ಸಾರಾಂಶ
ಕಡೂರಿನ ತಾಲೂಕು ಪಂಚಾಯಿತಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ಎಚ್.ಡಿ. ತಮ್ಮಯ್ಯ
ಕನ್ನಡಪ್ರಭ ವಾರ್ತೆ, ಕಡೂರುವಸತಿಹೀನ ಬಡವರಿಗೆ ನಿವೇಶನ, ಜನ ಜಾನುವಾರುಗಳಿಗೆ ಕುಡಿವ ನೀರು ಸೇರಿದಂತೆ ರಾಜ್ಯ ಸರ್ಕಾರ ಜನ ಸಾಮಾನ್ಯರ ಪರವಾಗಿ ಕೈಗೊಂಡಿರುವ ಕಾರ್ಯಕ್ರಮ ಅನುಷ್ಠಾನಗೊಳಿಸಲು ಅಧಿಕಾರಿಗಳು ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಶಾಸಕ ಎಚ್ ಡಿ ತಮ್ಮಯ್ಯ ಸೂಚನೆ ನೀಡಿದರು.ಮಂಗಳವಾರ ಸಂಜೆ ಕಡೂರಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯ ಪ್ರತೀ ಗ್ರಾಮಗಳ ಖಾಸಗಿ ಜಮೀನುಗಳಲ್ಲಿ, ಅರಣ್ಯ ಜಾಗ ಹುಲ್ಲು ಬನಿ ಜಾಗಗಳಲ್ಲಿ ಬಡವರು ಕಟ್ಟಿರುವ ಮನೆಗಳನ್ನು ಸಕ್ರಮ ಮಾಡುವ ಮೂಲಕ ಕಂದಾಯ ಇಲಾಖೆಗೆ ಬರುವಂತೆ ಮಾಡಿ ಇ-ಸ್ವತ್ತು ಮಾಡಿಸಿ ಹಕ್ಕು ಪತ್ರಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಚಿಕ್ಕಮಗಳೂರು ಕ್ಷೇತ್ರದ ವ್ಯಾಪ್ತಿಯ ಸಖರಾಯಪಟ್ಟಣ ಹೋಬಳಿ ನಿಡಘಟ್ಟ, ದೇವನೂರು ಚಿಕ್ಕದೇವನೂರು ಸೇರಿದಂತೆ 15 ಗ್ರಾಮಗಳಲ್ಲಿ ನೀರಿಗೆ ತತ್ವಾರ ಇದೆ ಎಂದು ನೀರಾವರಿ ಇಲಾಖೆ ಅಧಿಕಾರಿ ರವಿಶಂಕರ್ ತಿಳಿಸಿದಾಗ ಶಾಸಕ ತಮ್ಮಯ್ಯ ತೀರ ಗಂಭೀರ ಸ್ವರೂಪ ಇರುವ ಕಡೆ ಹೊಸ ಕೊಳವೆ ಬಾವಿ ಕೊರೆಸಲು ಮುಂದಾಗಬೇಕು ನೀರಿಗೆ ಅಗತ್ಯವಿರುವ ಹಣ ಕಾಸನ್ನು ಸರ್ಕಾರದಿಂದ ಕೂಡಿಸಲು ತಾವು ಬದ್ಧ ಎಂದರು. ಅನೇಕ ವರ್ಷಗಳಿಂದ ಸರ್ಕಾರಿ ಜಾಗಗಳಲ್ಲಿ ನಿರ್ಮಿಸಿರುವ ತಮ್ಮ ಕ್ಷೇತ್ರದ ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯ 18 ಬೇಚಾರ್ ಗ್ರಾಮಗಳಲ್ಲಿ ಮನೆ ಒಡೆಯನಿಗೆ ಮನೆ ಹಕ್ಕು ನೀಡಲು ಸರ್ಕಾರ ನಿರ್ಧರಿಸಿದೆ ಎಂದಾಗ ತಹಸೀಲ್ದಾರ್ ಕವಿರಾಜ್, ಅರಣ್ಯ, ಹುಲ್ಲು ಬನ್ನಿ ಜಾಗವನ್ನು ಕಂದಾಯ ಇಲಾಖೆಗೆ ವರ್ಗಾಯಿಸಿ. ನಂತರ 94 ಸಿ ಅಡಿ ಮನೆಗಳಿಗೆ ದಾಖಲೆ ಮತ್ತು ಹಕ್ಕುಪತ್ರ ನೀಡಬಹುದು .ಇದನ್ನು ಎರಡು ಹಂತದಲ್ಲಿ ಮಾಡಲಾಗುವುದು ಎಂದರು. ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ ತಾಲೂಕಿನ 6,149 ಹೆಕ್ಟೇರ್ ಗಳಲ್ಲಿ ಈರುಳ್ಳಿ, ಆಲೂಗಡ್ಡೆ, ಟೊಮೆಟೊ ಮೆಣಸಿನಕಾಯಿ, ರಾಗಿ ನಾಶವಾಗಿದ್ದು ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಕೃಷಿ ಮತ್ತು ತೋಟಗಾರಿಕಾ ಸಹಾಯಕ ನಿರ್ದೇಶಕ ಅಶೋಕ್ ಮತ್ತು ಜಯದೇವ ಮಾಹಿತಿ ನೀಡಿದಾಗ, ರೈತರಿಗೆ ಅನ್ಯಾಯವಾಗದಂತೆ ಪರಿಹಾರ ಸಿಗುವಂತೆ ಕ್ರಮಕೈಗೊಳ್ಳಿ ಎಂದರು. ಕಡೂರು ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂಬ ಘೋಷಣೆಯಡಿ ಆಗಿರುವ ಕ್ರಮಗಳ ಬಗ್ಗೆ ಶಾಸಕರು ಅಧಿಕಾರಿ ಗಳಿಂದ ಮಾಹಿತಿ ಪಡೆದರು. ಪಶು ವೈದ್ಯಕೀಯ ಇಲಾಖೆಯ ಅಧಿಕಾರಿ ಡಾ.