ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯಲ್ಲಿ ಮಾರ್ಚ್ ತಿಂಗಳಲ್ಲಿ ನಡೆಯಲಿರುವ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯವನ್ನು ಸಕಲ ಸಿದ್ದತೆಗಳೊಂದಿಗೆ ಸಮರ್ಪಕವಾಗಿ ನಿರ್ವಹಿಸುವಂತೆ ಜಿಪಂ ಸಿಇಒ ಮೋನಾರೋತ್ ಸೂಚನೆ ನೀಡಿದರು.ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಸಂಬಂಧ ನಡೆದ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಪಿಯು ಕಾಲೇಜುಗಳ ಪ್ರಾಂಶಪಾಲರು, ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರೀಕ್ಷೆಗಳಿಗೆ ಈಗಾಗಲೇ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಪರೀಕ್ಷಾ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಪರೀಕ್ಷಾ ಸಂಬಂಧ ನೀಡಲಾಗಿರುವ ಸೂಚನೆ, ಮಾರ್ಗದರ್ಶನದ ಪ್ರಕಾರ ಕಟ್ಟುನಿಟ್ಟಾಗಿ ಪರೀಕ್ಷೆ ಕೆಲಸ ಮಾಡಬೇಕು ಎಂದರು.
ಶಾಲಾ ಕಾಲೇಜುಗಳಲ್ಲಿ ಉಳಿದಿರುವ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಶ್ರಮವಹಿಸಿ ಅಧ್ಯಯನ ಮಾಡಲು ಉತ್ತೇಜಿಸಬೇಕು. ಜಿಲ್ಲೆಗೆ ಉತ್ತಮ ಫಲಿತಾಂಶ ಹಾಗೂ ಉನ್ನತ ಸ್ಥಾನ ಏರಲು ಪೂರಕವಾಗಿರುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು. ವಿಶೇಷ ತರಗತಿಗಳ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಬೇಕು ಎಂದು ತಿಳಿಸಿದರು.ಪರೀಕ್ಷಾ ದಿನಾಂಕಗಳು ಹತ್ತಿರವಾಗುತ್ತಿರುವ ಹಿನ್ನೆಲೆ ಗ್ರಾಪಂಯಲ್ಲಿರುವ ಗ್ರಂಥಾಲಯಗಳನ್ನು ಬೆಳಗಿನ ವೇಳೆ ಬೇಗನೆ ತೆರೆಯುವ ಅವಶ್ಯವಿದ್ದಲ್ಲಿ ಸೂಕ್ತ ನಿರ್ದೇಶನ ನೀಡಲಾಗುವುದು. ಪೋಷಕರೊಂದಿಗೆ ಸಂಪರ್ಕದಲ್ಲಿದ್ದು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮಾತನಾಡಿ, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆ ಗಣನೀಯವಾಗಿ ಸುಧಾರಣೆಯಾಗಬೇಕು. ಎಲ್ಲ ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲಿಯೇ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಲು ಶಿಕ್ಷಕರು ವಿಶೇಷ ಕಾಳಜಿ ತೆಗೆದುಕೊಂಡು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಬೇಕು ಎಂದರು. ಪರೀಕ್ಷಾ ಕಾರ್ಯಗಳಿಗೆ ಈಗಾಗಲೇ ಎಲ್ಲ ಅಗತ್ಯ ತಂಡಗಳನ್ನು ನಿಯೋಜಿಸಲಾಗಿದೆ. ಪಾರದರ್ಶಕವಾಗಿ ಪರೀಕ್ಷಾ ಕಾರ್ಯ ನಿರ್ವಹಣೆಯಾಗಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ಮೂಲ ಸೌಕರ್ಯಗಳು ಇರಬೇಕು. ಯಾವುದೇ ಸಮಸ್ಯೆಗಳಿದ್ದರೆ ಕೂಡಲೇ ಗಮನಕ್ಕೆ ತರಬೇಕು ಎಂದರು.ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಪ್ರಸನ್ನ, ಶಾಲಾ ಶಿಕ್ಷಣ ಇಲಾಕೆಯ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ಪರೀಕ್ಷಾ ಸಿದ್ದತೆಗಳ ಸಂಬಂಧ ವಿವರ ನೀಡಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಕಾಶಿನಾಥ್ ಸಭೆಯಲ್ಲಿ ಉಪಸ್ಥಿತರಿದ್ದರು.