಏಕಾಗ್ರತೆ ಹಾಗೂ ಸತತ ಪರಿಶ್ರಮದೊಂದಿಗೆ ಮುನ್ನಡೆಯಬೇಕು ಎಂದು ದೇಶದ ಹೆಸರಾಂತ ಹಾಗೂ ಅಂತಾರಾಷ್ಟ್ರೀಯಮಟ್ಟದ ಪ್ರಮಾಣೀಕೃತ ತರಬೇತುದಾರ ಸತೀಶ ಆರ್. ಹೇಳಿದರು.ನಗರದ ವೀರಪ್ಪ ನಿಷ್ಠಿ ಎಂಜಿನೀಯರಿಂಗ್ ಕಾಲೇಜಿನಲ್ಲಿ ಭಾನುವಾರ ತ್ರಿವಿಧ ದಾಸೋಹಿ ಪರಮಪೂಜ್ಯ ಶ್ರೀ ದೊಡ್ಡಪ್ಪ ಅಪ್ಪನವರ 43ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಮೂರು ದಿನಗಳ ವಿಶೇಷ ಓರಿಯಂಟೇಶನ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ, ನೈತಿಕ ಮೌಲ್ಯ, ಆತ್ಮವಿಶ್ವಾಸ ಹಾಗೂ ದೇಶಪ್ರೇಮ ಬೆಳೆಸಿಕೊಳ್ಳಬೇಕು. ಪೋಷಕರು ಮಕ್ಕಳ ಭವಿಷ್ಯಕ್ಕಾಗಿ ಅನೇಕ ತ್ಯಾಗಗಳನ್ನು ಮಾಡುತ್ತಾರೆ. ಅವರ ಪ್ರೀತಿ, ಕಾಳಜಿ ಹಾಗೂ ಪರಿಶ್ರಮವನ್ನು ಅರ್ಥಮಾಡಿಕೊಂಡು ಹೆತ್ತವರನ್ನು ಗೌರವಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.ಮೂರು ದಿನಗಳ ಕಾರ್ಯಾಗಾರದಲ್ಲಿ ವ್ಯಕ್ತಿತ್ವ ವಿಕಸನ, ಸ್ಮಾರ್ಟ್ ವರ್ಕ್, ಜ್ಞಾಪಕಶಕ್ತಿ ಹೆಚ್ಚಿಸುವ ತಂತ್ರಗಳು, ಏಕಾಗ್ರತೆ ಬೆಳೆಸಿಕೊಳ್ಳುವ ವಿಧಾನಗಳು ಹಾಗೂ ಎಡ ಮತ್ತು ಬಲ ಮೆದುಳಿನ ಕಾರ್ಯವೈಖರಿ ಕುರಿತು ತರಬೇತಿ ನೀಡಲಾಯಿತು. ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಗುರಿ ಸಾಧಿಸುವ ಕುರಿತು ದೃಶ್ಯಾವಳಿಗಳ ಮೂಲಕ ಅರಿವು ಮೂಡಿಸಲಾಯಿತು. ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಹಾಗೂ ಆತ್ಮವಿಶ್ವಾಸ ಮೂಡಿಸಿದರು.
ಕಾರ್ಯಕ್ರಮದ ಮೂರನೇ ದಿನ ನಡೆದ ಪೋಷಕರ ಪಾದಪೂಜೆ ವಿಶೇಷ ಗಮನ ಸೆಳೆಯಿತು. ವಿದ್ಯಾರ್ಥಿಗಳು ತಮ್ಮ ಹೆತ್ತವರ ಪಾದಪೂಜೆ ನೆರವೇರಿಸಿ ಗೌರವಿಸಿದರು. ಪೋಷಕರು ಹಾಗೂ ಮಕ್ಕಳ ನಡುವಿನ ಪವಿತ್ರ ಬಾಂಧವ್ಯ, ಕುಟುಂಬದ ಮೌಲ್ಯಗಳು ಹಾಗೂ ಹಿರಿಯರನ್ನು ಗೌರವಿಸುವ ಸಂಸ್ಕಾರದ ಮಹತ್ವವನ್ನು ಈ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.ಪ್ರಾಂಶುಪಾಲ ಡಾ. ಶರಣಬಸಪ್ಪ ಸಾಲಿ, ಪರೀಕ್ಷಾ ವಿಭಾಗದ ಡೀನ್ ಡಾ. ಅಶೋಕ್ ಪಾಟೀಲ, ಶೈಕ್ಷಣಿಕ ವಿಭಾಗದ ಡೀನ್ ಪ್ರೊ. ಶರಣಗೌಡ ಪಾಟೀಲ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಪ್ರೊ. ಸಾಹೇಬಗೌಡ ಪಾಟೀಲ, ಪ್ರೊ. ಸಿದ್ದಣ್ಣಗೌಡ ಪಾಟೀಲ, ಪ್ರೊ. ಪಾರ್ವತಿ ಪಾಟೀಲ, ಪ್ರೊ. ಶಿವನಗೌಡ ಪಾಟೀಲ, ಪ್ರೊ. ಪೂಜಾ ಹತ್ತರ್ಕಿ ಹಾಗೂ ಪ್ರೊ. ಸಾಹೇಬಗೌಡ ಮಲಾರ ಉಪಸ್ಥಿತರಿದ್ದರು. ಉಪನ್ಯಾಸಕರು, ಪ್ರಥಮ ವರ್ಷದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಪೋಷಕರು ಭಾಗವಹಿಸಿದ್ದರು. ರಾಧಿಕಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಸಮಾರೋಪ ಸಮಾರಂಭ ನಡೆಯಿತು.