ಉಮೇಶ್, ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಮೇವಿನ ಕಿಟ್ಟುಗಳನ್ನು ರೈತರಿಗೆ ನೀಡಲಾಗಿದೆ. ಸಖರಾಯಪಟ್ಟಣದಲ್ಲಿ ಗೋ ಶಾಲೆ ತೆರೆಯಬೇಕಾಗಿದೆ. ರೈತರು ಕಡೂರು ಮತ್ತು ಅಜ್ಜಂಪುರ ತಾಲೂಕಿನಲ್ಲಿ ಅಮೃತ ಮಹಲ್ ಕಾವಲು, ಸರ್ಕಾರಿ ಜಮೀನುಗಳಲ್ಲಿ ಕೊಳವೆಬಾವಿ ಕೊರೆಸಿಕೊಟ್ಟಲ್ಲಿ ನಾವು ಮೇವು ಬೆಳೆದು ಕೊಡುತ್ತೇವೆ ಎನ್ನುತ್ತಿದ್ದಾರೆ ಎಂದಾಗ ಶಾಸಕರು ಈ ಬಗ್ಗೆ ಗಮನಹರಿಸಿ ಹಾಗೂ ನಮ್ಮ ಜಿಲ್ಲೆಯ ಮೇವು ಬೇರೆಡೆಗೆ ಸಾಗಿಸದಂತೆ ಅಧಿಕಾರಿಗಳು ಕ್ರಮವಹಿಸಿ ಎಂದರು. ತಹಸೀಲ್ದಾರರು ಪ್ರಕೃತಿ ವಿಕೋಪದಡಿ 19.38 ಲಕ್ಷ ರು. ಹಣವಿದ್ದು ಇದರಲ್ಲಿ ಕೊಳವೆಬಾವಿಗಳನ್ನು ಕೊರೆಸಲು ಅವಕಾಶವಿಲ್ಲ ಶಾಸಕರ ಅನುದಾನದಲ್ಲಿ ಹೊಸ ಕೊಳವೆ ಬಾವಿ ಕೊರೆಸಲು ಸಾಧ್ಯ ಎಂದಾಗ ನೀರಿಗೆ ತೊಂದರೆ ಆಗದಂತೆ ಹೆಚ್ಚಿನ ಅನುದಾನ ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದು ತಮಗೆ ಅಧಿಕಾರಿಗಳು ಮಾಹಿತಿ ನೀಡುವಂತೆ ಸೂಚಿಸಿದರು. ಮೂಕ ಪ್ರಾಣಿಗಳಿಗೆ ತೊಂದರೆಯಾಗದಂತೆ ಕುಡಿಯುವ ನೀರಿನ ತೊಟ್ಟಿಗಳು, ಕುರಿ ಮತ್ತು ಮೇಕೆಗಳಿಗೂ ಅಗತ್ಯ ಆಹಾರದ ಕುರಿತು ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು. 5 ಎಕರೆಯಲ್ಲಿ ಬೆಳೆ ಹಾನಿಗೆ ಒಳಗಾಗಿರುವ ರೈತರು ಪರಿಹಾರಕ್ಕೆ ನೋಂದಣಿ ಮಾಡಿಸಿದ್ದು, ದೊಡ್ಡ ರೈತರು ತಮ್ಮ ಬಿಪಿಎಲ್ ಕಾರ್ಡ್ ರದ್ದಾಗುವ ಭಯದಿಂದ ನೋಂದಣಿಗೆ ಮುಂದಾಗುತ್ತಿಲ್ಲ. ಸುಮಾರು 5ಸಾವಿರ ದೊಡ್ಡ ರೈತರ ನೋಂದಣಿ ಬಾಕಿ ಇದೆ ಎಂದು ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ತಿಳಿಸಿದರು. ಜನಸಾಮಾನ್ಯರ ಪರವಾಗಿ ಕೆಲಸ ಮಾಡುತ್ತಿರುವ ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸಿ ಪ್ರತಿ ಪಂಚಾಯತಿ ಮಟ್ಟ ದಲ್ಲೂ ಜನಸಂಪರ್ಕ ಸಭೆ ಮಾಡಲು ಸರ್ಕಾರ ಉದ್ದೇಶಿಸಿದೆ ಎಂದರು. ಸಭೆಯಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಸಿ.ಆರ್.ಪ್ರವೀಣ್, ಜಂಟಿ ನಿರ್ದೇಶಕರಾದ ಸುಜಾತ, ತಾಲೂಕು ಮಟ್ಟದ ಅಧಿಕಾರಿಗಳಾದ ವಿಜಯಕುಮಾರ್ ಸೇರಿದಂತೆ ಗ್ರಾಪಂ ಗಳ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು. 26 ಕೆಕೆಡಿಯು1 ಕಡೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಚಿಕ್ಕಮಗಳೂರು ಶಾಸಕ ಎಚ್ ಡಿ ತಮ್ಮಯ್ಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು