ಹಡಪದ ಸಮುದಾಯಕ್ಕೆ ಅವಹೇಳನ, ಕ್ರಮಕ್ಕೆ ಒತ್ತಾಯ

| Published : Nov 13 2025, 01:30 AM IST

ಸಾರಾಂಶ

ಯಾದಗಿರಿ ಜಿಲ್ಲೆಯ ಕೊಡೆಕಲ್ ಗ್ರಾಮದ ವಿದ್ಯಾರ್ಥಿನಿ ಸೌಜನ್ಯ ಹಡಪದ ಸಾವಿನ ಬಗ್ಗೆ ನ್ಯಾಯ ಒದಗಿಸಬೇಕು

ಗಂಗಾವತಿ: ವಿಪ ಸದಸ್ಯ ಸಿ.ಟಿ. ರವಿ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಾರ್ವಜನಿಕ ಸಭೆಗಳಲ್ಲಿ ಹಿಂದುಳಿದ ವರ್ಗದ ಹಡಪದ ಸಮಾಜಕ್ಕೆ ಅವಹೇಳನವಾಗಿ (ಹಜಾಮರೆಂದು) ನಿಂದನೆ ಮಾಡಿದ್ದು ಕೂಡಲೆ ಕ್ರಮಕೈಗೊಳ್ಳಬೇಕೆಂದು ಹಡಪದ ಅಪ್ಪಣ್ಣ ಸಮಾಜದವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ತಹಸೀಲ್ದಾರರಿಗೆ ಮನವಿ ಪತ್ರ ಅರ್ಪಿಸಿದ ಹಡಪದ ಅಪ್ಪಣ್ಣ ಸಮಾಜದ ತಾಲೂಕಾಧ್ಯಕ್ಷ ನಿರುಪಾದಿ ಕೇಸರಹಟ್ಟಿ ಮಾತನಾಡಿ, ಜವಾಬ್ದಾರಿಯುತ ಸ್ಥಾನಗಳಲ್ಲಿರುವ ವಿಪ ಸದಸ್ಯ ಸಿ.ಟಿ. ರವಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವಹೇಳನ ಮಾಡಿದ್ದಾರೆ. ಹಜಾಮರೆಂಬ ಪದ ಈ ಹಿಂದೆ ಇದ್ದ ಸರ್ಕಾರ ನಿಷೇಧ ಮಾಡಿ ಕಾನೂನು ಜಾರಿಗೆ ತಂದಿದೆ. ಆದರೆ ಜನಪ್ರತಿನಿಧಿಗಳಾಗಿರುವ ಈ ಮುಖಂಡರು ಅವಹೇಳನ ಮಾಡಿದ್ದು, ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

ಯಾದಗಿರಿ ಜಿಲ್ಲೆಯ ಕೊಡೆಕಲ್ ಗ್ರಾಮದ ವಿದ್ಯಾರ್ಥಿನಿ ಸೌಜನ್ಯ ಹಡಪದ ಸಾವಿನ ಬಗ್ಗೆ ನ್ಯಾಯ ಒದಗಿಸಬೇಕು ಮತ್ತು ಕುಟುಂಬಕ್ಕೆ ಸರ್ಕಾರದ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಮಾಜ ಮುಖಂಡರಾದ ಮಂಜುನಾಥ ಕನಕಗಿರಿ, ಹಡಪದ ಅಪ್ಪಣ್ಣ ಸಮಾಜದ ಯುವ ಘಟಕ ಅಧ್ಯಕ್ಷ ವಿಕ್ರಮ ಪಾಟೀಲ, ಪದಾಧಿಕಾರಿಗಳಾದ ಮಹಾಂತೇಶ ಹಣವಾಳ, ವಿರೂಪಣ್ಣ ಹೇರೂರು, ಶಿವಕುಮಾರ, ವೀರೇಶ ಹಣವಾಳ, ಭರತ, ಮಂಜುನಾಥ ಬೇಣಕಲ್, ಮಾರುತಿ ಸರಿಗಮ, ಅಮರೇಶ, ವೀರಭದ್ರಪ್ಪ ಹೇರೂರು, ಸಿದ್ದೇಶ ಹಿರೇಜಂತಕಲ್ ಸೇರಿದಂತೆ ಇತರರು ಇದ್ದರು.