ಕಾಲಮಿತಿಯೊಳಗೆ ಗುಣಮಟ್ಟದ ಕಾಮಗಾರಿಗೆ ಶಾಸಕ ಡಾ. ಲಮಾಣಿ ಸೂಚನೆ

| Published : Jul 02 2025, 12:20 AM IST

ಕಾಲಮಿತಿಯೊಳಗೆ ಗುಣಮಟ್ಟದ ಕಾಮಗಾರಿಗೆ ಶಾಸಕ ಡಾ. ಲಮಾಣಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲೇ ಪೂರ್ಣಗೊಳಿಸುವ ಮೂಲಕ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಗುತ್ತಿಗೆದಾರರಿಗೆ ಕರೆ ನೀಡಿದರು.

ಶಿರಹಟ್ಟಿ: ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲೇ ಪೂರ್ಣಗೊಳಿಸುವ ಮೂಲಕ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಗುತ್ತಿಗೆದಾರರಿಗೆ ಕರೆ ನೀಡಿದರು. ಶಿರಹಟ್ಟಿ ತಾಲೂಕಿನ ಹೊಳಲಾಪುರ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪೆವರ್ಸ್ ಅಳವಡಿಸುವ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.

ನಗರ ಪ್ರದೇಶಗಳಿಂಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುತ್ತಿವೆ. ನಿತ್ಯ ನೂರಾರು ಜನ ಮಹಿಳೆಯರು ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಇಂತಹ ದೇವಸ್ಥಾನದ ಆವರಣದಲ್ಲಿ ಕಳಪೆ ಕಾಮಗಾರಿ ನಡೆದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ಪ್ರತಿಯೊಬ್ಬರೂ ಕೂಡ ದೇವರ ಸ್ಮರಣೆ ಮಾಡುವ ಮೂಲಕ ತಮ್ಮ ದಿನಚರಿಯನ್ನು ಆರಂಭಿಸಬೇಕು. ಆಗ ಮಾತ್ರ ಎಲ್ಲರಿಗೂ ಒಳಿತು ಆಗಲಿದೆ. ಕಾಣದ ಶಕ್ತಿ ಒಂದು ನಮ್ಮನ್ನು ಕಾಪಾಡುತ್ತದೆ ಎಂಬ ನಂಬಿಕೆಯಿಂದ ದೇವರ ಪೂಜೆ ಮಾಡುತ್ತೇವೆ. ಅದೇ ರೀತಿ ಗ್ರಾಮದಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯ ನಡೆಯುತ್ತಿರುವುದರಿಂದ ಗ್ರಾಮದಲ್ಲಿ ಶಾಂತಿ ವಾತಾವರಣ ನಿರ್ಮಾಣವಾಗುತ್ತದೆ ಎಂದರು. ಗ್ರಾಮೀಣ ಪ್ರದೇಶ ಸೇರಿದಂತೆ ಸಮಗ್ರ ಕ್ಷೇತ್ರದ ಅಭಿವೃದ್ಧಿಗೆ ಬದ್ಧನಾಗಿದ್ದು, ಮುಂದಿನ ದಿನಗಳಲ್ಲಿ ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಮೂಲಕ ಮತದಾರರ ಋಣ ತೀರಿಸುವ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿಯೇ ಶಿರಹಟ್ಟಿ ಮೀಸಲು ಮತಕ್ಷೇತ್ರ ಅತ್ಯಂತ ಹಿಂದುಳಿ ಮಕ್ಷೇತ್ರವಾಗಿದ್ದು, ಈ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ತಾರತಮ್ಯ ಮಾಡದೇ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.