ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಗ್ರಾಮಗಳಲ್ಲಿ ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿ, ಜನರಿಂದ ಯಾವುದೇ ದೂರು ಬರದಂತೆ ಕಾರ್ಯ ನಿರ್ವಹಿಸಲು ಅಧಿಕಾರಿ ವರ್ಗಕ್ಕೆ ದಕ್ಷಿಣದ ನೂತನ ಶಾಸಕ ಸಮರ್ಥ ಎಂ.ಶಾಮನೂರು ಸೂಚಿಸಿದರು.

ನಗರದ ಪಶುಪಾಲನಾ ಮತ್ತು ಪಶುವೈದ್ಯಕೀಯ ಕಚೇರಿ ಅಮೃತ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಕುಡಿಯುವ ನೀರು ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದಕ್ಷಿಣ ಕ್ಷೇತ್ರದ ಹದಡಿ, ಮುದಹದಡಿ, ಕೈದಾಳೆ, ಕುಕ್ಕವಾಡ, ಕುರ್ಕಿ, ಬೆಳವನೂರು, ಶಿರಮಗೊಂಡನಹಳ್ಳಿ, ಕನಗೊಂಡನಹಳ್ಳಿ ಗ್ರಾಪಂಗಳಿಗೊಳಪಡುವ ಗ್ರಾಮಗಳಲ್ಲಿ ಕಾಮಗಾರಿ, ನೀರು ಸರಬರಾಜು, ರಸ್ತೆ, ಚರಂಡಿ, ಸ್ಮಶಾನ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವ ಕೆಲಸವಾಗಲಿ ಎಂದರು.

ಗ್ರಾಮೀಣ ಭಾಗಗಳಲ್ಲಿ ನೀರಿನ ಸಮಸ್ಯೆ ಇದ್ದು, ಜಲ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ಪೂರ್ಣಗೊಂಡಿದ್ದರೂ ಮನೆಗಳ ಮುಂದೆ ನಳಗಳಿಗೆ ನೀರು ಬರುತ್ತಿಲ್ಲವೆಂಬ ದೂರು ಇವೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ, ಹೊಸ ಬೋರ್‌ವೆಲ್‌ ಕೊರೆಸಲು, ನೀರಿನ ಟ್ಯಾಂಕ್‌ಗಳ ವ್ಯವಸ್ಥೆ ಮಾಡಿ. ಕೈದಾಳ್ ಕ್ಯಾಂಪ್‌ನಲ್ಲಿ ಸ್ಮಶಾನ ಭೂಮಿ ಕೊರತೆಯ ಬಗ್ಗೆ ಸ್ಥಳ ಪರಿಶೀಲಿಸಿ, ಜಾಗ ಗುರುತಿಸುವಂತೆ ತಹಸೀಲ್ದಾರ್‌ ಅಶ್ವಥ್‌ಗೆ ಸೂಚನೆ ನೀಡಿದರು.

ನಗರ ಹಾಗೂ ಗ್ರಾಮೀಣ ಭಾಗದ ವಾರ್ಡ್‌ಗಳಲ್ಲಿ ಚರಂಡಿ ವ್ಯವಸ್ಥೆ, ಬೀದಿ ದೀಪಗಳ ಸಮಸ್ಯೆ ಪರಿಹರಿಸಿ, ಖುದ್ದಾಗಿ ಕೆಲ ವಾರ್ಡ್‌ಗಳಿಗೆ ಭೇಟಿ ನೀಡಿ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಿದ್ದೇವೆ. ಇನ್ನು ಮುಂದೆ ಯಾವುದೇ ಭಾಗದಿಂದ ದೂರುಗಳು ಕೇಳಿ ಬರದಂತೆ ಕೆಲಸ ಮಾಡಿ. ಕುಡಿಯುವ ನೀರು, ಸ್ವಚ್ಛತೆ ಅತೀ ಮುಖ್ಯವಾಗಿವೆ. ಅದೇ ರೀತಿ ಬೀದಿ ದೀಪ, ಮೂಲ ಸೌಕರ್ಯ ಕಲ್ಪಿಸಲು ಒತ್ತು ನೀಡುವಂತೆ ತಿಳಿಸಿದರು.


