ಶಿರಹಟ್ಟಿ: ೨೦೨೭ರ ಜನಗಣತಿ ಕಾರ್ಯವನ್ನು ತಾಲೂಕಿನಲ್ಲಿ ಪರಿಣಾಮಕಾರಿಯಾಗಿ ನೆರವೇರಿಸಲು ಅಧಿಕಾರಿಗಳು, ಗಣತಿದಾರರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಮನವಿ ಮಾಡಿದರು.ಪಟ್ಟಣದ ಸಿಸಿಎನ್ ಆಂಗ್ಲ ಮಾಧ್ಯಮ ಶಾಲೆ ಸಭಾಂಗಣದಲ್ಲಿ ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ ವತಿಯಿಂದ ನಡೆದ ರಾಷ್ಟ್ರೀಯ ಜನಗಣತಿ ೨೦೨೭ರ ಗಣತಿದಾರರು ಮತ್ತು ಮೇಲ್ವಿಚಾರಕರ ಮೂರು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನಗಣತಿ ಕಾರ್ಯ ಕಾನೂನುಬದ್ಧ ಕೆಲಸ. ಇದನ್ನು ಶಿಕ್ಷಕರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಿರಿ ಎಂಬ ವಿಶ್ವಾಸವಿದೆ ಎಂದರು.ಕೈಪಿಡಿಯಲ್ಲಿರುವ ಸೂಚನೆಗಳನ್ನು ಮೊದಲು ಸಂಪೂರ್ಣವಾಗಿ ಓದಿ, ಅರ್ಥ ಮಾಡಿಕೊಂಡು ಕಾರ್ಯನಿರ್ವಹಿಸಬೇಕು. ಈಗಿನ ಜನಗಣತಿ ಸಂಪೂರ್ಣ ಡಿಜಿಟಲ್ ವಿಧಾನದಲ್ಲಿ ನಡೆಯುತ್ತಿದ್ದು, ಸರಳ ಹಾಗೂ ಸುರಕ್ಷಿತವಾಗಿದೆ. ಒಟ್ಟು ೩೩ ಪ್ರಮುಖ ಪ್ರಶ್ನೆಗಳಿದ್ದು, ಪ್ರತಿಯೊಂದನ್ನು ಗಮನವಿಟ್ಟು ಸರಿಯಾಗಿ ಭರ್ತಿ ಮಾಡಬೇಕು. ವಿಶೇಷವಾಗಿ ಮನೆಗಳ ಮ್ಯಾಪ್ ಗುರುತಿಸುವಿಕೆ ಮತ್ತು ಸ್ಥಳದ ವಿವರಗಳನ್ನು ದಾಖಲಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದರು.ದೇಶದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸುವುದಕ್ಕಾಗಿ ಪ್ರತಿ ೧೦ ವರ್ಷಗಳಿಗೆ ಒಮ್ಮೆ ಜನಗಣತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತವೆ. ಆದ್ದರಿಂದ ಜನಗಣತಿಯಲ್ಲಿ ಭಾಗವಹಿಸುವ ಗಣತಿದಾರರು ನಿಖರವಾದ ಅಂಶಗಳನ್ನು ದಾಖಲಿಸುವ ಮೂಲಕ ಜನಗಣತಿಯನ್ನು ಯಶಸ್ವಿಗೊಳಿಸುವಂತೆ ಕೋರಿದರು. ಗ್ರಾಮೀಣ ಭಾಗಕ್ಕೆ ನನ್ನನ್ನು ಹಾಗೂ ಶಿರಹಟ್ಟಿ ಪಟ್ಟಣಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳನ್ನು ಚಾರ್ಜ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದರು. ಡಿಜಿಟಲ್ ಮೂಲಕ ಜನಗಣತಿ ನಡೆಯಲಿದೆ. ನೀವು ಲಾಗಿನ್ ಆದ ತಕ್ಷಣ ಜನಗಣತಿ ಕಾರ್ಯ ಮಾಡಬೇಕಾದ ಬ್ಲಾಕ್ ಮಾಹಿತಿ ಲಭ್ಯವಾಗಲಿದೆ. ನಿಮ್ಮ ಬ್ಲಾಕ್ ನಲ್ಲಿ ಒಂದು ಮನೆಯ ಜನಗಣತಿ ಮಾಹಿತಿ ಬಿಟ್ಟು ಹೋಗಬಾರದು ಮತ್ತು ಒವರ್‌ಲ್ಯಾಪ್ ಸಹ ಆಗಬಾರದು. ಮೊದಲು ಬ್ಲಾಕ್ ದೃಢಪಡಿಸಿಕೊಂಡು ಮೇಲ್ವಿಚಾರಕರ ನೆರವು ಪಡೆಯಿರಿ ಎಂದು ಸಲಹೆ ನೀಡಿದರು.ಪ್ರತಿ ೧೦ ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ೨೦೨೧ರಲ್ಲಿ ಕೋವಿಡ್‌ನಿಂದ ಜನಗಣತಿ ಸಾಧ್ಯವಾಗಿರಲಿಲ್ಲ. ಅದು ಇದೀಗ ೨೦೨೬ರ ಏಪ್ರಿಲ್‌ನಲ್ಲಿ ನಡೆಯುತ್ತಿದೆ. ೧೮೭೨ರಲ್ಲಿ ಆರಂಭವಾದ ಜನಗಣತಿ ಈಗ ಅದು ೧೬ನೇ ಜನಗಣತಿಯಾಗಿದ್ದು, ಸ್ವಾತಂತ್ರ‍್ಯ ನಂತರದ ೮ನೇ ರಾಷ್ಟ್ರೀಯ ಜನಗಣತಿಯಾಗಿ ಬಹಳ ಪ್ರಾಮುಖ್ಯತೆ ಪಡೆದಿದೆ. ಜನಗಣತಿ ಅಂಕಿ- ಅಂಶಗಳ ಆಧಾರದ ಮೇಲೆ ಸರ್ಕಾರ ಯೋಜನೆಗಳನ್ನು ರೂಪಿಸಲು ಮೂಲ ಆಧಾರವಾಗಲಿದೆ. ಹಾಗಾಗಿ ಮೂರು ದಿನಗಳ ಕಾಲ ತರಬೇತಿ ಪಡೆದು ಜನಗಣತಿ ಕಾರ್ಯವನ್ನು ಯಶಸ್ವಿಯಾಗಿಸಿ ಎಂದರು.ಜನಗಣತಿ ಏಕೆ ಅಗತ್ಯ ಎಂಬುದನ್ನು ಜನರಿಗೆ ಸರಳವಾಗಿ ತಿಳಿಸಿ, ಅವರ ವಿಶ್ವಾಸ ಗಣಿಸುವುದು ಗಣತಿದಾರರ ಪ್ರಮುಖ ಹೊಣೆಗಾರಿಕೆ. ಸಮಾಜದ ಅಭಿವೃದ್ಧಿಗೆ ಅಗತ್ಯವಾದ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಜನಗಣತಿ ಪ್ರಮುಖ ಪಾತ್ರ ವಹಿಸುತ್ತದೆ. ಗಣತಿ ಕಾರ್ಯಕ್ಕೂ ಮೊದಲು ನೀಡುವ ತರಬೇತಿಯನ್ನು ಗಮನದಿಂದ ಕಲಿತು ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ಕೊನೆಯ ಕ್ಷಣದವರೆಗೂ ಕಾಯದೇ ನಿಗದಿತ ಅವಧಿಯೊಳಗೆ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಿದರು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸವಿತಾ ತಾಂಭ್ರೆ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು.