ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುರುಬ ಸಮುದಾಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಕಾರಿಯಾಗಿ ನಿಂದಿಸಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಬಸರಾಳು ಗ್ರಾಮ ಬಂದ್ ಬುಧವಾರ ಯಶಸ್ವಿಯಾಯಿತು.ಬಂದ್‌ಗೆ ವರ್ತಕರು ಅಂಗಡಿ ಮುಂಗಟ್ಟು ಮುಚ್ಚಿ ಸ್ವಯಂ ಪ್ರೇರಿತವಾಗಿ ಬೆಂಬಲ ವ್ಯಕ್ತಪಡಿಸಿದರು. ಬಂದ್ ಹಾಗೂ ಪ್ರತಿಭಟನೆಯಿಂದಾಗಿ ನಾಗಮಂಗಲ- ಮಂಡ್ಯ ಹೆದ್ದಾರಿಯಲ್ಲಿ ಕೆಲಕಾಲ ವಾಹನಗಳ ಸಂಚಾರದಲ್ಲಿ ಕೆಲಕಾಲ ಅಸ್ತವ್ಯಸ್ತ ಉಂಟಾಯಿತು.
ಜಿಲ್ಲಾ ಕುರುಬರ ಸಂಘ, ಮಂಡ್ಯ ಜಿಲ್ಲಾ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಸ್ಥಳೀಯರು ನೀಡಿದ್ದ ಬಂದ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕುರುಬ ಸಮಾಜದವರು ಭಾಗವಹಿಸಿದ್ದರು. ಗ್ರಾಮದ ಕನಕ ಭವನದಿಂದ ಪ್ರಮುಖ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೂಲಕ ಜೋಡಿ ಟಗರುಗಳ ಜೊತೆ ಮೆರವಣಿಗೆ ನಡೆಸಿದರು.ಬಂದ್ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಮುಖಂಡ ಕೋಡಿಕೊಪ್ಪಲು ನಾಗೇಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುರುಬ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿರುವ ಬಸರಾಳು ಗ್ರಾಮದ ಹೇಮಾವತಿ ಬಡಾವಣೆಯ ಶಾನುಭೋಗನಹಳ್ಳಿ ಕುಮಾರ್ ಮತ್ತು ಬೆನ್ನಹಟ್ಟಿಯ ಮಹೇಶ್ ಅವರನ್ನು ಬಂಧಿಸಿ ಅವರ ವಿರುದ್ಧ ಗೂಂಡಾ ಕಾಯ್ದೆ ಮಾಡಿ ಕಾನೂನಿನಲ್ಲಿ ಅತಿ ಹೆಚ್ಚು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಬೇರೆ ಯಾರೂ ಸಹ ಯಾವ ಜಾತಿಯವರ ಬಗ್ಗೆ ಏನು ಮಾತನಾಡಬಾರದು. ಬೇರೆಯವರಿಗೆ ಪಾಠ ಆಗುವ ರೀತಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲಿ ಒಕ್ಕಲಿಗರು ಹಾಗೂ ಕುರುಬರು ವಿಶ್ವಾಸದಿಂದ ಇದ್ದೇವೆ. ಅವಹೇಳನಕಾರಿಯಾಗಿ ನಿಂದಿಸಿರುವ ಕಿಡಿಗೇಡಿಗಳ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.ಕಾಂಗ್ರೆಸ್ ಮುಖಂಡ ಕರಡಿಕೊಪ್ಪಲು ಕೆ.ಸಿ.ಪುಟ್ಟಸ್ವಾಮಿಗೌಡ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಎಲ್ಲಾ ಸಮಾಜಕ್ಕೂ ನ್ಯಾಯ ಕೊಡುವವರು ಅವರನ್ನು ಒಕ್ಕಲಿಗರ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಕುರುಬರ ಸಂಘದಲ್ಲಿ ಸಂಗೊಳ್ಳಿರಾಯಣ್ಣ, ಕನಕದಾಸರ ಭಾವಚಿತ್ರ ನೋಡಿದ್ದೇವೆ. ಆದರೆ, ಸಿದ್ದರಾಮಯ್ಯ ಅವರನ್ನು ಕುರುಬ ಸಮಾಜ ದೇವರ ರೂಪದಲ್ಲಿ ಕಾಣುತ್ತಿದ್ದೇವೆ. ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕುಮಾರ್ ಹಾಗೂ ಮಹೇಶ್ ಅವರಿಗೆ ತಕ್ಕ ಶಿಕ್ಷೆ ಆಗಬೇಕು. ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ನಂತರ ಪ್ರತಿಭಟನಾಕಾರರು ಬಸರಾಳು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಬಂಧಿತ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ತೆರೆಯುವಂತೆ ಒತ್ತಾಯಿಸಿ ಇಬ್ಬರು ಆರೋಪಿಗಳು ಬಹಿರಂಗ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದರು.ನಂತರ ಪ್ರತಿಭಟನಾಕಾರರನ್ನು ಸಮಧಾನ ಮಾಡಿದ ಎಎಸ್ಪಿಗಳಾದ ತಿಮ್ಮಯ್ಯ ಹಾಗೂ ಗಂಗಾಧರಸ್ವಾಮಿ ಅವರು ಬಂಧಿತ ಆರೋಪಿಗಳ ಮೇಲೆ ಈಗಾಗಲೇ ಗೂಂಡಾ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿರುವುದಾಗಿ ಮಾಹಿತಿ ನೀಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಅಪ್ಪಾಜಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕಂಬದಹಳ್ಳಿ ಪುಟ್ಟಸ್ವಾಮಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಕೆ.ಹೆಚ್. ನಾಗರಾಜು, ಮುಡಾ ನಿರ್ದೇಶಕ ಎನ್.ದೊಡ್ಡಯ್ಯ, ಸಾತನೂರು ಕೃಷ್ಣ, ರಾಜೇಶ್, ಜಿಪಂ ಮಾಜಿ ಸದಸ್ಯ ಪ್ರಸನ್ನ, ಸಿಎಂ ದ್ಯಾವಪ್ಪ, ಬಸರಾಳು ಶಂಕರೇಗೌಡ, ರಾಜು, ಸಾವಿತ್ರಮ್ಮ,ಮಹೇಶ್, ಶೈಲೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.