ತಾಪಂ ಕಾರ್ಯ ನಿರ್ವಾಹಣಾಧಿಕಾರಿ ರಾಮ ಭೋವಿ ಮಾತನಾಡಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಸ್ಥಳೀಯವಾಗಿ ಮಹಿಳೆಯರೆ ನಡೆಸುವ ಅಕ್ಕ ಕೆಫೆ, ಎಣ್ಣೆ ಗಾಣ, ಹಪ್ಪಳ-ಸಂಡಿಗೆ ತಯಾರಿಕೆ ಮತ್ತು ಪಶು ಸಂಗೋಪನೆಯಂತಹ ಸ್ವಯಂ ಉದ್ಯೋಗಗಳಿಗೆ ತರಬೇತಿ ಹಾಗೂ ಮಾರುಕಟ್ಟೆ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆ(ಬಸವ, ಅಂಬೇಡ್ಕರ್, ದೇವರಾಜ ಅರಸು ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆ)ಗಳಡಿ ಅರ್ಹ ಫಲಾನುಭವಿಗಳನ್ನು ಗ್ರಾಮ ಸಭೆಗಳ ಮೂಲಕ ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತಿದೆ. ದಕ್ಷಿಣ ಕ್ಷೇತ್ರದಲ್ಲಿ ಸುಮಾರು 1000 ಮನೆ ಮಂಜೂರು ಮಾಡಿದ್ದು, ಈಗಾಗಲೇ ವಿವಿಧ ಹಂತಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ವಸತಿ ಯೋಜನೆಯಡಿ ಹಣವು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ ಎಂದರು.

ಕಾಮಗಾರಿಯ ಹಂತಗಳನ್ನು ಆ್ಯಪ್ ಮೂಲಕ ಜಿಯೋ-ಟ್ಯಾಗ್ ಮಾಡಲಾಗುತ್ತಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಉದ್ಯೋಗ ನೀಡಲಾಗುತ್ತಿದೆ. ಜುಲೈ 1ರಿಂದ ಪ್ರಾರಂಭವಾಗಲಿರುವ ಹೊಸ ಅಭಿಯಾನದ ಮೂಲಕ ಹೆಚ್ಚಿನ ಜನರಿಗೆ ಕೆಲಸ ನೀಡಲು ಯೋಜಿಸಲಾಗಿದೆ ಎಂದು ಇಒ ರಾಮ ಭೋವಿ ಶಾಸಕರ ಗಮನಕ್ಕೆ ತಂದರು.

ತಹಸೀಲ್ದಾರ್‌ ಅಶ್ವಥ್‌ ಮಾತನಾಡಿ, ಕಚೇರಿಗಳಲ್ಲಿ ಸಾರ್ವಜನಿಕರಿಗೆ ವಿಧವಾ ವೇತನ, ಆಹಾರ ಸಂರಕ್ಷಣೆ, ಕಂದಾಯ ಗ್ರಾಮ, ವಿಪತ್ತು ನಿರ್ವಹಣೆ, ಭೂ ಮಂಜೂರಾತಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ, ಮುಜರಾಯಿ ದೇವಸ್ಥಾನಗಳ ನಿರ್ವಹಣೆ, ಹೊಸ ಕಂದಾಯ ಗ್ರಾಮಗಳನ್ನು ಗುರುತಿಸುವುದು ಸೇರಿದಂತೆ 74 ಸೌಲಭ್ಯ ವಿತರಿಸಲಾಗುತ್ತಿದೆ. ಈವರೆಗೂ 53000 ಪುಟಗಳ ಡಿಜಿಟಲ್ ಮಾದರಿ ದಾಖಲೆ ಸಾರ್ವಜನಿಕರು ಪಡೆದಿರುತ್ತಾರೆ ಎಂದು ವಿವರಿಸಿದರು.

ಜಿಪಂ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್‌, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಇದ್ದರು.