ರೈತ ಸಮುದಾಯದ ಸಂಕಷ್ಟಕ್ಕೆ ಸ್ಪಂದಿಸಲು ಸೂಚನೆ

| Published : Sep 26 2024, 11:30 AM IST

ಸಾರಾಂಶ

Instructions to respond to the distress of the farming community

- ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ರಘುಮೂರ್ತಿ ಸೂಚನೆ

------

ಕನ್ನಡಪ್ರಭವಾರ್ತೆ ಚಳ್ಳಕೆರೆಸೆಪ್ಟಂಬರ್ ತಿಂಗಳಿನಿಲ್ಲಿ ಮಳೆ ಪ್ರಮಾಣ ಕುಸಿದಿದ್ದು, ಬೆಳೆಗಳು ಸಹ ನೆಲಕಚ್ಚಲಾರಂಭಿಸಿವೆ. ರೈತ ಸಮುದಾಯ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸರ್ಕಾರಕ್ಕೆ ವಿಶೇಷ ವರದಿಯನ್ನು ಕಳಿಸಿ ರೈತರಿಗೆ ನೆರವಾಗಬೇಕು ಎಂದು ಶಾಸಕ ರಘುಮೂರ್ತಿ ತಿಳಿಸಿದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತ್ರೈಮಾಸಿಕ ಕೆಡಿಪಿ ಸಭೆಯು ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಟಿ. ರಘುಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ನಡೆಯಿತು.

ಸಭೆಯ ಆರಂಭದಲ್ಲೇ ಕೃಷಿ, ತೋಟಗಾರಿಕೆ, ರೇಷ್ಮೆ, ಕುಡಿಯುವ ನೀರು ಮುಂತಾದ ಇಲಾಖೆಗಳ ಮಾಹಿತಿ ಪಡೆದು ಶಾಸಕರು ಮಾತನಾಡಿದರು.

ಸಹಾಯಕ ಕೃಷಿ ನಿರ್ದೇಶಕ ಜೆ. ಅಶೋಕ್ ಮಾಹಿತಿ ನೀಡಿ, ಜೂನ್ ತಿಂಗಳ ಅಂತ್ಯದಲ್ಲಿ ಶೇ.70ರಷ್ಟು ಬಿತ್ತನೆಯಾಗಿದ್ದು, ಇಲ್ಲಿವರೆಗೂ ಆದ ಮಳೆಯಿಂದ ಕೇವಲ 50ರಷ್ಟು ಬೆಳೆ ನಿರೀಕ್ಷೆ ಮಾಡಬಹುದು. ಪೂರ್ಣಪ್ರಮಾಣದಲ್ಲಿ ಶೇಂಗಾ ಬಿತ್ತನೆ ಸಾಧ್ಯವಾಗಿಲ್ಲ. ಈ ಬಗ್ಗೆ ಸರ್ಕಾರಕ್ಕೆ ವರದಿ ಕಳಿಸಲು ನಿರ್ಧರಿಸಲಾಗಿದೆ ಎಂದರು.

ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ, ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಮಂಜುನಾಥ ಮಾಹಿತಿ ನೀಡಿ, ಸರ್ಕಾರ ರೈತರಿಗೆ ಆದ ಬೆಳೆನಷ್ಟ ಪರಿಹಾರ ಹಿನ್ನೆಲೆಯಲ್ಲಿ ಕಳೆದ 2022-23ನೇ ಸಾಲಿನಲ್ಲಿ ಒಟ್ಟು ₹46.58 ಕೋಟಿ ಹಣ ಬಿಡುಗಡೆಗೊಳಿಸಿದೆ ಎಂದು ತಿಳಿಸಿದರು.

ತಾಲೂಕಿನಾದ್ಯಂತ ಕುಡಿವ ನೀರಿನ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದ ಶಾಸಕರಿಗೆ ಮಾಹಿತಿ ನೀಡಿದ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ದಯಾನಂದಸ್ವಾಮಿ, ಗ್ರಾಮೀಣ ಭಾಗದಲ್ಲಿ ಹಲವಾರು ಕಡೆ ಬೋರ್‌ವೆಲ್‌ಗಳು ದುರಸ್ಥಿಯಾಗದೇ ಉಳಿದಿವೆ. ಕಾರಣ, ಕೆಲವು ಖಾಸಗಿ ಗುತ್ತಿಗೆದಾರರು ಕೆಲಸ ನಿರ್ವಹಿಸಲು ಮುಂದೆ ಬರುತ್ತಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದರು.

