ಜನವರಿ ಒಳಗೆ ಫ್ಲೈಓವರ್‌ ಕಾಮಗಾರಿ ಮುಗಿಸಲು ಸೂಚನೆ: ಜೋಶಿ

| Published : Aug 27 2025, 01:01 AM IST

ಜನವರಿ ಒಳಗೆ ಫ್ಲೈಓವರ್‌ ಕಾಮಗಾರಿ ಮುಗಿಸಲು ಸೂಚನೆ: ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಫ್ಲೈಓವರ್ ಕಾಮಗಾರಿಯನ್ನು ಜನವರಿ 2026ರೊಳಗೆ ಮುಗಿಸುವಂತೆ ನಿರ್ದೇಶನ ನೀಡಿದ್ದೇವೆ. ಆದರೆ, ರಾಷ್ಟ್ರೀಯ ಹೆದ್ದಾರಿ ಪಿಡಬ್ಲ್ಯುಡಿ ಅಧಿಕಾರಿಗಳು ಮಾರ್ಚ್ ವರೆಗೆ ಸಮಯಾವಕಾಶ ಕೋರಿದ್ದಾರೆ. ಆದರೆ, ಜನವರಿ ಒಳಗೇ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದ್ದೇವೆ.

ಹುಬ್ಬಳ್ಳಿ: ನಗರದ ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿಯನ್ನು ಮುಂದಿನ ಏಳು ತಿಂಗಳಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದ್ದಾರೆ.

ಫ್ಲೈಓವರ್ ಹಾಗೂ ಬೈಪಾಸ್ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಫ್ಲೈಓವರ್ ಕಾಮಗಾರಿಯನ್ನು ಜನವರಿ 2026ರೊಳಗೆ ಮುಗಿಸುವಂತೆ ನಿರ್ದೇಶನ ನೀಡಿದ್ದೇವೆ. ಆದರೆ, ರಾಷ್ಟ್ರೀಯ ಹೆದ್ದಾರಿ ಪಿಡಬ್ಲ್ಯುಡಿ ಅಧಿಕಾರಿಗಳು ಮಾರ್ಚ್ ವರೆಗೆ ಸಮಯಾವಕಾಶ ಕೋರಿದ್ದಾರೆ. ಆದರೆ, ಜನವರಿ ಒಳಗೇ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

ಲ್ಯಾಮಿಂಗ್ಟನ್ ರಸ್ತೆ ಭಾಗದ ಫ್ಲೈಓವರ್‌ಗೆ 93 ಗರ್ಡರ್‌ಗಳು ಬೇಕಾಗುತ್ತದೆ. ಅವುಗಳೆಲ್ಲವನ್ನೂ ಈಗಿನಿಂದಲೇ ಸಿದ್ಧಪಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಈ ಭಾಗದಲ್ಲಿ ಕೆಲವು ಕಟ್ಟಡಗಳನ್ನು ತೆರವುಗೊಳಿಸಬೇಕಿದೆ. ಸೆಪ್ಟೆಂಬರ್ ತಿಂಗಳಲ್ಲಿ ಈ ಕೆಲಸ ಮುಗಿಸಲಾಗುವುದು. ಅಕ್ಟೋಬರ್ ಮೊದಲ ವಾರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ದಿವ್ಯಪ್ರಭು ಸ್ಪಷ್ಟಪಡಿಸಿದರು.

ಏಪ್ರಿಲ್‌ಗೆ ಬೈಪಾಸ್ ರೆಡಿ: ಹು-ಧಾ ಬೈಪಾಸ್ ರಸ್ತೆಗೆ ಭೂಸ್ವಾಧೀನ ಬಾಕಿ ಇದ್ದು, ಈ ಕಾಮಗಾರಿ ಏಪ್ರಿಲ್ 2026ರಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಹುಬ್ಬಳ್ಳಿಗೆ ಪ್ರವೇಶಿಸುವ ಸೌಂದರ್ಯ ಹೆಚ್ಚಿಸುವ ಸಲುವಾಗಿ ಹೆಚ್ಚುವರಿಯಾಗಿ ಮೇಲ್ಸುತುವೆ ನಿರ್ಮಿಸುವ ಯೋಜನೆಗೆ ಅನುಮೋದನೆ ದೊರೆತಿದೆ. ಹೀಗಾಗಿ, ಕಾಮಗಾರಿ ವಿಳಂಬವಾಗಿದೆ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.

