ಅಂಬೇಡ್ಕರ್‌ಗೆ ಅವಹೇಳನ: ಅಮಿತ್‌ ಶಾ ವಜಾಕ್ಕೆ ಆಗ್ರಹ

| Published : Dec 20 2024, 12:48 AM IST

ಸಾರಾಂಶ

ಅಂಬೇಡ್ಕರ್ ಹೆಸರನ್ನು ಹೇಳಿದಷ್ಟು ಸಲ ದೇವರ ಹೆಸರು ಹೇಳಿದ್ದರೇ ಏಳು ಜನ್ಮಕ್ಕೆ ಸ್ವರ್ಗ ಸಿಗುತ್ತಿತ್ತು ಎಂದು ಹೇಳುವ ಮೂಲಕ ಅಂಬೇಡ್ಕರ್ ಅನುಯಾಯಿಗಳು, ಅಭಿಮಾನಿಗಳು ಈಗಲೂ ನರಕದಲ್ಲಿದ್ದಾರೆ ಎನ್ನುವಂತೆ ಹೇಳಿದ್ದಾರೆ.

ಹುಬ್ಬಳ್ಳಿ:

ಡಾ. ಬಿ.ಆರ್‌. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್‌ನಲ್ಲಿ ನೀಡಿರುವ ಹೇಳಿಕೆ ಖಂಡಿಸಿ ವಿವಿಧ ದಲಿತ ಸಂಘಟನೆಗಳ ಮಹಾಮಂಡಳದ ಸದಸ್ಯರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ಇಲ್ಲಿನ ಪ್ರಧಾನ ಅಂಚೆ ಕಚೇರಿ ಬಳಿಯ ಅಂಬೇಡ್ಕರ್ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ಸಂಚಾರ ಬಂದ್‌ ಮಾಡಿ ಪ್ರತಿಭಟಿಸಿದರು.

ಈ ವೇಳೆ ವಿವಿಧ ದಲಿತ ಸಂಘಟನೆಗಳ ಮಹಾಮಂಡಳದ ಸಂಚಾಲಕ ಗುರುನಾಥ ಉಳ್ಳಿಕಾಶಿ ಮಾತನಾಡಿ, ಅಂಬೇಡ್ಕರ್ ಅವರ ಕುರಿತು ಸಚಿವ ಅಮಿತ್ ಶಾ ಸಂಸತ್‌ನಲ್ಲಿ ನೀಡಿರುವ ಹೇಳಿಕೆಯು ಬಿಜೆಪಿಯ ನಾಟಕವನ್ನು ಬಯಲು ಮಾಡಿದೆ. ದಲಿತರ ಕುರಿತಾದ ಬಿಜೆಪಿಯವರ ಮನಸಿನ ಮಾತುಗಳನ್ನು ಗೃಹ ಸಚಿವರು ಆಡಿದ್ದಾರೆ ಎಂದರು.

ಅಂಬೇಡ್ಕರ್ ಹೆಸರನ್ನು ಹೇಳಿದಷ್ಟು ಸಲ ದೇವರ ಹೆಸರು ಹೇಳಿದ್ದರೇ ಏಳು ಜನ್ಮಕ್ಕೆ ಸ್ವರ್ಗ ಸಿಗುತ್ತಿತ್ತು ಎಂದು ಹೇಳುವ ಮೂಲಕ ಅಂಬೇಡ್ಕರ್ ಅನುಯಾಯಿಗಳು, ಅಭಿಮಾನಿಗಳು ಈಗಲೂ ನರಕದಲ್ಲಿದ್ದಾರೆ ಎನ್ನುವಂತೆ ಮತ್ತು ದೇವರೇ ಶ್ರೇಷ್ಠ ಎಂಬಂತೆ ತಿಳಿಸುವ ಮೂಲಕ ಹೀನ ಮನಸ್ಥಿತಿಯನ್ನು ಅಮಿತ್‌ ಶಾ ಪ್ರತಿಬಿಂಬಿಸಿದ್ದಾರೆ ಎಂದರು.

ಸ್ವಾತಂತ್ರ್ಯ ಮತ್ತು ಸಂವಿಧಾನದ ಜತೆ ಸಾಗುತ್ತ 75 ವರ್ಷ ಗತಿಸುತ್ತ ಬಂದರೂ ಇಂದಿಗೂ ಹಲವೆಡೆ ದಲಿತರಿಗೆ ದೇವಾಲಯಗಳಿಗೆ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಆದರೆ, ಶೋಷಿತರಿಗೆ ಸಮಾನತೆಯ ಹಕ್ಕು ದೊರಕಿಸಿದ ಸಂವಿಧಾನ ಮತ್ತು ಅಂಬೇಡ್ಕರ್‌ ಬಗೆಗಿನ ಬಿಜೆಪಿಯವರ ಧೋರಣೆ ಖಂಡಿಸುತ್ತೇವೆ ಎಂದು ಹೇಳಿದರು.

ಸಮಾಜದಲ್ಲಿ ಶಾಂತಿಗೆ ಭಂಗ ಮಾಡುವ ಹೇಳಿಕೆ ನೀಡಿದ ಅಮಿತ್ ಶಾ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಪ್ರತಿಭಟನಾಕಾರರು ರಾಷ್ಟ್ರಪತಿಗೆ ಬರೆದ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಚೇತನ ಹಿರೇಕೆರೂರ, ಸುವರ್ಣ ಕಲ್ಲಕುಂಟ್ಲ, ಸತೀಶ ಮೆಹರವಾಡೆ, ಬಲ್ಲಾ ಶೇಟ್, ಬಸವರಾಜ ತೇರದಾಳ, ಮಂಜಣ್ಣ ಉಳ್ಳಿಕಾಶಿ, ರವಿ ಕದಂ, ಪ್ರವೀಣ ನಡಕಟ್ಟಿ, ರಾಜು ಮರಗುದ್ದಿ, ಬಸವರಾಜ ಕಲಾದಗಿ, ಬಾಬರ ಖೋಜೆ, ಶಂಕರ ಕುದುರಿ, ಇಮ್ತಯಾಜ್ ಬಿಜಾಪುರ, ಅಶೋಕ ಕಾಶೇನವರ, ವಿವಿಧ ಸಮಾಜದ ಪ್ರಮುಖರು, ಮಹಿಳಾ ಹೋರಾಟಗಾರರು, ಲಿಡ್‌ಕರ ಚರ್ಮಕುಟೀರಕಾರರು, ಆಟೋರಿಕ್ಷಾ ಚಾಲಕರು, ಬೀದಿಬದಿ ವ್ಯಾಪಾರಸ್ಥರು ಹಾಗೂ ಅಂಬೇಡ್ಕರ್ ಅಭಿಮಾನಿಗಳು ಪಾಲ್ಗೊಂಡಿದ್ದರು.