ಕಡೂರುಸಣ್ಣತನವನ್ನು ಬದಿಗೊತ್ತಿದರೆ ಸಂಸ್ಥೆಗಳು ರೈತರ ಸಹಕಾರದಿಂದ ಸದೃಢವಾಗಿ ಬೆಳೆಯಲು ಸಾಕಷ್ಟು ಅವಕಾಶ ಲಭಿಸಲಿದೆ ಎಂದು ಬೆಂಗಳೂರು ಜಲಾನಯನ ಅಭಿವೃದ್ಧಿ ಇಲಾಖೆ ತೋಟಗಾರಿಕೆ ಜಂಟಿ ನಿರ್ದೇಶಕ ಬಿ.ಎನ್. ಪ್ರಸಾದ್ ಹೇಳಿದರು.

- ನಾಲ್ಕನೇ ದಾಳಿಂಬೆಯ ತಾಂತ್ರಿಕ ಅಧಿವೇಶನ, ಹೆರಿಟೇಜ್‌ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆದ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಕಡೂರು

ಸಣ್ಣತನವನ್ನು ಬದಿಗೊತ್ತಿದರೆ ಸಂಸ್ಥೆಗಳು ರೈತರ ಸಹಕಾರದಿಂದ ಸದೃಢವಾಗಿ ಬೆಳೆಯಲು ಸಾಕಷ್ಟು ಅವಕಾಶ ಲಭಿಸಲಿದೆ ಎಂದು ಬೆಂಗಳೂರು ಜಲಾನಯನ ಅಭಿವೃದ್ಧಿ ಇಲಾಖೆ ತೋಟಗಾರಿಕೆ ಜಂಟಿ ನಿರ್ದೇಶಕ ಬಿ.ಎನ್. ಪ್ರಸಾದ್ ಹೇಳಿದರು.ಪಟ್ಟಣದ ಹೊರವಲಯದ ಹೆರಿಟೇಜ್ ಕನ್ವೆನ್ಷನ್ ಹಾಲ್‌ನಲ್ಲಿ ಶುಕ್ರವಾರ ದಕ್ಷಿಣ ಭಾಗದ ದಾಳಿಂಬೆ ಬೆಳೆಗಾರರ ರೈತೋ ತ್ಪಾದಕ ಸಂಸ್ಥೆ ಹಾಗೂ ರಾಷ್ಟ್ರೀಯ ದಾಳಿಂಬೆ ಸಂಶೋಧನ ಕೇಂದ್ರ ಸೊಲ್ಲಾಪುರ (ಮಹಾರಾಷ್ಟ್ರ), ಸಹಯೋಗದಲ್ಲಿ ನಡೆದ ನಾಲ್ಕನೇ ದಾಳಿಂಬೆ ತಾಂತ್ರಿಕ ಅಧಿವೇಶನ ಉದ್ಘಾಟಿಸಿ ಮಾತನಾಡಿ, ರಾಜ್ಯಾದ್ಯಂತ ಸುಮಾರು 750ಕ್ಕೂ ಹೆಚ್ಚು ರೈತ ಉತ್ಪಾದಕ ಸಂಸ್ಥೆಗಳು ತನ್ನ ಪರಿಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೆಲವು ಸಂಸ್ಥೆಗಳು ನಿಷ್ಕ್ರಿಯಗೊಂಡಿವೆ. ಆದರೆ, ದಾಳಿಂಬೆ ಬೆಳೆಗಾಗಿಯೇ ರೈತರಿಗೆ ಪೂರಕ ತಾಂತ್ರಿಕ ಮಾಹಿತಿಗಳನ್ನು ಒಳಗೊಂಡ ಸಂಸ್ಥೆ ಕಳೆದ 4 ವರ್ಷದ ಹಿಂದೆ ಹುಟ್ಟು ಹಾಕಿರುವ ಸಂಸ್ಥೆಯು ಕಡಿಮೆ ಅವಧಿಯಲ್ಲಿ ಆರ್ಥಿಕವಾಗಿ ಸಧೃಡಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.ದಾಳಿಂಬೆ ಉತ್ಪಾದನೆಯಿಂದ ಆರ್ಥಿಕವಾಗಿ ₹200 ಕೋಟಿಯಷ್ಟು ವಹಿವಾಟು ನಡೆಯುತ್ತಿವೆ. ಇದಕ್ಕೆ ದಾಳಿಂಬೆ ಬೆಳೆಗಾರರ ಕೊಡುಗೆ ಅಪಾರವಾಗಿದೆ. ಮುಖ್ಯವಾಗಿ ಬೆಳೆಗಾರರು ಉತ್ಕೃಷ್ಟ ಬೆಳೆ ಬೆಳೆಯಲು ಒತ್ತುಕೊಡಬೇಕಿದೆ. ಇದಕ್ಕೆ ಪೂರಕವಾಗಿ ದಾಳಿಂಬೆ ರೈತೋತ್ಪಾದಕ ಸಂಸ್ಥೆ ಬೆನ್ನಲುಬಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಂಸ್ಥೆ ತನ್ನ ಶಾಖೆಗಳನ್ನು ಆರಂಭಿಸುವ ಚಿಂತನೆ ನಡೆಸಬೇಕಿದೆ. ಇದರಿಂದ ರೈತನ ಬೆಳೆಗಳಿಗೆ ಮಾರುಕಟ್ಟೆ ಸುಧಾರಣೆ ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದರು.ಸರಕಾರ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ರೈತರ ಹಿತ ಕಾಪಾಡುವ ಯೋಜನೆಗಳು ಸಂಸ್ಥೆಗಳ ಮೂಲಕ ಮುನ್ನಲೆಗೆ ಬಂದರೆ ಅವುಗಳಿಗೆ ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ಮಾಡಲಿದೆ. ರೈತರು ಕೇವಲ ಬೆಳೆ ಬೆಳೆಯುವುದಕ್ಕೆ ಸೀಮಿತ ಗೊಳಿಸದೆ ತನ್ನ ಬೆಳೆಗಳ ಸಾಧಕ ಬಾಧಕಗಳ ಬಗ್ಗೆ ಹೆಚ್ಚು ಮಾಹಿತಿ ಪಡೆಯಬೇಕಿದೆ. ತೆಂಗು, ಅಡಕೆ ಬೆಳೆಯುವ ಪ್ರದೇಶಗಳಲ್ಲಿ ಕಾಳು ಮೆಣಸುಗಳನ್ನು ಬೆಳೆಯಬಹುದು. ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆಯಲ್ಲಿ ಬೆಳೆಸಲು ಎಲ್ಲಾ ಅವಕಾಶಗಳು ಸಿಗಲಿದ್ದು, ಇದರಿಂದ ಆದಾಯದ ಗಳಿಕೆ ವೃದ್ಧಿಗೊಳ್ಳಲಿದೆ ಎಂದರು.ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಂ. ತಿರುಮಲೇಶ್ ಮಾತನಾಡಿ, ರೈತರು ಒಂದಾದರೆ ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ಪ್ರಸ್ತುತ ಬೆಳೆಗಳಿಗೆ ಅದರ ಸ್ಥಿರತೆ ಮತ್ತು ಲಭ್ಯತೆ ಆಲೋಚಿಸಬೇಕಿದೆ. ದಾಳಿಂಬೆ ಬೆಳೆ ಒಮ್ಮೆಲೆ ಬೆಳೆದರೆ ಮುಂದೇನೂ ಎಂಬ ಯೋಚನೆ ಪರಿಗಣಿಸಬೇಕಿದೆ. ಮಣ್ಣಿನ ಸತ್ವದಲ್ಲಿನ ಪೂರಕ ವಾತಾವರಣಕ್ಕೆ ಅನುಗುಣವಾಗಿ ಪರ್ಯಾಯ ಬೆಳೆಗಳು ಮತ್ತು ಸಂಸ್ಕರಣೆ ಪಡಿಸುವ ಕ್ರಮಗಳಿಗೆ ಒತ್ತುಕೊಡಬೇಕಿದೆ. ರೈತರು ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಳ್ಳಬೇಕಿದೆ. ತನ್ನ ಉತ್ಪನ್ನಗಳಿಗೆ ಸೂಕ್ತ ಬೆಲೆ ಕಲ್ಪಿಸಿಕೊಳ್ಳಲು ಪ್ಯಾಕಿಂಗ್ ವ್ಯವಸ್ಥೆಯಿಂದ ಹೊರದೇಶಗಳಿಗೆ ರಫ್ತು ಮಾಡಲು ಸಹಕಾರಿಯಾಗಬೇಕಿದೆ. ಇದಕ್ಕೆ ಭವಿಷ್ಯದ ಚಿಂತನೆ ಅಳವಡಿಸಿಕೊಳ್ಳಲು ಚಿಂತಿಸಬೇಕಿದೆ ಎಂದು ಹೇಳಿದರು.ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಕೆ. ಮಂಗಳಾ ಮಾತನಾಡಿ, ತೋಟಗಾರಿಕೆ ಬೆಳೆಯಲ್ಲಿ ದಾಳಿಂಬೆ ಶ್ರೀಮಂತ ಬೆಳೆಯಾಗಿ ಮಾರ್ಪಾಡಾಗಿದೆ. ಇದಕ್ಕೆ ರೈತರ ಬದ್ದತೆ ಮುಖ್ಯ ಕಾರಣ ಎಂದರು.ಎಸ್.ಆರ್.