ಸಾರಾಂಶ
ಮಾ.25ರಿಂದ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು.
ಪರೀಕ್ಷಾ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ತಾಲೂಕು ಮಟ್ಟದ ಪೂರ್ವ ಸಿದ್ಧತಾ ಸಭೆ
ಕನ್ನಡಪ್ರಭ ವಾರ್ತೆ ಕುಷ್ಟಗಿಮಾ.25ರಿಂದ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಬಿಇಒ ಸುರೇಂದ್ರ ಕಾಂಬಳೆ ಹೇಳಿದರು.
ಪಟ್ಟಣದ ಗುರುಭವನದಲ್ಲಿ ನಡೆದ 2023-24ನೇ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಯ ಕಾರ್ಯಕ್ಕೆ ನಿಯೋಜನೆಗೊಂಡ ಪರೀಕ್ಷಾ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಆಯೋಜಿಸಿದ್ದ ತಾಲೂಕು ಮಟ್ಟದ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಮಾ.25ರಿಂದ ಎಸ್ಎಸ್ಎಲ್ಸಿ ಪರೀಕ್ಷಾ ಕಾರ್ಯವನ್ನು ಪಾರದರ್ಶಕ ಮತ್ತು ಪಾವಿತ್ರ್ಯತೆಯಿಂದ ನಿರ್ವಹಿಸಬೇಕಾದ ಬಹುದೊಡ್ಡ ಹೊಣೆಗಾರಿಕೆ ತಮ್ಮೆಲ್ಲರ ಮೇಲಿದೆ. ವಿದ್ಯಾರ್ಥಿಗಳ ಜೀವನದ ಬಹುಮುಖ್ಯ ಹಂತವಾದ ಎಸ್ಎಸ್ಎಲ್‌ಸಿ ಪರೀಕ್ಷೆಯನ್ನು ಸಂಬಂಧಿಸಿದ ಪರೀಕ್ಷಾ ಕೇಂದ್ರಗಳಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಲು ಸಕಲ ಸಿದ್ಧತೆ ಮಾಡಿಕೊಂಡು ಯಶಸ್ವಿಗೊಳಿಸಬೇಕು ಎಂದರು.
2023-24ನೇ ಸಾಲಿನ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಯು ನಗರದ ನಾಲ್ಕು ಮತ್ತು ಗ್ರಾಮೀಣದ 11 ಸೇರಿದಂತೆ ಒಟ್ಟು 15 ಪರೀಕ್ಷೆ ಕೇಂದ್ರಗಳಲ್ಲಿ 2646 ಗಂಡು ಮಕ್ಕಳು,2453 ಹೆಣ್ಣುಮಕ್ಕಳು 217 ಖಾಸಗಿ ಅಭ್ಯರ್ಥಿಗಳು ಸೇರಿದಂತೆ ಒಟ್ಟು 5099 ಮಕ್ಕಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಮಾ. 25ರಿಂದ ಏ. 6ರವರೆಗೂ ಪರೀಕ್ಷೆ ನಡೆಯಲಿವೆ ಎಂದರು.ಗ್ರೇಡ್ -2 ತಹಸೀಲ್ದಾರ ಮುರುಳಿಧರ ಮಾತನಾಡಿ, ನಕಲು ಮುಕ್ತ ಹಾಗೂ ಪಾರದರ್ಶಕವಾಗಿ, ಬದ್ಧತೆಯಿಂದ ಕರ್ತವ್ಯ ನಿರ್ವಹಿಸುವುದರ ಮೂಲಕ ಪರೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಡಯಟ್ ಪ್ರಭಾರಿ ಪ್ರಾಚಾರ್ಯೆ ಮೈತ್ರಾ ದೇವಿ ರೆಡ್ಡೇರ, ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶಪ್ಪ ಎಂ., ಉಪನ್ಯಾಸಕರಾದ ಕಲೀಮ್ ಶೇಕ್, ದೈಹಿಕ ಶಿಕ್ಷಣ ಪರೀವೀಕ್ಷಕಿ ಸರಸ್ವತಿ ಎಂ., 15 ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಮತ್ತು ಉಪಾಧೀಕ್ಷಕರು, ಮಾರ್ಗಾಧಿಕಾರಿಗಳು ಹಾಗೂ ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಸಿಆರ್‌ಪಿ, ಬಿಆರ್‌ಪಿ, ಇಸಿಓ ಮತ್ತು ಬಿಇಆರ್‌ಟಿ ಸಿಬ್ಬಂದಿ ಸಭೆಯಲ್ಲಿದ್ದರು.