ಸಾರಾಂಶ
ಕೊಳ್ಳೇಗಾಲದಲ್ಲಿ ಇತ್ತೀಚೆಗೆ ಸಿಇಟಿ ಪರೀಕ್ಷೆಯಲ್ಲಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಜನಿವಾರ ತೆಗೆಸಿದ ಕ್ರಮ ಖಂಡಿಸಿ ಬ್ರಾಹ್ಮಣ ಸಮಾಜದ ಮುಖಂಡರು ಪ್ರತಿಭಟಿಸಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಸಿಇಟಿ ಪರೀಕ್ಷೆಯಲ್ಲಿನ ಸಮಾಜದ ವಿದ್ಯಾರ್ಥಿಗಳು ಕೆಲವೆಡೆ, ಹಲವು ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲು ಬಂದ ವೇಳೆ ಅವರು ಹಾಕಿದ್ದ ಜನಿವಾರ ಕಳಚಿ ಕಸದ ಬುಟ್ಟಿಗೆ ಹಾಕಿಸಿದ ಅಧಿಕಾರಿಗಳ ಕ್ರಮ ಖಂಡಿಸಿ, ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಮಂಗಳವಾರ ಪ್ರತಿಭಟಿಸಲಾಯಿತು.ರಾಘವೇಂದ್ರ ಮಠದ ಪ್ರಧಾನ ಅರ್ಚಕ ಹಾಗೂ ಸಮಾಜದ ಅಧ್ಯಕ್ಷ ಶ್ರೀಹರಿ ಮಾತನಾಡಿ, ಜನಿವಾರ ಎಂಬುದು ನಮ್ಮ ಸಮಾಜದ ಅಮೂಲ್ಯ ಆಸ್ತಿ, ಅದಕ್ಕೆ ಹೆಚ್ಚಿನ ಪೂಜ್ಯನೀಯ ಸ್ಥಾನ ನೀಡಿದ್ದೇವೆ, ಹೀಗಾಗಿ ಜನಿವಾರ ತೆಗೆಸಿದ ಕ್ರಮ ಸರಿಯಲ್ಲ, ಇದು ನಮ್ಮ ಸಮಾಜಕ್ಕೆ ಮಾಡಿದ ದ್ರೋಹ ಎಂದರು. ವಕೀಲ ನಿರ್ಮಲ ಮಧುಸೂದನ್ ಮಾತನಾಡಿ, ಜನಿವಾರ ಎಂಬುದು ನಮ್ಮಲ್ಲಿ ಪವಿತ್ರ ಸ್ಥಾನ ನೀಡಲಾಗಿದೆ.ಇದನ್ನು ಕತ್ತರಿಸಿ ಕಸದ ಬುಟ್ಟಿಗೆ ಎಸೆದ ಕ್ರಮ ನಿಜಕ್ಕೂ ಅಮಾನವೀಯ ಘಟನೆ. ಈ ಬೆಳಣಿಗೆಯನ್ನು ವಿವಿಧ ಕೋಮಿನ ಸಮಾಜ ಸಹ ಖಂಡಿಸಬೇಕಿದೆ ಎಂದರು. ಮಹಿಳೆಯರು ಹಾಕುವ ಮಾಂಗಲ್ಯ, ಕಾಲುಂಗುರ ಸೇರಿದಂತೆ ಇತರೆ ವಸ್ತುಗಳು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಸ್ಥಾನ ಪಡೆದುಕೊಂಡಿದೆ. ಅದೇ ರೀತಿ ಜನಿವಾರವೂ ಪವಿತ್ರ, ಇಂತಹ ಕೃತ್ಯ ಎಸಗಿದವರ ವಿರುದ್ಧ ಸರ್ಕಾರ ದಿಟ್ಟ ಕ್ರಮಕೈಗೊಳ್ಳಬೇಕು, ಇಲ್ಲದಿದ್ದರೆ ಸಮಾಜವು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು. ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಸಮಾಜದ ಉಪಾಧ್ಯಕ್ಷ ಉದಯಕುಮಾರ್, ಕಾರ್ಯದರ್ಶಿ ಚಂದ್ರಚೂಡಿ, ವೆಂಕಟೇಶ್, ರಂಗನಾಥ್, ರಾಜು, ಮಂಜುನಾಥ್, ನಾಗೇಂದ್ರ ಭಟ್ಟ ಶಶಿಧರ್, ಶಿವರಾಮ್, ಮಧುಸೂದನ್, ಶ್ರೀಹರಿ, ಮಲ್ಲಿಕಾ, ಗಂಗೋತ್ರಿ, ಆಶಾ, ಲಕ್ಷೀ, ರೂಪ ಹಲವರು ಇದ್ದರು.