. ಹಾನಗಲ್ಲ ಪುರಸಭೆ ವ್ಯಾಪ್ತಿಯ ಆಶ್ರಯ ವಸತಿ ನಿವೇಶನಗಳನ್ನು ಅನರ್ಹರಿಗೆ ಹಂಚಿಕೆ ಮಾಡಿರುವ ಬಗ್ಗೆ ದೂರುಗಳಿದ್ದು, ಇಂತಹವುಗಳನ್ನು ಪರಿಶೀಲಿಸಿ ಅರ್ಹರಿಗೆ ನಿವೇಶನ ನೀಡುವ ಕೆಲಸ ಶೀಘ್ರ ಕಾರ್ಯರೂಪಕ್ಕೆ ಬರಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಹಾನಗಲ್ಲ: ಹಾನಗಲ್ಲ ಪುರಸಭೆ ವ್ಯಾಪ್ತಿಯ ಆಶ್ರಯ ವಸತಿ ನಿವೇಶನಗಳನ್ನು ಅನರ್ಹರಿಗೆ ಹಂಚಿಕೆ ಮಾಡಿರುವ ಬಗ್ಗೆ ದೂರುಗಳಿದ್ದು, ಇಂತಹವುಗಳನ್ನು ಪರಿಶೀಲಿಸಿ ಅರ್ಹರಿಗೆ ನಿವೇಶನ ನೀಡುವ ಕೆಲಸ ಶೀಘ್ರ ಕಾರ್ಯರೂಪಕ್ಕೆ ಬರಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.ಹಾನಗಲ್ಲಿನ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಪುರಸಭೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೆಲ ಆಶ್ರಯ ವಸತಿ ನಿವೇಶನಗಳನ್ನು ಅನರ್ಹರಿಗೆ ಹಂಚಿಕೆ ಮಾಡಿರುವ ಬಗ್ಗೆ ದೂರುಗಳಿದ್ದು, ಕೂಡಲೇ ಮರುಪರಿಶೀಲನೆ ನಡೆಸಿ ಅರ್ಹರಿಗೆ ನಿವೇಶನ ದೊರಕಿಸಲು ಕ್ರಮ ಕೈಗೊಳ್ಳಿ. ಅಮೃತ ೨.೦ ಯೋಜನೆಯಡಿ ಹಾನಗಲ್ ನಗರಕ್ಕೆ ೨೦*೭ ಕುಡಿಯುವ ನೀರು ಪೂರೈಸುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಗಮನ ಹರಿಸಿ ಎಂದು ಸೂಚಿಸಿದ್ದಲ್ಲದೆ, ಇ-ಸ್ವತ್ತು ತಂತ್ರಾಂಶದಲ್ಲಿನ ನೂನ್ಯತೆಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗದಿತ ಕಾಲಮಿತಿಯಲ್ಲಿ ಇ-ಸ್ವತ್ತು ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ವೈ.ಕೆ.ಜಗದೀಶ ಅವರಿಗೆ ಸೂಚಿಸಿದರು.ಕಂಬಳಗೇರಿ ಕೆರೆ ಪಕ್ಕದ ರಸ್ತೆ ಅತಿಕ್ರಮಣಗೊಂಡಿರುವ ಬಗ್ಗೆ ದೂರುಗಳಿದ್ದು, ಈಗಾಗಲೇ ಸರ್ವೆ ಸಹ ಕೈಗೊಳ್ಳಲಾಗಿದೆ. ಆದಷ್ಟು ಬೇಗ ಅತಿಕ್ರಮಣ ತೆರವುಗೊಳಿಸಿ ಆ ಭಾಗದ ಹೊಲ, ಗದ್ದೆಗಳಿಗೆ ರೈತರು ಓಡಾಡಲು ರಸ್ತೆ ಅಭಿವೃದ್ಧಿ ಪಡಿಸಿ ಅನುಕೂಲ ಕಲ್ಪಿಸುವಂತೆ ಸೂಚಿಸಿದರು. ೨೦೨೫-೨೬ ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ನಿಧಿಯಡಿ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡಗಳಲ್ಲಿ ನಾನಾ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ೭.೬೦ ಕೋಟಿ ರು. ಒದಗಿಸಲಾಗಿದ್ದು, ಅನುದಾನ ಸದ್ಬಳಕೆ ಮಾಡಿಕೊಂಡು ಗುಣಮಟ್ಟದ ಕಾಮಗಾರಿ ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು. ಪುರಸಭೆ ಮುಖ್ಯಾಧಿಕಾರಿ ವಾಯ್.ಕೆ. ಜಗದೀಶ, ಅಭಿಯಂತರ ನಾಗರಾಜ ಮಿರ್ಜಿ ಇದ್ದರು.