ಬೆಳೆ ಪರಿಹಾರ ಪ್ರಸ್ತಾವನೆ: ಜಿಲ್ಲೆಯಲ್ಲಿ ಅತೀ ಮಳೆಯಿಂದ 80 ಸಾವಿರ ಹೆಕ್ಟೇರ್‌ ಹೆಸರು ಹಾನಿ ಆಗಿದೆ. ಎನ್‌ಡಿಆರ್‌ಎಫ್ ಹಾಗೂ ಸ್ಥಳೀಯ ಪ್ರಕೃತಿ ವಿಕೋಪ ನಿಧಿಯಡಿ ಪರಿಹಾರಕ್ಕಾಗಿ ರಾಜ್ಯ ಸರಕಾರದ ಮೂಲಕ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ. ಮಳೆಯಿಂದ ಹಾಳಾಗಿರುವ ರಸ್ತೆಗಳ ದುರಸ್ತಿಗೆ ರಾಜ್ಯ ಸರಕಾರ ಹಣ ಬಿಡುಗಡೆ ಮಾಡಬೇಕು ಎಂದರು.

ಸೋಲಾರ್ ಎನರ್ಜಿ ಯೋಜನೆ ಪ್ರಗತಿ ಉತ್ತಮ: ರಾಜ್ಯದಲ್ಲಿ ಸೋಲಾರ್ ಎನರ್ಜಿ ಯೋಜನೆಯ ಪ್ರಗತಿ ಉತ್ತಮವಾಗಿದೆ. 2030ರಲ್ಲಿ ಶೇ. 50ರಷ್ಟು ಸೋಲಾರ್ ಪವರ್ ಬಳಸುವಂತಾಗಬೇಕು. ಈಗಾಗಲೇ ಶೇ. 50ರಷ್ಟು ಆಗಿದೆ. ರಾಜ್ಯದಲ್ಲಿ ಪಿಎಂ ಕುಸುಮ್ ಮತ್ತು ಸೂರ್ಯಘರ ಯೋಜನೆ ಸಮರ್ಪಕ ಜಾರಿಗೆ ಸೂಚಿಸಲಾಗಿದೆ. ಪಿಎಂ ಕುಸುಮ್ 2.0ದಲ್ಲಿ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದ್ದೇವೆ. ಗಾಳಿ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು. ಸಮುದ್ರದಲ್ಲಿ ಗಾಳಿ ವಿದ್ಯುತ್ ಉತ್ಪಾದನಾ ಯೋಜನೆಗೆ ₹ 8 ಸಾವಿರ ಕೋಟಿ ಬಿಡುಗಡೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ ಎಂದರು.ನವಲಗುಂದ ಬೈಪಾಸ್‌ ರಸ್ತೆಗೆ ಶೀಘ್ರ ಟೆಂಡರ್‌ ಕರೆಯಲು ಮನವಿ

ಹುಬ್ಬಳ್ಳಿ: ನವಲಗುಂದ ವಿಧಾನಸಭಾ ಕ್ಷೇತ್ರದ ನವಲಗುಂದ ಬೈಪಾಸ್‌, ಅಣ್ಣಿಗೇರಿ- ಅಂಬಿಗೇರಿ ಹೆದ್ದಾರಿ ವರೆಗೆ ಅಣ್ಣಿಗೇರಿ ಮತ್ತು ಶಿರಗುಪ್ಪಿ ಹತ್ತಿರ ಸರ್ವಿಸ್ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಶಾಸಕ ಎನ್.ಎಚ್.‌ ಕೋನರಡ್ಡಿ ಒತ್ತಾಯಿಸಿದರು.

