ಡಾ.ಅಂಬೇಡ್ಕರ್ ಪ್ರತಿಮೆಗೆ ಅವಮಾನ: ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ

| Published : Apr 23 2025, 12:39 AM IST

ಡಾ.ಅಂಬೇಡ್ಕರ್ ಪ್ರತಿಮೆಗೆ ಅವಮಾನ: ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ನಿರಂತರವಾಗಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವ ಕೆಲಸ ನಡೆಯುತ್ತಿದೆ. ರಾಜ್ಯ ಪೊಲೀಸ್ ಇಲಾಖೆ ನಿಷ್ಕ್ರಿಯಗೊಂಡಿದೆ. ದಲಿತರಿಂದ ಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಕೂಡಲೇ ಅಂಬೇಡ್ಕರ್ ಭಾವಚಿತ್ರವನ್ನು ಅವಮಾನಿಸಿರುವ ಕಿಡಿಗೇಡಿಗಳನ್ನು ಬಂಧಿಸಬೇಕು. ಇಲ್ಲವಾದರೆ ದಲಿತ ಒಕ್ಕೂಟದಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮೈಸೂರು ಜಿಲ್ಲೆಯ ವಾಜಮಂಗಲದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಎಸೆದು ಬೆಂಕಿಹಚ್ಚಿ ಏಸಿಗೆ ಬಳೆದು ಅವಮಾನಗೊಳಿಸಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿಸಬೇಕು ಎಂದು ದಸಂಸ ಒಕ್ಕೂಟದ ಸದಸ್ಯ ಬೊಮ್ಮರಾಜು ಒತ್ತಾಯಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ತವರು ಜಿಲ್ಲೆಯ ವಾಜಮಂಗಲದಲ್ಲಿ ಕಿಡಿಗೇಡಿಗಳು ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ. ಇದೊಂದು ದೇಶವೇ ತಲೆತಗ್ಗಿಸುವ ಕೃತ್ಯವಾಗಿದೆ ಎಂದು ಕಿಡಿಕಾರಿದರು.

ನಿರಂತರವಾಗಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವ ಕೆಲಸ ನಡೆಯುತ್ತಿದೆ. ರಾಜ್ಯ ಪೊಲೀಸ್ ಇಲಾಖೆ ನಿಷ್ಕ್ರಿಯಗೊಂಡಿದೆ. ದಲಿತರಿಂದ ಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಕೂಡಲೇ ಅಂಬೇಡ್ಕರ್ ಭಾವಚಿತ್ರವನ್ನು ಅವಮಾನಿಸಿರುವ ಕಿಡಿಗೇಡಿಗಳನ್ನು ಬಂಧಿಸಬೇಕು. ಇಲ್ಲವಾದರೆ ದಲಿತ ಒಕ್ಕೂಟದಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಿಡಿಗೇಡಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸದಿದ್ದರೆ ನೈತಿಕ ಹೊಣೆಹೊತ್ತು ಸಿಎಂ ಹಾಗೂ ಸಚಿವರಾದ ಪರಮೇಶ್ವರ್ ಹಾಗೂ ಮೈಸೂರು ಜಿಲ್ಲೆ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕಣಿವೆ ರಾಮು ಮಾತನಾಡಿ, ದೇಶದಲ್ಲಿಯೇ ಅತಿಹೆಚ್ಚು ಅಂಬೇಡ್ಕರ್ ಪ್ರತಿಮೆಗಳಿವೆ. ಪ್ರತಿಮೆಗಳನ್ನು ವಿಕೃತಗೊಳಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಜತೆಗೆ ಪ್ರತಿಮೆಗಳನ್ನು ರಕ್ಷಣೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸ ಕಾನೂನು ಜಾರಿಗೊಳಿಸಲು ಸಮಿತಿ ರಚನೆ ಮಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡರಾದ ಜೆ.ಅಂದಾನಯ್ಯ, ಹಾಳಪ್ಪ, ಕಣಿವೆಯೋಗೇಶ್, ಬೇವನಕುಪ್ಪೆದೇವರಾಜು, ನಾಗರಾಜು, ಅರಳಕುಪ್ಪೆದೇವರಾಜು, ಇಳ್ಳೇನಹಳ್ಳಿ ದೇವರಾಜು ಸೇರಿದಂತೆ ಹಲವರು ಇದ್ದರು.

ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಿಗೆ ಕೌಶಲ್ಯ ತರಬೇತಿ

ಮಂಡ್ಯ: ಜಿಲ್ಲೆಯ ಸಫಾಯಿ ಕರ್ಮಚಾರಿ ಆಯೋಗದಿಂದ ಗುರುತಿಸಲ್ಪಟ್ಟು ಗುರುತಿನ ಚೀಟಿ ಪಡೆದಿರುವ 18 ರಿಂದ 35 ವಯೋಮಾನದೊಳಗಿನ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳು ಅಥವಾ ಅವರ ಕುಟುಂಬಸ್ಥರಿಗೆ ಕೌಶಲ್ಯ ತರಬೇತಿ ನೀಡಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಆಸಕ್ತರ ಪಟ್ಟಿ ಸಿದ್ಧಪಡಿಸಲು ಸೂಚಿಸಲಾಗಿದೆ. ಈ ಸಂಬಂಧ ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಬಂದೀಗೌಡ ಲೇಔಟ್‌ನ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ ಅಥವಾ ದೂ-08232-295010/ ಮೊ-8073264498 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.