ಸಾರಾಂಶ
ಶಿರಹಟ್ಟಿ: ತಾಲೂಕಿನ ರೈತರಿಗೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಬೀಜ, ರಸಗೊಬ್ಬರ ಮತ್ತು ಔಷಧಿಗಳ ಕೊರತೆಯಾಗದಂತೆ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಕರೆ ನೀಡಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನಲ್ಲಿ ಕಳಪೆ ಗುಣಮಟ್ಟದ ಬಿತ್ತನೆ ಬೀಜ ಮಾರಾಟ ಮಾಡುವುದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ತಾಲೂಕಿನಲ್ಲಿ ಬಿತ್ತನೆಗೆ ಹದವಾದ ಮಳೆಯಾಗುತ್ತಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ರೈತರು ರೈತ ಸಂಪರ್ಕ ಕೇಂದ್ರದಿಂದ ಬೀಜ ಖರೀದಿ ಮಾಡಬೇಕು. ಅಂಗಡಿಗಳಲ್ಲಿ ಹೆಚ್ಚಿನ ಬೆಲೆ ತೆರುವ ಬದಲು ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಬೀಜ ಕೊಂಡುಕೊಳ್ಳಬೇಕು ಎಂದರು.
ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ರೈತರಿಗೆ ಸಕಾಲಕ್ಕೆ ಬೀಜ ಪೂರೈಕೆ ಮಾಡಬೇಕು. ಬೀಜಕ್ಕಾಗಿ ರೈತರು ತಮ್ಮ ಕೆಲಸ-ಕಾರ್ಯ ಬಿಟ್ಟು ಅಲೆದಾಡುವಂತಾಗಬಾರದು. ಬಿತ್ತನೆ ಪ್ರಮಾಣಕ್ಕೆ ಅನುಸಾರವಾಗಿ ಉತ್ತಮ ಗುಣಮಟ್ಟದ ಬೀಜ ಪೂರೈಕೆ ಮಾಡಬೇಕು. ಅಲ್ಲದೇ ಉತ್ತಮ ಗುಣಮಟ್ಟದ ಬೀಜ ರೈತರಿಗೆ ಒದಗಿಸಬೇಕು. ರೈತರು ಪ್ರಮಾಣೀಕೃತ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಬೇಕು ಎಂದು ಹೇಳಿದರು.ಬಿತ್ತನೆ ಪೂರ್ವದಲ್ಲಿ ಬೀಜೋಪಚಾರ ಮುಖ್ಯವಾಗಿದೆ. ಎರೆಹುಳು ಗೊಬ್ಬರ ಬಳಕೆಗೆ ರೈತರು ಮುಂದಾಗಬೇಕು. ಬೆಳೆಯಲ್ಲಿ ರೋಗ, ಕೀಟಗಳ ಬಾಧೆ ಕಂಡು ಬಂದಲ್ಲಿ ಕೃಷಿ ಇಲಾಖೆ ಅಧಿಕಾರಿಗಳಿಂದ ಸಲಹೆ ಪಡೆದುಕೊಳ್ಳಬೇಕು. ತಾಲೂಕಿನಲ್ಲಿ ಮೇ ಕೊನೆಯಲ್ಲಿ ಪೂರ್ವ ಮುಂಗಾರು ಮಳೆ ಪ್ರಾರಂಭವಾಗಿ ಅನೇಕ ಗ್ರಾಮಗಳಲ್ಲಿ ಸಮೃದ್ಧ ಮಳೆಯಾಗಿದೆ. ರೈತರು ಬಿತ್ತನೆಗೆ ಹೊಲಗಳನ್ನು ಹದಗೊಳಿಸಿ ಸಜ್ಜಾಗಿದ್ದು, ಸೂಕ್ತ ಸಮಯಕ್ಕೆ ಬೀಜ ವಿತರಣೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಕಳಪೆ ಬಿತ್ತನೆ ಬೀಜ ಮಾರಾಟದ ಮೇಲೆ ತೀವ್ರ ನಿಗಾವಹಿಸಬೇಕು. ಅಂತಹ ಪ್ರಕರಣಗಳು ಕಂಡುಬಂದರೆ ಕಳಪೆ ಬಿತ್ತನೆ ಬೀಜ ಉತ್ಪಾದನೆ ಹಾಗೂ ಮಾರಾಟ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಪ್ರತಿ ವರ್ಷವೂ ತಾಲೂಕಿನಲ್ಲಿ ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿ ರೈತರಿಗೆ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಪ್ರಕರಣದಲ್ಲಿ ಭಾಗಿಯಾದ ಮಾರಾಟಗಾರರು, ಬೀಜ ಉತ್ಪಾದನಾ ಕಂಪನಿಗಳು ಹಾಗೂ ಬೀಜವನ್ನು ಪ್ರಮಾಣೀಕರಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.ತಾಲೂಕು ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ ಮಾತನಾಡಿ, ಪ್ರಸ್ತುತ ವರ್ಷ ತಾಲೂಕಿನಲ್ಲಿ ಮುಂಗಾರು ಪೂರ್ವದಲ್ಲಿ ಉತ್ತಮವಾದ ಮಳೆ ಸುರಿಯುತ್ತಿದೆ. ರೈತರಿಗೆ ನೆರವು ನೀಡಲು ಕೃಷಿ ಇಲಾಖೆ ಸನ್ನದ್ದವಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ರೈತರಿಗೆ ಸಮಸ್ಯೆಯಾಗದಂತೆ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.ಮುಂಗಾರು ಹಂಗಾಮಿನಲ್ಲಿ ರೈತರು ಗೋವಿನಜೋಳ, ಶೇಂಗಾ, ಹೆಸರು, ತೊಗರಿ ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆಯುತ್ತಾರೆ. ಆ ಬೀಜಗಳು ಗುಣಮಟ್ಟದ್ದಾಗಿರಬೇಕು. ಅವಧಿ ಮೀರಿದ ಬೀಜಗಳನ್ನು ಮಾರಾಟ ಮಾಡದಂತೆ ಕ್ರಮ ವಹಿಸುವ ಜತೆಗೆ ಬೀಗಳಲ್ಲಿ ಲೋಪ-ದೋಷಗಳಿದ್ದರೆ ಅದಕ್ಕೆ ವ್ಯಾಪಾರಸ್ಥರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.ಮುಖಂಡ ನಾಗರಾಜ ಲಕ್ಕುಂಡಿ, ಜಾನು ಲಮಾಣಿ, ಕೃಷಿ ಸಮಾಜದ ತಾಲೂಕು ಘಟಕದ ಉಪಾಧ್ಯಕ್ಷ ಗುರಪ್ಪ ಲಮಾಣಿ, ದೀಪು ಕಪ್ಪತ್ತನವರ, ಚನ್ನವೀರಪ್ಪ ಕಲ್ಯಾಣಿ, ಅಶೋಕ ಕಪ್ಪಲಿ, ಯಲ್ಲಪ್ಪ ಬಂಗಾರಿ, ನಂದಾ ಪಲ್ಲೇದ, ಬಸವರಾಜ ವಡವಿ ಸೇರಿ ಅನೇಕ ರೈತರು ಇದ್ದರು.