ಪಿ.ಜಿ. ಸಂಸ್ಥೆ ನಿರ್ದೇಶಕ ಎಸ್.ಎಂ. ಮಂಜುನಾಥ್ ಮಾತನಾಡಿ, ಆರ್ಥಿಕವಾಗಿ ರೈತ ಸಬಲರಾದರೆ ದೇಶ ಪ್ರಗತಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಸಂಸ್ಥೆ ವರ್ಷ ದಿಂದ ವರ್ಷಕ್ಕೆ ಆರ್ಥಿಕವಾಗಿ ಬೆಳವಣಿಗೆಗೊಂಡು ಕಳೆದ 4 ವರ್ಷ ದಲ್ಲಿ ₹4.25 ಕೋಟಿ ಲಾಭಾಂಶಗಳಿಸಿ ಷೇರುದಾರರಿಗೆ ₹25 ಸಾವಿರ ಡಿವಿಡೆಂಟ್ ನೀಡಲಾಗುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಆರ್.ಪಿ.ಜಿ ಸಂಸ್ಥೆ ಅಧ್ಯಕ್ಷ ಎಚ್.ಆರ್.ಯೋಗೀಶ್ವರ ಮಾತನಾಡಿ, ತಾಂತ್ರಿಕವಾಗಿ ದಾಳಿಂಬೆ ಬೆಳೆಗಾರರು ಶೈಕ್ಷಣಿಕವಾಗಿ ಮುಂದುವರಿಯಬೇಕೆಂಬ ಆಶಯದಿಂದ ಸಂಸ್ಥೆ ಹುಟ್ಟು ಹಾಕಲಾಗಿದೆ. ಈಗಾಗಲೇ ಬೆಳೆಗಾರರಿಗೆ ಬೆಳೆಯಲ್ಲಿ ಯಾವುದೇ ಸಮಸ್ಯೆಗೆ ತಕ್ಷಣ ಪರಿಹಾರ ದೊರಕಿಸಬೇಕೆಂಬ ನಿಟ್ಟಿನಲ್ಲಿ ರಾಷ್ಟ್ರೀಯ ದಾಳಿಂಬೆ ಸಂಶೋಧನ ಕೇಂದ್ರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅದೇ ರೀತಿ ಉತ್ಪಾದನೆಗೂ ಗಮನಹರಿಸಲಾಗಿದ್ದು, ಜಿಯೊಟ್ಯಾಗ್ ವ್ಯವಸ್ಥೆ ಕಲ್ಪಿಸಿ ಮಾರುಕಟ್ಟೆಗೆ ಕ್ರಮವಹಿಸಲಾಗುತ್ತದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ದಾಳಿಂಬೆ ಉತ್ಪನ್ನಗಳು ಹೆಚ್ಚು ಉತ್ಕೃಷ್ಟಗೊಂಡಿರುವುದು ಬೇಡಿಕೆ ಹೆಚ್ಚಾಗಿದೆ ಎಂದರು. ವಿವಿಧ ಜಿಲ್ಲೆಗಳಲ್ಲಿ ದಾಳಿಂಬೆ ಬೆಳೆದು ಉತ್ತಮ ಆದಾಯಗಳಿಸಿದ ಬೆಳೆಗಾರರಿಗೆ ಗೌರವಿಸಲಾಯಿತು. ಹಾಸನ ಕೃಷಿ ಜಂಟಿ ನಿರ್ದೇಶಕ ಪಿ.ರಮೇಶ್‌ಕುಮಾರ್, ತಾಂತ್ರಿಕ ವಿಜ್ಞಾನಿಗಳಾದ ಡಾ.ಎನ್.ಮಂಜುನಾಥ್, ಡಾ. ಶಿಲ್ಪಾ, ಟಿ.ಎಸ್.ದಿನೇಶ್, ಎಸ್.ಆರ್.ಪಿ.ಜಿ. ಸಂಸ್ಥೆ ನಿರ್ದೇಶಕರಾದ ಜಿ.ಎಸ್. ಯತೀಶ್, ಗೋವರ್ಧನ್, ಡಿ.ಆರ್. ಸಚ್ಚಿದಾನಂದ ಸ್ವಾಮಿ, ಟಿ.ಕೆ. ಶ್ಯಾಮಲಾ, ತೋಟಗಾರಿಕೆ ಸಹಾಯಕ ನಿರ್ದೇಶಕ ಜಯದೇವಪ್ಪ, ಶ್ರೀಧರ್, ಸಂಸ್ಥೆಯ ಸಿಇಒ ಪ್ರಿಯಾ ಉಪಸ್ಥಿತರಿದ್ದರು.12 ಕೆಸಿಕೆಎಂ 1ಕಡೂರು ಪಟ್ಟಣದ ಹೊರವಲಯದ ಹೆರಿಟೇಜ್ ಕನ್ವೆನ್ಷನ್ ಹಾಲ್‌ನಲ್ಲಿ ಶುಕ್ರವಾರ ನಡೆದ ದಾಳಿಂಬೆ ತಾಂತ್ರಿಕ ಅಧಿವೇಶನವನ್ನು ಬಿ.ಎನ್. ಪ್ರಸಾದ್ ಉದ್ಘಾಟಿಸಿದರು. ತಿರುಮಲೇಶ್‌, ಮಂಗಳ, ಮಂಜುನಾಥ್‌, ಯೋಗೀಶ್ವರ ಇದ್ದರು.