ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರತಿಕ್ರಿಯಿಸಿ, ಬಿರುಕು ಬಿಟ್ಟ ರಸ್ತೆಯನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗುತ್ತಿಗೆದಾರರಿಗೆ ತಿಳಿಸಿದ್ದು, ಈ ಕುರಿತು ಗುತ್ತಿಗೆದಾರರು ಒಪ್ಪಿಗೆ ನೀಡಿದ್ದು, ಮಳೆಗಾಲದ ನಂತರ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಗೋಕರ್ಣ: ಬಿರುಕು ಬಿಟ್ಟು ವಾಹನಗಳ ಸಂಚಾರಕ್ಕೆ ತೊಡಕಾಗಿದ್ದ ಇಲ್ಲಿನ ರಾಜ್ಯ ಹೆದ್ದಾರಿಯ ಭದ್ರಕಾಳಿ ಕಾಲೇಜಿನ ಎದುರಿನಿಂದ ಓಂ ಬೀಚ್ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಸಿಮೆಂಟ್ ರಸ್ತೆಯನ್ನು ದುರಸ್ತಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿರುವುದಾಗಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ತಿಳಿಸಿದ್ದಾರೆ.

ರಸ್ತೆ ಸಮಸ್ಯೆ ಕುರಿತು ಆ. ೩೧ರಂದು ಕನ್ನಡಪ್ರಭ ಸಚಿತ್ರ ವರದಿ ಪ್ರಕಟಿಸಿತ್ತು. ವರದಿಗೆ ಮುಖ್ಯಮಂತ್ರಿಗಳ ಕಾರ್ಯಾಲಯ ಸ್ಪಂದಿಸಿದ್ದು, ಆದ್ಯತೆಯ ಮೇರೆಗೆ ನಿಯಮಾನುಸಾರವಾಗಿ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ. ವೈಷ್ಣವಿ ಅವರು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಪತ್ರ ಬರೆದು ಸೂಚಿಸಿದ್ದರು.

ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರತಿಕ್ರಿಯಿಸಿ, ಬಿರುಕು ಬಿಟ್ಟ ರಸ್ತೆಯನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗುತ್ತಿಗೆದಾರರಿಗೆ ತಿಳಿಸಿದ್ದು, ಈ ಕುರಿತು ಗುತ್ತಿಗೆದಾರರು ಒಪ್ಪಿಗೆ ನೀಡಿದ್ದು, ಮಳೆಗಾಲದ ನಂತರ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಮಳೆಗಾಲದ ನಂತರ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಕಾಮಗಾರಿಯ ಗುತ್ತಿಗೆ ನಿರ್ವಹಣಾ ಅವಧಿಯಲ್ಲಿದ್ದು, ಅಂತಿಮ ಬಿಲ್ಲನ್ನು ಇನ್ನೂ ಪಾವತಿಸಿಲ್ಲ ಎಂದೂ ಸಹ ತಿಳಿಸಿದ್ದಾರೆ.

ಹದಗೆಟ್ಟಿದ್ದ ರಸ್ತೆ: ಇಲ್ಲಿನ ರಾಜ್ಯ ಹೆದ್ದಾರಿಯ ಭದ್ರಕಾಳಿ ಕಾಲೇಜಿನ ಎದುರಿನಿಂದ ಓಂ ಬೀಚ್ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಸಿಮೆಂಟ್ ರಸ್ತೆ ಕೆಲವು ವರ್ಷಗಳ ಹಿಂದೆ ₹1 ಕೋಟಿ ವೆಚ್ಚದಲ್ಲಿ 1 ಕಿಮೀ ರಸ್ತೆ ನಿರ್ಮಿಸಲಾಗಿತ್ತು. ರಸ್ತೆಬದಿ ಚರಂಡಿಯನ್ನು ಸರಿಯಾಗಿ ನಿರ್ಮಿಸದೇ ನೀರು ಸರಿಯಾಗಿ ಹರಿದು ಹೋಗದೇ ರಸ್ತೆ ಬಿರುಕು ಬಿಟ್ಟು ಸಂಚಾರಕ್ಕೆ ಅಯೋಗ್ಯವಾಗಿತ್ತು. ಆದರೂ ಈ ಅಪಾಯಕಾರಿ ರಸ್ತೆಯಲ್ಲೇ ವಾಹನಗಳು ಸಂಚರಿಸುತ್ತಿದ್ದವು. ಗೋಕರ್ಣ ಪ್ರವಾಸಿ ತಾಣವಾಗಿರುವುದರಿಂದ ನಿತ್ಯ ನೂರಾರು ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಇದೀಗ ರಸ್ತೆ ದುರಸ್ತಿಗೆ ಆದೇಶಿರುವುದು ಸಾರ್ವಜನಿಕರಲ್ಲಿ ಹರ್ಷ ಮೂಡಿದೆ. ವರದಿ ಪ್ರಕಟಿಸಿದ್ದ ಕನ್ನಡಪ್ರಭ

ಆ. 31ರಂದು ಓಂ ಬೀಚ್ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಸಿಮೆಂಟ್ ರಸ್ತೆ ಮತ್ತೆ ಬಿರುಕು ಎಂಬ ಶೀರ್ಷಿಕೆಯಡಿ ಕನ್ನಡಪ್ರಭ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿತ್ತು. ಇದೀಗ ರಸ್ತೆ ದುರಸ್ತಿಗೆ ಸೂಚಿಸಿರುವುದು ಸಾರ್ವಜನಿಕರಲ್ಲಿ ಸಮಾಧಾನ ತಂದಿದ್ದು, ವರದಿ ಪ್ರಕಟಿಸಿದ ಕನ್ನಡಪ್ರಭ ಪತ್ರಿಕೆಯನ್ನು ಅಭಿನಂದಿಸಿದ್ದಾರೆ.