ನರಗುಂದ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಸಂಜೆ ಜರುಗಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕೃಷ್ಣ-ರಾಧೆಯರ ವೇಷದಲ್ಲಿ ಮಕ್ಕಳು ಗಮನ ಸೆಳೆದರು.

ನರಗುಂದ: ತಾಯಿ ಮಗುವಿಗೆ ಜನ್ಮ ಕೊಟ್ಟರೆ ಸಾಲದು, ಶ್ರೀಕೃಷ್ಣನ ವಿಚಾರವುಳ್ಳ ಸಂಸ್ಕಾರ ಕೊಡಬೇಕು. ಮಕ್ಕಳಿಗೆ ತಾಳ್ಮೆ ಮತ್ತು ಧೈರ್ಯ ಕಲಿಸಿದರೆ, ಅವರು ಬೇಗ ಗುರಿ ಮುಟ್ಟುತ್ತಾರೆ. ಶ್ರೀ ಕೃಷ್ಣ ಎಂದರೆ ಧರ್ಮವಾಗಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ಪ್ರಭಕ್ಕನವರು ಹೇಳಿದರು.

ಅವರು ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಸಂಜೆ ಜರುಗಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕೃಷ್ಣ-ರಾಧೆಯರ ವೇಷದಲ್ಲಿದ್ದ ಮುದ್ದು ಮಕ್ಕಳಿಂದ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದರು. ನಿತ್ಯವೂ ಪ್ರಕೃತಿಗೆ ಧನ್ಯವಾದ ಹೇಳೋಣ. ಕಾರಣ ನಮ್ಮ ಬದುಕಿಗೆ ಪ್ರಕೃತಿ ಅತ್ಯಂತ ಅವಶ್ಯ ಕೃಷ್ಣ ಸ್ತ್ರೀ ಅಪಹರಣಕಾರನೂ ಅಲ್ಲ, ಸ್ತ್ರೀಲೋಲನೂ ಅಲ್ಲ. ಆದ್ದರಿಂದಲೇ ಎಲ್ಲರೂ ಕೃಷ್ಣನಂತಹ ಗಂಡ ಮತ್ತು ಮಕ್ಕಳನ್ನು ಪಡೆಯಲು ಇಚ್ಛೆ ಪಡುತ್ತಾರೆಂದು ಹೇಳಿದರು.

ಸಿಪಿಐ ಸತ್ಯಪ್ಪ ಮಾಳಗೊಂಡ ಮಾತನಾಡಿ, ಕೃಷ್ಣಂ ವಂದೇ ಜಗದ್ಗುರು ಎನ್ನುವಂತೆ, ಹಲವು ಅವತಾರಗಳಲ್ಲಿ ಕಂಡುಬರುವ ಭಗವಂತ ಒಬ್ಬನೇ ಆಗಿದ್ದಾನೆ. ಜಗತ್ತಿನಲ್ಲಿ ಅಧರ್ಮ ಹೆಚ್ಚಾದಾಗ ಧರ್ಮವನ್ನು ರಕ್ಷಿಸಲು ಶ್ರೀಕೃಷ್ಣ ಪರಮಾತ್ಮ ಅವತರಿಸಿ ಬಂದು ಧರ್ಮದ ಪರವಾಗಿ ನಿಲ್ಲುತ್ತಾನೆ. ಭಾರತೀಯರಾದ ನಾವು ಸದಾ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.

ಪತ್ರಕರ್ತ ಡಾ. ಬಸವರಾಜ ಹಲಕುರ್ಕಿ ಮಾತನಾಡಿ, ಮಕ್ಕಳು ಕೃಷ್ಣ-ರಾಧೆಯರ ವೇಷ ಧರಿಸಿದರೆ ಸಾಲದು, ಅವನಂತೆ ಶ್ರೇಷ್ಠ ವ್ಯಕ್ತಿಗಳಾಗಿ ಬೆಳೆಯಬೇಕು ಎಂದರು.

ಶ್ರೀಕೃಷ್ಣ ಮತ್ತು ರಾಧೆಯರ ವೇಷ ಧರಿಸಿದ ಮುದ್ದು ಮಕ್ಕಳಿಂದ ಅಮೃತವಾಣಿ, ಶ್ಲೋಕ, ಹಾಡು ಮತ್ತು ನೃತ್ಯ ಪ್ರದರ್ಶನ ನಡೆಯಿತು. ಮಕ್ಕಳಿಗೆ ಬಹುಮಾನ ನೀಡಲಾಯಿತು.

ರಾಮಕುಮಾರ ಪ್ರಸಾದ, ಡಾ. ವೀರನಗೌಡ ಪಾಟೀಲ, ಪತ್ರಕರ್ತರಾದ ರಮೇಶ ಮೋಟಿ, ಎಸ್.ಜಿ. ತೆಗ್ಗಿನಮನಿ, ಗೀತಾ ಪಾಟೀಲ, ಭುವನೇಶ್ವರಿ ಅಂಗಡಿ, ಅನಿತಾ ಆನೇಗುಂದಿ ಇದ್ದರು. ಡಾ. ವೀರನಗೌಡ ವೀರನಗೌಡ್ರ ಸ್ವಾಗತಿಸಿದರು. ಉಮಾ ನಾಶಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಮಾದರ ವಂದಿಸಿದರು.