ಹಾವೇರಿ: ಜಾನುವಾರುಗಳು ರೈತನ ಬೆನ್ನೆಲುಬು, ಅವುಗಳ ರಕ್ಷಣೆಗೆ ಕಾಲ ಕಾಲಕ್ಕೆ ಲಸಿಕೆ, ರೋಗ ಪೀಡಿತ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಮೂಲಕ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಎಲ್ಲ ಅಗತ್ಯ ಕ್ರಮಗಳನ್ನು ಪಶುಪಾಲನಾ ಇಲಾಖೆಯ ವತಿಯಿಂದ ಸೂಕ್ತವಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 9ನೇ ಸುತ್ತಿನ ಕಾಲುಬಾಯಿ ಬೇನೆ ಲಸಿಕಾ ಕಾರ್ಯಕ್ರಮದ ಹಾವೇರಿ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಲು ಬಾಯಿ ಬೇನೆ ರೋಗವು ಜಾನುವಾರುಗಳಿಗೆ ಮಾರಕವಾಗಿದ್ದು, ನಮ್ಮ ದೇಶದಿಂದ ರೋಗವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ವಾರ್ಷಿಕವಾಗಿ ಎರಡು ಬಾರಿ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ರೋಗದ ನಿರ್ಮೂಲನೆಗಾಗಿ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ. ಹೀಗಾಗಿ ಸಂಬಂಧಿಸಿದ ಇತರೆ ಇಲಾಖೆಗಳು ಪಶುಪಾಲನಾ ಇಲಾಖೆಯೊಂದಿಗೆ ಕೈಜೋಡಿಸಿ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಕರೆ ನೀಡಿದರು.ನಿಗದಿತ ಕಾಲಾವಧಿಯಲ್ಲಿ ಮುಗಿಸಿ..9ನೇ ಸುತ್ತಿನ ಕಾಲು ಬಾಯಿ ಬೇನೆ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆಗೆ ಅರ್ಹವಿರುವ ಜಾನುವಾರುಗಳಿಗೆ ಶೇ. 100ರಷ್ಟು ಲಸಿಕೆ ಹಾಕುವ ಕಾರ್ಯವನ್ನು ನಿಗದಿಪಡಿಸಿದ 30 ದಿನಗಳ ಅವಧಿಯಲ್ಲಿಯೇ ಕೈಗೊಂಡು, ಪೂರ್ಣಗೊಳಿಸಲು ಎಲ್ಲ ಅಧಿಕಾರಿಗಳು ಸನ್ನದ್ದರಾಗಿರಬೇಕು. ಲಸಿಕಾ ಕಾರ್ಯಕ್ರಮದಲ್ಲಿ ಎಲ್ಲ ರೈತಾಪಿ ಜನರು ತಮ್ಮಲ್ಲಿರುವ ಎಲ್ಲ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡು ರಾಜ್ಯದಿಂದ ಕಾಲುಬಾಯಿ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಹಕರಿಸಬೇಕೆಂದು ಮನವಿ ಮಾಡಿಕೊಂಡರು. 2.92 ಲಕ್ಷ ಜಾನುವಾರು: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಶಿವಯೋಗಿ ಬ. ಯಲಿ ಮಾತನಾಡಿ, ಏ. 23ರಿಂದ ಮೇ 22ರ ವರೆಗೆ ಕಾಲು ಬಾಯಿ ಲಸಿಕಾ ಕಾರ್ಯಕ್ರಮ ಜರುಗಲಿದೆ. ಜಿಲ್ಲೆಯಲ್ಲಿ ಕೈಗೊಂಡ ವಾಸ್ತವಿಕ ಸಮೀಕ್ಷೆಯ ಮೇರೆಗೆ ಅಂದಾಜು 2.92 ಲಕ್ಷ ಜಾನುವಾರುಗಳಿರುತ್ತವೆ. ಲಸಿಕಾ ಅಭಿಯಾನದಲ್ಲಿ ಇಲಾಖೆಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಮನೆ ಬಾಗಿಲಿಗೆ ಹೋಗಿ ಕಾಲುಬಾಯಿ ಲಸಿಕೆ ಹಾಕುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.171 ತಂಡ ರಚನೆ: ಪಶುಪಾಲನಾ ಇಲಾಖೆಯ ಹಾಗೂ ಇಲಾಖೇತರ ಲಸಿಕೆದಾರರನ್ನು