ತಾಲೂಕಿನ ವಿವಿಧ ಹಾಸ್ಟಲ್‌ಗಳ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು, ಗ್ರಾಮೀಣ ಪ್ರದೇಶದಿಂದ ವಿದ್ಯಾಭ್ಯಾಸಕ್ಕೆ ಬರುವ ರೈತರು, ಕೂಲಿ ಕಾರ್ಮಿಕ ಮಕ್ಕಳಿಗೆ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಸವಲತ್ತು ಒದಗಿಸಬೇಕು. ಕೆಲ ಹಾಸ್ಟಲ್‌ನಲ್ಲಿ ವಿದ್ಯಾರ್ಥಿಗಳೇ ಊಟದ ಅವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಸೂಚಿಸಿದರು.

ಚಳ್ಳಕೆರೆ ನಗರಕ್ಕೆ ಹೊಂದಿಕೊಂಡಿರುವ ನಗರಂಗೆರೆ, ದೊಡ್ಡೇರಿ, ಬುಡ್ನಹಟ್ಟಿ ಮತ್ತು ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿ.ಎ. ಸೈಟ್‌ಗಳನ್ನು ಸರ್ಕಾರಿ ಕಚೇರಿಗಳಿಗೆ ನೀಡುವಂತೆ ಸಂಬಂಧಪಟ್ಟ ಪಿಡಿಒಗಳಿಗೆ ಸೂಚನೆ ನೀಡಿದರು. ಈ ಬಗ್ಗೆ ತಹಸೀಲ್ದಾರ್ ಮತ್ತು ಇಒ ಹೆಚ್ಚು ಗಮನಹರಿಸಬೇಕು ಎಂದರು.

ಶಿಶು ಅಭಿವೃದ್ಧಿ ಅಧಿಕಾರಿ ಹರಿಪ್ರಸಾದ್ ಮಾಹಿತಿ ನೀಡಿ, ಹಲವಾರು ಕಡೆ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದೆ. ಗೃಹಲಕ್ಷ್ಮೀ ಯೋಜನೆಯಡಿ ತಾಲೂಕಿನ ಸುಮಾರು 270 ಮಹಿಳೆಯರು ಜಿಎಸ್‌ಟಿ ಮತ್ತು ಆದಾಯ ತೆರಿಗೆ ಪಾವತಿದಾರರಾಗಿದ್ದು, ಈ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದ ಗಿರಾಣಿ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ಅಕ್ರಮ ಮದ್ಯ ಮಾರಾಟ ಮಾಡದಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸುವಂತೆ ಶಾಸಕರು ಸೂಚನೆ ನೀಡಿದರು.

ತುರುವನೂರು ಹೋಬಳಿ ವ್ಯಾಪ್ತಿಯ ಮುದ್ದಾಪುರ ಗ್ರಾಮದಲ್ಲಿ ಸರ್ಕಾರಿ ಗೋಮಾಳದಲ್ಲಿ ಖಾಸಗಿ ವ್ಯಕ್ತಿಯೊಬ್ಬ ತೋಟ ನಿರ್ಮಿಸಿದ್ದು ತೆರವುಗೊಳಿಸುವಂತೆ ಸೂಚನೆ ನೀಡಿದರು.

ತಹಸೀಲ್ದಾರ್ ರೇಹಾನ್‌ಪಾಷ, ಚಿತ್ರದುರ್ಗ ಪ್ರಭಾರ ತಹಸೀಲ್ದಾರ್ ರವಿಕುಮಾರ್, ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಕುಮಾರ್‌ ಬಾಬು, ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಗ್ಯಾರಂಟಿ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಹಾಗೂ ಕೆಡಿಪಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

----

೨೩ಸಿಎಲ್‌ಕೆ೧: ಚಳ್ಳಕೆರೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಶಾಸಕ ಟಿ. ರಘುಮೂರ್ತಿ ಅಧಿಕಾರಿಗಳಿಂದ ಮಾಹಿತಿ ಪಡೆದರು.