ಸಾರಾಂಶ
ಸವಣೂರು: ತಾಲೂಕಿನ ಕಳಲಕೊಂಡ ಗ್ರಾಮದ ದಲಿತ ಕಾಲನಿಗೆ ಸೋಮವಾರ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಜೀವನಕುಮಾರ ಪಮ್ಮಾರ ಭೇಟಿ ನೀಡಿ ಗ್ರಾಪಂ ಅಧಿಕಾರಿಗಳಿಗೆ ಕೂಡಲೇ ಸ್ವಚ್ಛತೆಗೆ ತಾಕೀತು ಮಾಡಿದರು.ಗ್ರಾಪಂ ಅಧಿಕಾರಿಗಳು ಗ್ರಾಮದ ದಲಿತ ಕಾಲನಿಯ ಸ್ವಚ್ಛತೆಗೆ ಹಿಂದೇಟು ಹಾಕುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಮಾಜ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದ್ದರು.ತಾಲೂಕಿನ ಜಲ್ಲಾಪುರ ಗ್ರಾಪಂ ವ್ಯಾಪ್ತಿಯ ಕಳಲಕೊಂಡ ಗ್ರಾಮದ ದಲಿತ ಕಾಲನಿಯಲ್ಲಿ ಮೂಲ ಸೌಕರ್ಯಗಳಾದ ಗಟಾರ ಸ್ವಚ್ಛತೆ ಇಲ್ಲದ ಹಿನ್ನೆಲೆಯಲ್ಲಿ ಕೊಳಚೆ ನೀರು ನಿಲ್ಲುತ್ತಿದೆ. ವಿಷಜಂತುಗಳು ಕೊಳಚೆಯಲ್ಲಿ ವಾಸಿಸುತ್ತಿವೆ. ಸ್ಥಳೀಯರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗಿದೆ. ಸ್ವಚ್ಛತೆ ಕಾರ್ಯ ಕೈಗೊಳ್ಳಲು ಗ್ರಾಪಂಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿರಲಿಲ್ಲ. ಅನಿವಾರ್ಯವಾಗಿ ಸಮಾಜ ಕಲ್ಯಾಣ ಇಲಾಖೆಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ಸ್ಥಳೀಯ ನಿವಾಸಿ ಗಂಗಪ್ಪ ಹರಿಜನ ತಿಳಿಸಿದರು.ಪಿಡಿಒ ವೀರೇಶ ಆವಾರಿ ಅವರನ್ನು ಸ್ಥಳಕ್ಕೆ ಕರೆಸಿದ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಜೀವನಕುಮಾರ ಪಮ್ಮಾರ ಅವರು ಕೂಡಲೇ ಸ್ಥಳೀಯ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸೂಚಿಸಿದರು.
ಸಂಭ್ರಮದ ನಾಗರ ಪಂಚಮಿ ಆಚರಣೆಸವಣೂರು: ತಾಲೂಕಿನಾದ್ಯಂತ ಸೋಮವಾರ ಮಹಿಳೆಯರು ಮತ್ತು ಮಕ್ಕಳು ನಾಗದೇವರ ಮೂರ್ತಿಗೆ ಹಾಲು ಎರೆಯುವ ಮೂಲಕ ನಾಗರ ಪಂಚಮಿ ಹಬ್ಬವನ್ನು ಸಡಗರದಿಂದ ಆಚರಿಸಿದರು.
ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಾಗದೇವರಿಗೆ ಹಾಲು ಎರೆಯುವುದರ ಮೂಲಕ ಪೂಜೆ ಸಲ್ಲಿಸಿ, ಜೋಕಾಲಿ ಜೀಕಿ ಸಂಭ್ರಮಿಸಿದರು.ನಾಗರ ಪಂಚಮಿ ಎಂದಾಕ್ಷಣ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಡಗರ, ಸಂಭ್ರಮ ಮನೆಮಾಡಿದ್ದು, ಮನೆಗಳಲ್ಲಿ ಮಹಿಳೆಯರು ಬೆಳಗ್ಗೆಯಿಂದ ನಾಗಪ್ಪನ ನೈವೇದ್ಯಗಾಗಿ ವಿವಿಧ ಬಗೆಯ ಲಾಡು, ಸಿಹಿ ಪದಾರ್ಥಗಳನ್ನು ಮಾಡಿದ್ದರು. ಮನೆಗಳಲ್ಲಿ ಮಕ್ಕಳ ಜೋಕಾಲಿ ಆಟ. ಅಷ್ಟೇ ಅಲ್ಲದೆ, ಓಣಿಯಲ್ಲಿರುವ ಮರಗಳಿಗೆ ಜೋಕಾಲಿಯನ್ನು ಕಟ್ಟಿ ಮಹಿಳೆಯರು ಸಹ ಜೋಕಾಲಿ ಆಡಿ ಹರ್ಷವನ್ನು ವ್ಯಕ್ತಪಡಿಸಿದರು.