ಕಾರಟಗಿ: ಪ್ರಸಕ್ತ ದಿನ ಮಕ್ಕಳಲ್ಲಿ ಶಿಕ್ಷಕರು ಮಾನವೀಯತೆ ಆದರ್ಶ ಮೌಲ್ಯ ತುಂಬಬೇಕಾಗಿದೆ. ವಿದ್ಯೆ,ವಿನಯ, ಮಾನವೀಯತೆಗೆ ಕಾರಣವಾಗಬೇಕಾಗಿದೆ ಎಂದು ಗಂಗಾವತಿ ಎಸ್‌ಕೆಎನ್‌ಜಿ ಕಾಲೇಜು ಕನ್ನಡ ಉಪನ್ಯಾಸಕ ಪವನಕುಮಾರ ಗುಂಡೂರ್ ಹೇಳಿದರು.

ತಾಲೂಕಿನ ಬೂದುಗುಂಪಾ ಗ್ರಾಮದ ಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೇಗದ ಜೀವನ, ನಗರದ ಸಂಸ್ಕೃತಿಯಿಂದ ಇಂದು ನಾವು ನೋಡುತ್ತಿರುವ ನಾನಾ ಘಟನೆಗಳಿಂದ ಕಲಿಯಬೇಕಾಗಿದ್ದು ಮಾನವೀಯತೆ ಮತ್ತು ವಿನಯ.ವಿದ್ಯಾವಂತ ತಂದೆ ತಾಯಿಗಳನ್ನು ನಿರ್ಲಕ್ಷಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇದು ನಗರ ಸಂಸ್ಕೃತಿ.ಆದರೆ ಗ್ರಾಮೀಣ ಪ್ರದೇಶದಲ್ಲಿ ಇನ್ನು ಇಂತಹ ಅಪಾಯಕಾರಿ ಸಂಸ್ಕೃತಿ ಬಂದಿಲ್ಲ. ಹೀಗಾಗಿ ನಾವು ಎಚ್ಚೆತ್ತುಕೊಂಡು ನಮ್ಮ ಮಕ್ಕಳಿಗೆ ಮಾನವೀಯತೆ ಕಲಿಸಬೇಕಾಗಿದೆ ಎಂದರು.

ಮಗು ತಂದೆ ತಾಯಿಯರಿಗಷ್ಟೇ ಸೇರಿದಲ್ಲ.ಸಮಾಜ,ದೇಶಕ್ಕೆ ಸೇರಿದ್ದು. ನಾಳಿನ ಭಾರತದ ಭವಿಷ್ಯ ಇಂದಿನ ಮಕ್ಕಳಲ್ಲಿದೆ. ಮಕ್ಕಳ ಮನಸ್ಸಿನಲ್ಲಿ ದೊಡ್ಡ ಕನಸು ಬಿತ್ತಬೇಕು.ತಂದೆಯ ಹೆಗಲು, ತಾಯಿಯ ಮಡಿಲು ಸ್ವರ್ಗಕ್ಕಿಂತ ಮಿಗಿಲು. ಪಠ್ಯ ಜ್ಞಾನ ನೀಡಿದರೆ ಪಠ್ಯೇತರ ಚಟುವಟಿಕೆ ಮಕ್ಕಳ ವ್ಯಕ್ತಿತ್ವ ಗಟ್ಟಿಗೊಳಿಸುತ್ತವೆ. ಎಲ್ಲ ಮಕ್ಕಳಲ್ಲಿ ವಿಶಿಷ್ಠ ಪ್ರತಿಭೆ ಇರುತ್ತದೆ. ಇವುಗಳ ಜತೆಗೆ ವಾತ್ಸಲ್ಯ,ಮಮತೆ ಮತ್ತು ಕಕುಲಾತಿ ಮಕ್ಕಳ ಹೃದಯದಲ್ಲಿ ತುಂಬಬೇಕು ಎಂದು ಹೇಳಿದರು.

ಶಿಕ್ಷಕ ಕೆ.ವಿ.ಎಂ. ಅಶೋಕ ಮಾತನಾಡಿದರು. ನಂತರ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಬೂದುಗುಂಪಾ, ಹಾಲಸಮುದ್ರ ಮತ್ತು ತಿಮ್ಮಾಪುರ ಗ್ರಾಮಗಳ ಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಣ ಸಂಯೋಜಕ ಶಶಿಧರ ಸ್ವಾಮಿ, ಶರಣೇಗೌಡ ಮಾಲಿಪಾಟೀಲ್, ಪರಮೇಶಗೌಡ ಕೊಂತನೂರು ಪಟೇಲ್, ಶಿವಲಿಂಗಯ್ಯ ಹಿರೇಮಠ, ಬಸವರಾಜ ಕುಲಕರ್ಣಿ, ಅಮರಗುಂಡಪ್ಪ ಕೋರಿ, ತಿಮ್ಮಣ್ಣ ಹಾಲಸಮುದ್ರ, ಶರಣೇಗೌಡ ಅಂಗಡಿ ಮತ್ತು ಗಾಯಕ ದ್ಯಾಮೇಶ ಇದ್ದರು.


ವಿರಕ್ತಮಠದ ಶ್ರೀಸಿದ್ದೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಶಾಲೆಯ ಕಾರ್ಯದರ್ಶಿ ಗುರುಸಿದ್ದಪ್ಪ ಯಕರಲ್ ಅಧ್ಯಕ್ಷತೆ ವಹಿಸಿದ್ದರು. ಸಂತೋಷ್ ಕುಮಾರ ಯರಕಲ್ ಕಾರ್ಯಕ್ರಮ ನಿರ್ವಹಿಸಿದರು.