ಕೇಂದ್ರ ಸಚಿವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮನವಿ ಸಲ್ಲಿಸಿದ ಶಾಸಕರು, ಅಣ್ಣಿಗೇರಿ ನಗರದ ಹಳೇ ರಾಷ್ಟ್ರೀಯ ಹೆದ್ದಾರಿ- 63 ಅಣ್ಣಿಗೇರಿ ಅಂಬಿಗೇರಿ ಹೆದ್ದಾರಿವರೆಗೆ ಒಂದು ಬಾರಿ ಅಭಿವೃದ್ಧಿಪಡಿಸುವುದು, ರಾಷ್ಟ್ರೀಯ ಹೆದ್ದಾರಿ – 63ರ ಅಣ್ಣಿಗೇರಿ ನಗರ ಹಾಗೂ ಶಿರಗುಪ್ಪಿ ಗ್ರಾಮದ ಹತ್ತಿರ ಬಾಕಿ ಉಳಿದ ಸರ್ವೀಸ್‌ ರಸ್ತೆಗಳನ್ನು ಮತ್ತು ಬಂಗಾರಪ್ಪ ನಗರದ ಹತ್ತಿರ ಓವರ್‌ ಬ್ರಿಡ್ಜ್‌ ನಿರ್ಮಾಣ, ಈ ಹಿಂದೆ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆಯಾದ ಪಟ್ಟಿಯಲ್ಲಿರುವ ಪುಣಾ-ಬೆಂಗಳೂರು ರಸ್ತೆಯ ಎನ್.ಎಚ್-4‌ ತಡಸ-ಕಲಘಟಗಿ - ಧಾರವಾಡ- ಹೆಬಸೂರ- ನವಲಗುಂದ- ಅಣ್ಣಿಗೇರಿ ರಾಷ್ಟ್ರೀಯ ಹೆದ್ದಾರಿ – 63ರ ವರೆಗೆ ಕೂಡುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವುದು, ಹುಬ್ಬಳ್ಳಿ, ಕುಸುಗಲ್‌, ಬ್ಯಾಹಟ್ಟಿ, ತಿರ್ಲಾಪೂರ, ಅಳಗವಾಡಿ, ನರಗುಂದ ವರೆಗೆ ರಾಷ್ಟ್ರೀಯ ಹೆದ್ದಾರಿ – 218 ದಿಂದ ಎನ್.ಎಚ್-‌ 63 ಒಟ್ಟು 45 ಕಿ.ಮೀ. ರಾಜ್ಯ ಹೆದ್ದಾರಿಯನ್ನು ಕೇಂದ್ರ ಸರ್ಕಾರದ ಯಾವುದಾದರೂ ಯೋಜನೆಯಲ್ಲಿ ಸೇರಿಸುವುದು ಸೇರಿದಂತೆ ಇನ್ನಿತರ ಕಾಮಕಾರಿಗಳ ಕುರಿತಂತೆ ಮನವಿ ಮಾಡಿದರು.

ಮಹಾದಾಯಿ ಕಳಸಾ-ಬಂಡೂರಿ ಯೋಜನೆಗೆ ಕೂಡಲೇ ವನ್ಯಜೀವಿ ಮಂಡಳಿಯಿಂದ ಅನುಮತಿ ಕೊಡಿಸಬೇಕೆಂದು ಕೇಂದ್ರ ಸಚಿವರಿಗೆ ಕೋನರಡ್ಡಿ ಮನವಿ ಮಾಡಿದರು.

ಶಾಸಕರಾದ ಪ್ರಸಾದ ಅಬ್ಬಯ್ಯ, ಎಂ.ಆರ್.‌ ಪಾಟೀಲ, ಮಹೇಶ ಟೆಂಗಿನಕಾಯಿ, ಜಿಲ್ಲಾಧಿಕಾರಿ ದಿವ್ಯಪ್ರಭು, ಮೇಯರ್‌ ಜ್ಯೋತಿ ಪಾಟೀಲ, ಉಪಮಹಾಪೌರ ಸಂತೋಷ ಚೌವ್ಹಾಣ, ಜಿಪಂ ಸಿಇಒ ಭುವನೇಶ ಪಾಟೀಲ, ಹು-ಧಾ ಪಾಲಿಕೆ ಆಯುಕ್ತ ರುದ್ರೇಶ ಗಾಳಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್‌, ಪೊಲೀಸ್‌ ಕಮೀಷನರ್ ಎನ್‌. ಶಶಿಕುಮಾರ ಸೇರಿ ಮತ್ತಿತರರು ಉಪಸ್ಥಿತರಿದ್ದರು.