ಮಕ್ಕಳಲ್ಲಿ ಧನಾತ್ಮಕ ಚಿಂತನೆ ತುಂಬಿ

| Published : Feb 08 2024, 01:36 AM IST

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರತಿಶತ ನೂರಕ್ಕೆ ನೂರು ಆಗುವಂತೆ ಪಾಲಕರಲ್ಲಿ ಮತ್ತು ಶಿಕ್ಷಕರಲ್ಲಿ ಸ್ಪರ್ಧೆ ಹುಟ್ಟಬೇಕು. ಮಕ್ಕಳಿಗೆ ಕಲ್ಪನಾ ಶಕ್ತಿ ವೃದ್ಧಿಸಲು ನೀತಿ ಭರಿತವಾದ ಕಥೆ ಹೇಳಬೇಕು

ಮುಂಡರಗಿ: ಮಕ್ಕಳಿಗೆ ಓದಿನ ಕುರಿತು ಒತ್ತಡ ಹೇರದೆ ಸಮಯ ಸಿಕ್ಕಾಗೋಮ್ಮೆ ಒಂದಿಷ್ಟು ವಿಚಾರಿಸುವ ಮೂಲಕ ಮಕ್ಕಳಲ್ಲಿ ಧನಾತ್ಮಕ ಚಿಂತನೆ ತುಂಬಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಂ.ಎ. ರಡ್ಡೇರ ಹೇಳಿದರು.

ಅವರು ಮಂಗಳವಾರ ಸಂಜೆ ಪಟ್ಟಣದ ಶ್ರೀಸ್ವಾಮಿ ವಿವೇಕಾನಂದ ಕನ್ನಡ ಪೂರ್ವ ಪ್ರಾಥಮಿಕ ಶಾಲೆ, ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ 35ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಲಾ ವಾತಾವರಣ ಹಾಗೂ ಮಕ್ಕಳ ಬುದ್ದಿ ವಿಕಾಸಕ್ಕೆ ಕೈಗೊಂಡ ಕ್ರಮಗಳ ಕುರಿತು ಚರ್ಚಿಸಿ, ಪರಾಮರ್ಶಿಸಿಕೊಳ್ಳುವುದೇ ಈ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ. ಸತತ ಪ್ರಯತ್ನದಿಂದ ಗೆಲುವು ಸಾಧಿಸಲು ಸಾಧ್ಯ. ಮಕ್ಕಳಲ್ಲಿ ಧನಾತ್ಮಕ ಚಿಂತನೆಗಳನ್ನು ಶಿಕ್ಷಕರು ಮತ್ತು ಪಾಲಕರು ತುಂಬಬೇಕು. ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರತಿಶತ ನೂರಕ್ಕೆ ನೂರು ಆಗುವಂತೆ ಪಾಲಕರಲ್ಲಿ ಮತ್ತು ಶಿಕ್ಷಕರಲ್ಲಿ ಸ್ಪರ್ಧೆ ಹುಟ್ಟಬೇಕು. ಮಕ್ಕಳಿಗೆ ಕಲ್ಪನಾ ಶಕ್ತಿ ವೃದ್ಧಿಸಲು ನೀತಿ ಭರಿತವಾದ ಕಥೆ ಹೇಳಬೇಕು ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗದಗ ಕೆವಿಹಂಚಿನಾಳ ನರ್ಸಿಂಗ್ ಕಾಲೇಜಿನ ಮುಖ್ಯಸ್ಥ ಡಾ. ವಿರೇಶ ಹಂಚಿನಾಳ ಮಾತನಾಡಿ, ವಿದ್ಯಾರ್ಥಿಗಳು ಸದಾ ಪ್ರಯತ್ನವಾದಿಗಳಾಗಬೇಕು. ವಿದ್ಯ ಕಲಿಸಿದ ಗುರು, ಕಲಿತ ಶಾಲೆಯನ್ನು ಎಂದಿಗೂ ಮರೆಯಬಾರದು. ವಿದ್ಯಾರ್ಥಿಗಳಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ ಇರಬೇಕು. ಸದಾ ಪ್ರಯತ್ನವಾದಿಗಳಾಗಬೇಕು. ಪ್ರಯತ್ನ ಪಡೆಯದೆ ಸಾಧನೆ ಮಾಡಲು ಸಾಧ್ಯವಿಲ್ಲ. ನಿರಂತರವಾಗಿ ಪ್ರಯತ್ನ ಮಾಡುತ್ತಾ ಸಾಧನೆಯ ಮೆಟ್ಟಲನ್ನು ಏರುತ್ತಾ ಹೋಗಬೇಕು. ಗುರು, ಋಷಿ, ತಂದೆ ತಾಯಿಯರ ಋಣ ತೀರಿಸುವ ಕಾರ್ಯ ಮಾಡಬೇಕು ಎಂದರು.

ಅರುಣ ಕುಲಕರ್ಣಿ ಹಾಸ್ಯ ಚಟಾಕೆ ಹಾರಿಸುವ ಮೂಲಕ ಉಪನ್ಯಾಸ ಮಾಡಿದರು. ಸಂಸ್ಥೆಯ ಮುಖಂಡ ಈಶ್ವರಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿ ವಿ. ಸೀತಾರಾಮರಾಜು, ಎಸ್.ವಿ. ಪಾಟೀಲ, ಕರಬಸಪ್ಪ ಹಂಚಿನಾಳ, ಮೈಲಾರಪ್ಪ ಉದಂಡಿ, ಎನ್. ವೆಂಕಟರಾವ್, ಕರೀಂಸಾಬ ಮುಲ್ಲಾ, ನಾಗೇಶ ಹುಬ್ಬಳ್ಳಿ, ರಜನಿಕಾಂತ ದೇಸಾಯಿ, ಪಿ.ಎಸ್. ನಾಯ್ಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿಗೆ ದಾನ ನೀಡಿದ ಮಹನೀಯರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ಸಿ.ಎಸ್. ಅರಸನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವರಡ್ಡಿ ಇಮ್ರಾಪೂರ ಸ್ವಾಗತಿಸಿ, ಗುಡದೀರಪ್ಪ ಲಿಂಗಶೆಟ್ಟರ ನಿರೂಪಿಸಿದರು. ನಂತರ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.