ಒಳಗೊಂಡು ಒಟ್ಟು 171 ತಂಡಗಳನ್ನು ರಚಿಸಲಾಗಿರುತ್ತದೆ. ಪ್ರತಿ ತಾಲೂಕಿನಲ್ಲಿ ಲಸಿಕಾ ವೇಳಾ ಪಟ್ಟಿ ಮತ್ತು ಜಾನುವಾರು ಹೊಂದಿರುವ ರೈತರ ಮಾಹಿತಿಯನ್ನು ಗ್ರಾಮವಾರು ತಯಾರಿಸಲಾಗಿದೆ. ಅದರಲ್ಲಿ ಗ್ರಾಮಗಳ ಹೆಸರು, ಜಾನುವಾರುಗಳ ಸಂಖ್ಯೆ, ಜಾನುವಾರು ಮಾಲೀಕರ ಹೆಸರು, ಮೊಬೈಲ್ ಸಂಖ್ಯೆ, ಆಧಾರ ಸಂಖ್ಯೆ, ಲಸಿಕಾದಾರರ ವಿವರ ಹಾಗೂ ಜಾನುವಾರುವಿನ ಕಿವಿ ಓಲೆ ಸಂಖ್ಯೆ ವಿವರಗಳು ಲಭ್ಯವಿರುತ್ತವೆ. ಪ್ರತಿ ಗ್ರಾಮ ಅಥವಾ ನಗರ ಪ್ರದೇಶವನ್ನು 100 ರಿಂದ 120 ಜಾನುವಾರುಗಳಿಗೆ ಒಂದು ಬ್ಲಾಕ್ ಎಂದು ವರ್ಗೀಕರಿಸಿ ಒಟ್ಟು 2952 ಬ್ಲಾಕ್‌ಗಳಲ್ಲಿ ಲಸಿಕಾದಾರರು ಲಸಿಕೆಯನ್ನು ಹಾಕಲಿದ್ದಾರೆ. ಪ್ರತಿ ಜಾನುವಾರಿಗೆ ಒಂದರಂತೆ ಸೀರಿಂಜ್ ಉಪಯೋಗಿಸಿ ಲಸಿಕೆ ನೀಡಲಿದ್ದಾರೆ ಎಂಬ ಮಾಹಿತಿಯನ್ನು ಸಭೆಗೆ ವಿವರಿಸಿದರು. 3.18 ಲಕ್ಷ ಡೋಸ್ ಲಸಿಕೆ: ಜಿಲ್ಲೆಯಲ್ಲಿ ಈಗಾಗಲೇ 3,18,550 ಡೋಸ್ ಲಸಿಕೆ ದಾಸ್ತಾನಿದ್ದು, ಈ ಲಸಿಕೆಯನ್ನು ತಾಲೂಕಿನಲ್ಲಿರುವ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ವಿಂಗಡಿಸಿ ಮರು ಹಂಚಿಕೆ ಮಾಡಲಾಗಿದೆ. ಪ್ರತಿ ಜಾನುವಾರುವಿಗೆ ಉಚಿತವಾಗಿ ಲಸಿಕೆ ಮಾಡಿದ ನಂತರ ರೈತರ ವಿವರವನ್ನು ಮತ್ತು ಮೊಬೈಲ್ ಸಂಖ್ಯೆಯನ್ನು ತಂತ್ರಾಂಶದಲ್ಲಿ ಅಳವಡಿಸಿ ರೈತರಿಂದ ಒಟಿಪಿ ಪಡೆದುಕೊಳ್ಳುವ ಮುಖಾಂತರ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಇದೇ ಸಂದರ್ಭದಲ್ಲಿ 9ನೇ ಸುತ್ತಿನ ಕಾಲುಬಾಯಿ ಬೇನೆ ಲಸಿಕಾ ಕಾರ್ಯಕ್ರಮದ ಪೋಸ್ಟರ್ ಮತ್ತು ಬ್ಯಾನರ್ಸಗಳನ್ನು ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ಎಎಸ್ಪಿ ಲಕ್ಷ್ಮಣ ಶಿರಕೋಳ, ಯೋಜನಾ ನಿರ್ದೇಶಕ ಚಂದ್ರಪ್ಪ, ಲಸಿಕಾ ಕಾರ್ಯಕ್ರಮದ ಜಿಲ್ಲಾ ಉಸ್ತುವಾರಿ ಅಧಿಕಾರಿ ಡಾ.ಕಿರಣ ಕೊಪ್ಪದ, ಎಲ್ಲಾ ತಾಲೂಕಿನ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ), ಸ್ಥಳಿಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ಹಾವೇರಿ ಹಾಲು ಒಕ್ಕೂಟದ, ಜಿಲ್ಲಾ ಪಾಲಿಕ್ಲಿನಿಕ್‌ನ ಅಧಿಕಾರಿಗಳು ಇದ್ದರು.
ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮವಹಿಸಲು ಸೂಚನೆ
ಜಾನುವಾರುಗಳು ರೈತನ ಬೆನ್ನೆಲುಬು, ಅವುಗಳ ರಕ್ಷಣೆಗೆ ಕಾಲ ಕಾಲಕ್ಕೆ ಲಸಿಕೆ, ರೋಗ ಪೀಡಿತ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಮೂಲಕ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಎಲ್ಲ ಅಗತ್ಯ ಕ್ರಮಗಳನ್ನು ಪಶುಪಾಲನಾ ಇಲಾಖೆಯ ವತಿಯಿಂದ ಸೂಕ್ತವಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.