ಸಾರಾಂಶ
ನಗರದ ವಿವಿಧ ಬಡಾವಣೆಗಳಲ್ಲಿ ಸುಮಾರು 30 ರಿಂದ 40 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಾಗಿದ್ದು, ಇದುವರೆಗೂ ಹಕ್ಕುಪತ್ರ ಸರ್ಕಾರದಿಂದ ಪಡೆದಿರುವುದಿಲ್ಲ. ಇಂತಹ ಸಮಸ್ಯೆ ಇರುವವರನ್ನು ಗುರುತಿಸಿ ಶೀಘ್ರವಾಗಿ ಹಕ್ಕುಪತ್ರ ನೀಡುವಂತೆ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರು ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ವಿವಿಧ ಬಡಾವಣೆಗಳಲ್ಲಿ ಸುಮಾರು 30 ರಿಂದ 40 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಾಗಿದ್ದು, ಇದುವರೆಗೂ ಹಕ್ಕುಪತ್ರ ಸರ್ಕಾರದಿಂದ ಪಡೆದಿರುವುದಿಲ್ಲ. ಇಂತಹ ಸಮಸ್ಯೆ ಇರುವವರನ್ನು ಗುರುತಿಸಿ ಶೀಘ್ರವಾಗಿ ಹಕ್ಕುಪತ್ರ ನೀಡುವಂತೆ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರು ಸೂಚನೆ ನೀಡಿದರು. ಶಾಸಕರು ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಲವಾರು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ವಾಸವಿದ್ದು, ಯಾವುದೇ ದಾಖಲೆಗಳು ಇರದೇ ಜೀವನ ನಡೆಸುತ್ತಿರುವ ಸಾರ್ವಜನಿಕರು ಹಕ್ಕುಪತ್ರಕ್ಕಾಗಿ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಕಂದಾಯ ಸಚಿವರು ಸಹ ಹಕ್ಕುಪತ್ರಗಳನ್ನು ನೀಡಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ತುಮಕೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಸ್ವತ್ತುಗಳಲ್ಲಿ ವಾಸವಾಗಿರುವವರಿಗೆ ಹಕ್ಕುಪತ್ರ ನೀಡಲು ಅರ್ಹ ಫಲಾನುಭವಿಗಳ ಪಟ್ಟಿಯನ್ನು ನೀಡುವಂತೆ ಹಾಗೂ ಸಾರ್ವಜನಿಕರಿಗೆ ಹಕ್ಕುಪತ್ರಗಳನ್ನು ನೀಡಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕರು ಸಭೆಯಲ್ಲಿ ತಿಳಿಸಿದರು. ತುಮಕೂರು ಮಹಾನಗರಪಾಲಿಕೆಯ ಆಯುಕ್ತರು ಸಭೆಯಲ್ಲಿ ಮಾತನಾಡಿ ಹಕ್ಕುಪತ್ರಗಳನ್ನು ನೀಡಲು ಫಲಾನುಭವಿಗಳನ್ನು ಗುರುತಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಪ್ರಕ್ರಿಯೆ ನಡೆಯುತ್ತಿದ್ದು, ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ತಿಳಿಸಿದರು. ತುಮಕೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಕಂದಾಯ ಗ್ರಾಮವೆಂದು ಪರಿಗಣಿಸಿ ಹಕ್ಕುಪತ್ರಗಳನ್ನು ನೀಡಲು ಅವಕಾಶವಿದೆ ಎಂದು ತಹಶೀಲ್ದಾರ್ ರವರು ಸಭೆಗೆ ಮಾಹಿತಿ ನೀಡಿದರು.ಈ ಸಭೆಯಲ್ಲಿ ತುಮಕೂರು ಮಹಾನಗರಪಾಲಿಕೆ ಆಯುಕ್ತರು, ತುಮಕೂರು ತಾಲ್ಲೂಕು ತಹಶೀಲ್ದಾರ್‌ರವರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.