ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾನ: ಆರೋಪಿಗಳ ಬಂಧನಕ್ಕೆ ಆಗ್ರಹ

| Published : Mar 31 2024, 02:02 AM IST

ಸಾರಾಂಶ

ಗ್ರಾಮದ ದಲಿತ ಮುಖಂಡರು, ಯುವಕರು ಆಕ್ರೋಶ ವ್ಯಕ್ತಪಡಿಸಿ, ಟೈಯರ್ ಗೆ ಬೆಂಕಿ ಹಚ್ಚಿ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಪ್ರತಿಭಟನೆ

ಡಂಬಳ: ಡಂಬಳ ಗ್ರಾಮದ ಶುದ್ಧ ನೀರಿನ ಘಟಕದ ಬಳಿ ಹಾಕಲಾಗಿದ್ದ ಬ್ಯಾನರ್‌ನಲ್ಲಿರುವ ಡಾ. ಬಾಬಾಸಾಹೇಬ ಅಂಬೇಡ್ಕರ್‌ ಭಾವಚಿತ್ರಕ್ಕೆ ಕಿಡಿಗೇಡಿಗಳು ಮಣ್ಣು ಹಚ್ಚಿ ಅಪಮಾನ ಮಾಡಿರುವ ಘಟನೆ ಶನಿವಾರ ವರದಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ದಲಿತ ಮುಖಂಡರು, ಯುವಕರು ಆಕ್ರೋಶ ವ್ಯಕ್ತಪಡಿಸಿ, ಟೈಯರ್ ಗೆ ಬೆಂಕಿ ಹಚ್ಚಿ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಪ್ರತಿಭಟನೆ ನಡೆಸಿದರು.

ಘಟನೆ ವಿವರ: ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ರಾಯಭಾರಿ ಎಂದು ಘೋಷಣೆ ಮಾಡಿದ ಹಿನ್ನೆಲೆ ಅಳವಡಿಸಲಾಗಿದ್ದ ಬ್ಯಾನರ್ ನಲ್ಲಿ ಬಾಬಾಸಾಹೇಬ್‌ ಅಂಬೇಡ್ಕರ ಭಾವಚಿತ್ರ ಇತ್ತು, ಭಾವಚಿತ್ರಕ್ಕೆ ಕಿಡಿಗೇಡಿಗಳು (ಹಸಿ ಮಣ್ಣು) ಕೆಸರನ್ನು ಹಣೆ, ಮುಖದ ಮೇಲೆ ಬಳಿದಿದ್ದಾರೆ. ಈ ವಿಷಯ ಗ್ರಾಮದಲ್ಲಿ ತೀವ್ರ ಚರ್ಚೆಯಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ಹಿರಿಯ ಅಧಿಕಾರಿಗಳು ಭೇಟಿ: ಘಟನೆ ಮಾಹಿತಿ ಹಾಗೂ ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮುಂಡರಗಿ ಸಿಪಿಐ ಮಂಜುನಾಥ ಕುಸುಗಲ್ಲ ಹಾಗೂ ಸಮಾಜ ಕಲ್ಯಾಣ ಅಧಿಕಾರಿ ಉದಯಕುಮಾರ ಯಲಿವಾಳ, ಮುಂಡರಗಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ , ಪ್ರತಿಭಟನಾ ನಿರತರೊಂದಿಗೆ ಚರ್ಚಿಸಿ, ಘಟನೆ ವಿವರ ಪಡೆದು, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ, ಇದೊಂದು ಖಂಡನಾರ್ಹ ಘಟನೆಯಾಗಿದೆ ಎಂದು ಹೋರಾಟಗಾರರ ಮನವೊಲಿಸಲು ಪ್ರಯತ್ನಿಸಿದರು. ಇದಕ್ಕೆ ಮೊದಲು ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು ಆರೋಪಿಗಳನ್ನು ಬಂಧಿಸುವವರೆಗೂ ನಾವು ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಹಿರಿಯ ಅಧಿಕಾರಿಗಳು ಮತ್ತು ಗ್ರಾಮದ ಹಿರಿಯರ ಮಾತಿಗೆ ಒಪ್ಪಿಗೆ ಸೂಚಿಸಿ ಪ್ರತಿಭಟನೆ ಹಿಂದಕ್ಕೆ ಪಡೆದರು. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂದರ್ಭದಲ್ಲಿ ಉಪತಸೀಲ್ದಾರ ಸಿ.ಕೆ. ಬಳೋಟಗಿ, ಪಿಎಸ್‍ಐ ಸುಮಾ ಎಂ.ಗೊರಬಾಳ, ಪಿಡಿಓ ಶಶಿಧರ ಹೊಂಬಳ, ಎಎಸ್‍ಐ ವೀರಭದ್ರಪ್ಪ ತಂಟ್ರೆ, ದಲಿತ ಸಮುದಾಯ ಮುಖಂಡ ಮರಿಯಪ್ಪ ಸಿದ್ದಣ್ಣವರ, ಗ್ರಾಪಂ ಸದಸ್ಯ ಬಸವರಾಜ ಬಂಡಿ, ನಿಂಗಪ್ಪ ಮಾದರ, ಸುಶೀಲಾ ಚಲವಾದಿ, ಸೋಮಪ್ಪ ಹರಿಜನ, ನಿಂಗಪ್ಪ ದೊಡ್ಡಮನಿ, ಮರಿಯಪ್ಪ ದೊಡ್ಡಮನಿ, ಭೀಮಪ್ಪ ವಡ್ಡರ, ಶಿವಲಿಂಗೇಶ ಬೆಟಗೇರಿ, ಕುಮಾರ ಗೌಡಣ್ಣವರ, ಲಕ್ಷ್ಮಣ ಬೆಟಗೇರಿ, ಬಾಲಚಂದ್ರ ಸಿದ್ದಣ್ಣವರ, ಭೀಮಪ್ಪ ಪೂಜಾರ, ರವಿ ತಳಗೇರಿ ಸೇರಿದಂತೆ ಇತರರು ಇದ್ದರು.

