ದಸರಾ ಕಾರ್ಯಕ್ರಮದಲ್ಲಿ ದೈವಕ್ಕೆ ಅಪಮಾನ: ಅಸಮಾಧಾನ

| Published : Oct 08 2024, 01:14 AM IST

ಸಾರಾಂಶ

ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೈವ ನರ್ತನವನ್ನು ಮನರಂಜನೆಗಾಗಿ ಬಳಸಿಕೊಂಡು ಅಪಮಾನಿಸಲಾಗಿದೆ ಎಂದು ದೈವ ಆರಾಧಕರು ಮತ್ತು ದೈವ ನರ್ತಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಮಡಿಕೇರಿ : ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೈವ ನರ್ತನವನ್ನು ಮನರಂಜನೆಗಾಗಿ ಬಳಸಿಕೊಂಡು ಅಪಮಾನಿಸಲಾಗಿದೆ ಎಂದು ದೈವ ಆರಾಧಕರು ಹಾಗೂ ದೈವ ನರ್ತಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸಂಘದ ಸ್ಥಾಪಕಾಧ್ಯಕ್ಷ ಪಿ.ಎಂ.ರವಿ ಅವರು ದೈವ ನರ್ತನ ಎನ್ನುವುದು ತುಳುನಾಡು ಹಾಗೂ ಕರಾವಳಿ ಭಾಗದ ದೈವಶಕ್ತಿಯ ಆರಾಧನೆ, ಸಂಸ್ಕೃತಿ ಮತ್ತು ಸಂಪ್ರದಾಯವಾಗಿದೆ. ಇದನ್ನು ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಮನರಂಜನೆಗಾಗಿ ಬಳಸಿಕೊಂಡು ದೈವ ಆರಾಧಕರು ಹಾಗೂ ದೈವ ನರ್ತಕರಿಗೆ ಮಾನಸಿಕವಾಗಿ ನೋವುಂಟು ಮಾಡುವುದು ಖಂಡನೀಯ ಎಂದರು.

ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ವೇದಿಕೆಯಲ್ಲಿ ನೃತ್ಯ ತಂಡಗಳು ದೈವ ನರ್ತನವನ್ನು ತಮಗಿಷ್ಟ ಬಂದಂತೆ ಬಳಸಿಕೊಂಡು ಸಂಪ್ರದಾಯಕ್ಕೆ ಅಪಚಾರವೆಸಗಿದ್ದಾರೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಖಂಡನೆ ವ್ಯಕ್ತವಾಗಿದೆ. ಕೊಡಗಿನಲ್ಲಿ ನಮ್ಮ ಸಂಘ ಮನರಂಜನೆಗಾಗಿ ದೈವ ವೇಷ ತೊಟ್ಟು ನರ್ತನ ಮಾಡುವುದನ್ನು ಅನೇಕ ಬಾರಿ ವಿರೋಧಿಸುತ್ತಲೇ ಬಂದಿದೆ. ಶಾಲಾ ಕಾಲೇಜುಗಳಿಗೆ ಮನವಿ ಮಾಡಿಕೊಳ್ಳಲಾಗಿದೆ.

ಹಿಂದೆ ಸರ್ಕಾರ ಕೂಡ ಆದೇಶ ಹೊರಡಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಪ್ರದಾಯಕ್ಕೆ ವಿರುದ್ಧವಾಗಿ ದೈವ ನರ್ತನಗಳನ್ನು ಮಾಡದಂತೆ ಸೂಚನೆ ನೀಡಿದೆ. ಆದರೂ ಈ ಬಾರಿಯ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೈವ ನರ್ತನ ಪುನರಾವರ್ತನೆಯಾಗಿರುವುದು ದೈವ ಆರಾಧಕರು ಹಾಗೂ ದೈವ ನರ್ತಕರ ಭಾವನೆಗೆ ವಿರುದ್ಧವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕುರಿತು ಸಂಘದ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಜಿಲ್ಲೆಯಲ್ಲಿ ಎಲ್ಲೂ ದೈವ ಆರಾಧನೆ ಮತ್ತು ದೈವ ನರ್ತನವನ್ನು ಮನರಂಜನೆಗಾಗಿ ಬಳಸದಂತೆ ಅಧಿಕೃತ ಸುತ್ತೋಲೆ ಹೊರಡಿಸಲು ಕೋರುವುದಾಗಿ ಪಿ.ಎಂ.ರವಿ ತಿಳಿಸಿದರು.

ದೈವ ನರ್ತನವನ್ನು ಮನರಂಜನೆಗಾಗಿ ಬಳಸಿಕೊಳ್ಳುತ್ತಿರುವುದನ್ನು ಸಂಘ ಗಂಭೀರವಾಗಿ ಪರಿಗಣಿಸಿದೆ. ಮುಂದಿನ ದಿನಗಳಲ್ಲಿ ಈ ಬೆಳವಣಿಗೆಯ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ಧವಿದೆ ಎಂದು ಎಚ್ಚರಿಕೆ ನೀಡಿದರು.

ವೀರನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ದೈವ ಆರಾಧಕರು ಹಾಗೂ ದೈವ ನರ್ತಕರ ಸಂಘದ ಜಿಲ್ಲಾಧ್ಯಕ್ಷ ಸದಾಶಿವ ರೈ, ಪ್ರಧಾನ ಕಾರ್ಯದರ್ಶಿ ಉಮೇಶ್, ಸಂಘಟನಾ ಕಾರ್ಯದರ್ಶಿ ರಮೇಶ್ ಹೆಬ್ಬೆಟ್ಟಗೇರಿ ಹಾಗೂ ಖಜಾಂಚಿ ಜನಾರ್ಧನ ಬಿ.ಎ ಉಪಸ್ಥಿತರಿದ್ದರು.