ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಯಾವುದೇ ಲೋಪಗಳಿಲ್ಲದಂತೆ ಅಚ್ಚುಕಟ್ಟಾಗಿ ಸಂಭ್ರಮ, ಸಡಗರದಿಂದ ಆಚರಿಸಲು ಅಗತ್ಯ ಸಿದ್ಧತೆಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸುರಕ್ಷತೆಗೆ ಆದ್ಯತೆ ನೀಡಬೇಕು, ಅಲಂಕಾರಕ್ಕೆ ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ ಎಂದು ನಿರ್ದೇಶನ ನೀಡಿದರಲ್ಲದೆ, ಪ್ಲಾಸ್ಟಿಕ್ ಬಾವುಟ ಮಾರಾಟವಾಗದಂತೆ ನಿಗಾವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಆ.೧೫ ರಂದು ಬೆಳಗ್ಗೆ ೮ ಗಂಟೆಯೊಳಗೆ ತಮ್ಮ ತಮ್ಮ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ, ಅಂದು ಬೆಳಗ್ಗೆ ೯ ಗಂಟೆಗೆ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಜರುಗುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸೂಚಿಸಿದರು.ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರದೊಂದಿಗೆ ಸಂವಿಧಾನ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡುವಂತೆ ಸೂಚಿಸಿದರಲ್ಲದೆ, ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ಆ.೧೪ ಮತ್ತು ೧೫ ರಂದು ತಪ್ಪದೆ ದೀಪಾಲಂಕಾರ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಪ್ರತಿಯೊಂದು ಶಾಲಾ ಮಕ್ಕಳಿಗೆ ಸ್ವಾತಂತ್ರ್ಯ ಚಳವಳಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಚರ್ಚಾ ಸ್ಪರ್ಧೆ ಏರ್ಪಡಿಸುವಂತೆ ಸೂಚಿಸಿದರಲ್ಲದೆ, ಶಾಲಾ ಮಕ್ಕಳಿಗೆ ಅಂದು ಕಾರ್ಯಕ್ರಮದಲ್ಲಿ ವಿತರಿಸುವ ಸಿಹಿ ಪದಾರ್ಥಗಳನ್ನು ಸೇವನೆ ಮಾಡಿದ ನಂತರ ಕವರ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡದಂತೆ ಶಾಲಾ ಹಂತದಲ್ಲಿಯೇ ಮುಂಚಿತವಾಗಿಯೇ ತಿಳಿಸುವ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.ಸಾಂಸ್ಕೃತಿಕ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿ ಬರಲು ಕ್ರಮವಹಿಸುವುದರ ಜೊತೆಗೆ ಮಕ್ಕಳಿಗೆ ಸ್ಥಳೀಯ ಜಾನಪದ ಕಲೆಯ ಬಗ್ಗೆಯೂ ಕೂಡಾ ಪರಿಚಯವಿರುವಂತೆ ಕಾರ್ಯಕ್ರಮ ಆಯೋಜಿಸಿ ಎಂದು ತಿಳಿಸಿದರು. ಆಹಾರದ ಗುಣಮಟ್ಟ ಪರಿಶೀಲಿಸುವಂತೆ, ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ ಕಾಪಾಡಲು ಹೆಚ್ಚಿನ ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಮೂರು ಮುಖ್ಯ ವೃತ್ತಗಳಿಗೆ ದೀಪಾಲಂಕಾರ ವ್ಯವಸ್ಥೆ ಮಾಡಲು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ನಿರ್ದೇಶನ ನೀಡಿದರಲ್ಲದೆ, ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ಪ್ರಮಾಣಪತ್ರ ನೀಡುವಂತೆ ಸೂಚಿಸಿದರು.ಪರೇಡ್ ಕಾರ್ಯಕ್ರಮ ಆಕರ್ಷಕ ಹಾಗೂ ಅಚ್ಚುಕಟ್ಟಾಗಿ ಮೂಡಿಬರಲು ತಂಡಗಳು ತಾಲೀಮು ನಡೆಸಲು ಸೂಚಿಸಿದರಲ್ಲದೆ, ಉಪ ಸಮಿತಿಗಳು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುವಂತೆ ನಿರ್ದೇಶನ ನೀಡಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಂ ಶಿವಣ್ಣ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಗಿರೀಶ್, ಮಹಾನಗರ ಪಾಲಿಕೆಯ ಆಯುಕ್ತರಾದ ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ಮಾರುತಿ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.--------------