ಸಾರಾಂಶ
ಕಾರವಾರ: ನಗರದಲ್ಲಿನ ಜಿಲ್ಲಾ ಕಾರಾಗೃಹದ ನಿವಾಸಿಗಳಿಗೆ ಸೊಳ್ಳೆ ಕಡಿತವಾಗದಂತೆ ತಡೆಯಲು ಜೈಲಿನ ಕಿಟಕಿಗಳಿಗೆ ಸೊಳ್ಳೆಗಳು ಬಾರದಂತೆ ಮೆಶ್ ಹಾಕಿಸಿ ಹಾಗೂ ಗೋಡೆಗಳಿಗೆ ಹೊಸದಾಗಿ ಬಣ್ಣ ಬಳಿಯಬೇಕು ಎಂದು ಕಾರಾಗೃಹ ಇಲಾಖೆಯ ಅಧಿಕಾರಿಗಳಿಗೆ ರಾಜ್ಯ ಮಾನವ ಹಕ್ಕು ಆಯೋಗದ ನ್ಯಾಯಾಂಗ ಸದಸ್ಯ ಎಸ್.ಕೆ. ವಂತಿಕೋಡಿ ಸೂಚಿಸಿದರು.ನಗರದ ಜಿಲ್ಲಾ ಕಾರಾಗೃಹಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾರಾಗೃಹವಾಸಿಗಳು ಜೈಲಿನಲ್ಲಿ ಸೊಳ್ಳೆಯ ಸಮಸ್ಯೆಯ ಬಗ್ಗೆ ತಿಳಿಸಿದ್ದಾರೆ. ಹೀಗಾಗಿ ಜೈಲು ಕೊಠಡಿಯ ಕಿಟಕಿಗಳಿಗೆ ಸೊಳ್ಳೆಗಳು ಬಾರದಂತೆ ಮೆಸ್ ಅಳವಡಿಸಬೇಕು ಎಂದು ಸೂಚಿಸಿದ ಅವರು, ಜೈಲಿನ ಗೋಡೆಗಳಿಗೆ ಬಣ್ಣ ಬಳಿದು ಹಲವು ವರ್ಷಗಳು ಕಳೆದಿರುವುದನ್ನು ಕಂಡು ಉತ್ತಮ ಗುಣಮಟ್ಟದ ಬಣ್ಣ ಬಳಿಯುವಂತೆ ಸೂಚಿಸಿದರು. ಕಾರಾಗೃಹದ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು. ವೈದ್ಯರಿಂದ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಬೇಕು ಎಂದರು.
ಬಳಿಕ ಕಾರಾಗೃಹದ ಅಡುಗೆ ಮನೆಗೆ ಭೇಟಿ ನೀಡಿ, ಸ್ವತಃ ಆಹಾರ ಸೇವಿಸಿ, ಯಾವುದೇ ಕಾರಣಕ್ಕೂ ಆಹಾರದ ಗುಣಮಟ್ಟದಲ್ಲಿ ಕೊರತೆ ಆಗದಂತೆ ಎಚ್ಚರಿಕೆ ವಹಿಸುವಂತೆ ಹಾಗೂ ತಾಜಾ ಮತ್ತು ಗುಣಮಟ್ಟದ ಕಾಳುಗಳು ಮತ್ತು ಕಾಯಿಪಲ್ಯೆಗಳನ್ನು ಬಳಕೆ ಮಾಡುವಂತೆ, ಕೊಠಡಿಗಳು ಮತ್ತು ಶೌಚಾಲಯಗಳಲ್ಲಿ ಪ್ರತಿನಿತ್ಯ ಸ್ವಚ್ಛತೆ ಕಾಪಾಡುವಂತೆ ನಿರ್ದೇಶನ ನೀಡಿದರು.ಕಾರಾಗೃಹವಾಸಿಗಳೊಂದಿಗೆ ಮಾತನಾಡಿ, ಜೈಲಿನಲ್ಲಿ ಏನಾದರೂ ಸಮಸ್ಯೆಗಳಿವೆಯೇ, ಊಟ ಸರಿಯಿದೆಯೇ, ಮೂಲ ಸೌಲಭ್ಯಗಳು ಸರಿಯಿವೆಯೇ, ಎಲ್ಲರನ್ನು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಿದ್ದಾರೆಯೇ, ವಿಸಿ ಮೂಲಕ ವಿಚಾರಣೆ ನಡೆಯುತ್ತಿದೆಯೇ, ವಕೀಲರ ನೇಮಕ ಆಗಿದೆಯೇ ಎಂದು ವಿಚಾರಿಸಿದರು. ಈ ಕುರಿತಂತೆ ಯಾವುದೇ ಸಮಸ್ಯೆ ಇಲ್ಲವೆಂದು ಕಾರಾಗೃಹವಾಸಿಗಳು ತಿಳಿಸಿದರು.
ಜೈಲಿನಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದರು. ಬೆಳಗಾವಿ ಕಾರಾಗೃಹದ ಸಹಾಯಕ ಅಧೀಕ್ಷಕ ಕೃಷ್ಣಮೂರ್ತಿ, ಕಾರವಾರ ಕಾರಾಗೃಹದ ಪ್ರಭಾರ ಅಧೀಕ್ಷಕ ಫಕೀರಪ್ಪ ತಮ್ಮಣ್ಣ ದಾಂಡೇನವರ್, ನಗರ ಪೊಲೀಸ್ ಠಾಣೆಯ ಪಿಐ ರಮೇಶ್ ಹೂಗಾರ್ ಇದ್ದರು. ನಂತರ ಕಾರವಾರ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.