ದಲಿತ ಸಮುದಾಯದ ಆಕ್ರೋಶ: ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ದಲಿತ ಸಮುದಾಯದ ಮುಖಂಡರು ಹಾಗೂ ಯುವಕರ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ನಮ್ಮ ಗ್ರಾಮದಲ್ಲಿ ಎಲ್ಲರೂ ಸಹೋದರರಂತೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುತ್ತಿದ್ದೇವೆ ಆದರೆ ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾನ ಮಾಡಿರುವುದು ಅನಿರೀಕ್ಷಿತ ಘಟನೆಯಾಗಿದ್ದು ಈ ಘಟನೆಯನ್ನು ಸಹಿಸಲು ಸಾಧ್ಯವಿಲ್ಲ. ಸರ್ವಜನಾಂಗದ ಧ್ವನಿಯಾಗಿರುವ ಡಾ. ಬಿ.ಆರ್. ಅಂಬೇಡ್ಕರ ಅವರ ಮಹತ್ವ ತಿಳಿಯದ ಕಿಡಗೇಡಿಗಳು ಈ ಕೃತ್ಯ ಮಾಡಿರುವ ಸಾಧ್ಯತೆ ಇದೆ ನಾವು ಕಾನೂನು ಗೌರವಿಸುತ್ತೇವೆ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಬೇಕು. ಇಂತಹ ಘಟನೆ ಗ್ರಾಮದಲ್ಲಿ ನಡೆಯದಂತೆ ಅಗತ್ಯ ಕ್ರಮ ತಗೆದುಕೊಳ್ಳಬೇಕು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿಸಿ ಕ್ಯಾಮೇರಾ ಅಳವಡಿಸಬೇಕು ಎಂದು ಒತ್ತಾಯಿಸಿದರು. ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಮಾಡುತ್ತೇವೆ ಎಲ್ಲರೂ ಕಾನೂನು ಗೌರವಿಸಿ ಗ್ರಾಮದಲ್ಲಿ ಶಾಂತಿ ನೆಲೆಸಲು ನಿಮ್ಮ ಪಾತ್ರ ಸಹಾಯ ಸಹಕಾರ ಮಹತ್ವದಾಗಿದೆ. ನಮ್ಮ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಿಪಿಐ ಮಂಜುನಾಥ ಕುಸಗಲ್ ದಲಿತ ಸಮುದಾಯದವರರಲ್ಲಿ ಮನವಿ ಮಾಡಿದಾಗ ಪ್ರತಿಭಟನೆ ಕೈ ಬಿಟ್ಟರು.