ರಾಜಕೀಯ ಅಥವಾ ಅಧಿಕಾರ ಶಾಶ್ವತವಲ್ಲ. ಅಧಿಕಾರದಲ್ಲಿದ್ದಾಗ ನಾವು ಮಾಡಿದ ಕಾರ್ಯಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಗುತ್ತಿಗೆದಾರರು ಕೈಗೆತ್ತಿಕೊಳ್ಳುತ್ತಿರುವ ಮೂಲಭೂತ ಸೌಕರ್ಯಗಳ ಕಾಮಗಾರಿಯ ಗುಣಮಟ್ಟ ಉತ್ಕೃಷ್ಟವಾಗಿರುವಂತೆ ಊರಿನ ಪ್ರಮುಖರು ಗಮನಹರಿಸಬೇಕು ಎಂದು ಹೇಳಿದರು. ಗ್ರಾಮಕ್ಕೆ ಅಗತ್ಯವಾದ ಎಲ್ಲ ಮೂಲಭೂತ ಸೌಕರ್ಯಗಳ ಈಡೇರಿಕೆಗೆ ನಾನು ಸದಾ ಬದ್ಧನಾಗಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಹಾಗೂ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಹೇಳಿದರು. ಮುಖ್ಯವಾಗಿ ಗುಣಮಟ್ಟದ ಕೆಲಸ ಮಾಡಿಸುವುದಾಗಿ ಸ್ಪಷ್ಟಪಡಿಸಿದರು. ತಾಲೂಕಿನ ಜನತೆ ನಿರೀಕ್ಷಿಸಿದ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಈ ಹಿಂದೆ ಒಂದೇ ಕಾಮಗಾರಿಗೆ ಎರಡ್ಮೂರು ಯೋಜನೆಯಲ್ಲಿ ಅನುದಾನ ನೀಡಿದರೂ ಕೆಲವೇ ತಿಂಗಳಲ್ಲಿ ಕಾಮಗಾರಿ ತನ್ನ ಗುಣಮಟ್ಟ ಕಳೆದುಕೊಂಡು ಹಾಳಾದ ಉದಾಹರಣೆಗಳಿವೆ. ಇಂತಹ ಪದ್ಧತಿಯನ್ನು ಅಧಿಕಾರಿಗಳು, ಗುತ್ತಿಗೆದಾರರು ಕೈಬಿಡಬೇಕು. ಕಾಮಗಾರಿ ಕ್ರಿಯಾ ಯೋಜನೆ ಅಂದಾಜು ಪಟ್ಟಿ ಪ್ರಕಾರ ಕೆಲಸ ನಿರ್ವಹಿಸಬೇಕು. ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು, ಕಾಮಗಾರಿ ಗುಣಮಟ್ಟ ಖಾತ್ರಿಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.ದೇಶದ ಅಭಿವೃದ್ಧಿ ಎಂದರೆ ನಗರಗಳ ಬೆಳವಣಿಗೆಯಲ್ಲ. ಬದಲಾಗಿ ಗ್ರಾಮಾಭಿವೃದ್ಧಿಯಾಗಬೇಕು. ತಾಲೂಕಿನಲ್ಲಿ ಬಹಳಷ್ಟು ರಸ್ತೆಗಳು ಹಾಳಾಗಿವೆ. ಅಲ್ಲಲ್ಲಿ ಲಭ್ಯವಿರುವ ಅನುದಾನ ಬಳಕೆ ಮಾಡಿಕೊಂಡು ರಸ್ತೆಗಳ ಸುಧಾರಣೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಜನಸಾಮಾನ್ಯರು ರಸ್ತೆ, ಕುಡಿಯುವ ನೀರು, ಶೌಚಾಲಯ, ಮೂಲ ಸೌಕರ್ಯಗಳನ್ನು ಕೇಳುತ್ತಾರೆ. ಸರ್ಕಾರದಿಂದ ಬಂದ ಅನುದಾನ ಬಳಸಿಕೊಂಡು ಆದ್ಯತೆಯ ಮೇರೆಗೆ ಎಲ್ಲ ಸೌಲಭ್ಯ ಕಲ್ಪಿಸಿಕೊಡುವ ಭರವಸೆ ನಿಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಬಿ.ಡಿ. ಪಲ್ಲೇದ, ಬಸವರಾಜ ನಾಯ್ಕರ, ಗುರು ನಾಯ್ಕರ, ಆರ್.ಡಿ. ಕೆಂಚಕ್ಕನವರ, ರಮೇಶ ಡೊಂಕಬಳ್ಳಿ, ಬಸವರಾಜ ಹಾದಿಮನಿ, ನಿಂಗಪ್ಪ ಬೂದಿಹಾಳ, ಈಶ್ವರ ಗುಂಜಳ, ನೀಲಪ್ಪ ಕರೆಯಣ್ಣವರ, ನೀಲನಗೌಡ ಪಾಟೀಲ, ವಿನಾಯಕ ತೋಟರ, ರಮೇಶ ಮಾಗಡಿ, ಮಲ್ಲಿಕಾರ್ಜುನ ಕೋಡಿ ಹಾಗೂ ಊರಿನ ಗುರುಹಿರಿಯರು ಮುಖಂಡರು ಉಪಸ್ಥಿತರಿದ್ದರು.